Advertisement

ಜಿಪಂ ಕ್ಷೇತ್ರ ಪುನರ್‌ ವಿಂಗಡಣೆ ಕಾರ್ಯ ಪೂರ್ಣ

02:34 PM Sep 15, 2022 | Team Udayavani |

ಗಜೇಂದ್ರಗಡ: ಜಿಲ್ಲಾಡಳಿತ ಜಿಪಂ, ತಾಪಂ ಕ್ಷೇತ್ರ ಪುನರ್‌ವಿಂಗಡಣೆಗಾಗಿ ಆಯಾ ತಾಲೂಕುಗಳಿಗೆ ಸೂಚಿಸಿದ್ದರ ಹಿನ್ನೆಲೆಯಲ್ಲಿ, ಗಜೇಂದ್ರಗಡ ತಾಲೂಕಿನ ಕ್ಷೇತ್ರ ಪುನರ್‌ ವಿಂಗಡಣೆ ಕಾರ್ಯ ಅಂತಿಮ ಹಂತ ತಲುಪಿದ್ದು, ತಾಲೂಕಿಗೆ ಹೊಸದಾಗಿ ರಾಜೂರ ಜಿಪಂ ಕ್ಷೇತ್ರ ಸೇರ್ಪಡೆಯಾಗಿದೆ.

Advertisement

ಹೌದು, ಚುನಾವಣಾ ಆಯೋಗ ಮುಂಬರುವ ದಿನಗಳಲ್ಲಿ ನಡೆಯಲಿರುವ ಜಿಪಂ, ತಾಪಂ ಚುನಾವಣೆಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಯಾ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಅದರಂತೆಯೇ, ಜಿಲ್ಲಾಡಳಿತ ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಕಾರ್ಯವನ್ನು ತೀವ್ರಗತಿಯಲ್ಲಿ ಕೈಗೊಳ್ಳಲು ಸೂಚಿಸಿತ್ತು. ಅದರನ್ವಯ ಗಜೇಂದ್ರಗಡ ತಾಲೂಕು ಪುನರ್‌ ವಿಂಗಡಣೆ ಬಳಿಕ 3 ಜಿಪಂ, 9 ತಾಪಂ ಕ್ಷೇತ್ರಗಳು ಬರಲಿವೆ ಎಂಬ ಮಾಹಿತಿ ದೊರೆತಿದೆ.

ತಾಪಂ ಕ್ಷೇತ್ರಗಳ ಸಂಖ್ಯೆ ಇಳಿಕೆ: ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಆಧರಿಸಿ ಗಜೇಂದ್ರಗಡ ತಾಲೂಕು ಆಡಳಿತ ಜಿಲ್ಲಾ ಮತ್ತು ತಾಪಂಗಳ ಸಂಖ್ಯೆಯನ್ನು ನಿಗದಿಪಡಿಸಿದ್ದು, ತಾಪಂ ಕ್ಷೇತ್ರಗಳ ಸಂಖ್ಯೆ 11 ರಿಂದ 9ಕ್ಕೆ ಇಳಿಕೆಯಾಗುತ್ತಿದೆ. ಜಿಪಂ ಕ್ಷೇತ್ರಗಳ ಸಂಖ್ಯೆ 2ರಿಂದ 3ಕ್ಕೆ ಏರಿಕೆಯಾಗಿದ್ದು, ತಾಪಂ, ಜಿಪಂ ಕ್ಷೇತ್ರಗಳ ಗಡಿ ಮತ್ತು ನಕಾಶೆ ಸಿದ್ಧಪಡಿಸಲಾಗಿದೆ.

ಸೂಡಿ ಜಿಪಂ: ಶಾಂತಗೇರಿ, ಸರ್ಜಾಪೂರ, ಬೊಮ್ಮಸಾಗರ, ಮುಶಿಗೇರಿ, ನೆಲ್ಲೂರ, ನೆಲ್ಲೂರ ಪ್ಯಾಟಿ, ಚಿಕ್ಕಳಗುಂಡಿ, ಇಟಗಿ, ಕಳಕಾಪೂರ, ಸೂಡಿ, ದ್ಯಾಮುಣಸಿ ಸೇರಿ ಒಟ್ಟು 11 ಗ್ರಾಮಗಳು 25701 ಜನಸಂಖ್ಯೆ ಹೊಂದಿವೆ.

ನಿಡಗುಂದಿ ಜಿಪಂ: ರಾಮಾಪೂರ, ಹೊಸರಾಮಾಪೂರ, ಹಿರೇಕೊಪ್ಪ, ಚಿಲಝರಿ, ಪುರ್ತಗೇರಿ, ಕೊಡಗಾನೂರ, ವೀರಾಪೂರ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ, ಮಾರನಬಸರಿ, ಬೂದಿಹಾಳ ಸೇರಿ ಒಟ್ಟು 12 ಗ್ರಾಮಗಳು 19434 ಜನಸಂಖ್ಯೆ ಹೊಂದಿವೆ.

Advertisement

ಹೊಸದಾಗಿ ರಾಜೂರ ಜಿಪಂ: ರಾಜೂರ, ಕಾಲಕಾಲೇಶ್ವರ, ಬೈರಾಪೂರ, ಬೈರಾಪೂರ ತಾಂಡಾ, ದಿಂಡೂರ, ಲಕ್ಕಲಕಟ್ಟಿ, ನಾಗೇಂದ್ರಗಡ, ಕಲ್ಲಿಗನೂರ, ಗುಳಗುಳಿ, ಹಿರೇಅಳಗುಂಡಿ, ಬೇವಿನಕಟ್ಟಿ, ಅಮರಗಟ್ಟಿ, ರುದ್ರಾಪೂರ, ಗೋಗೇರಿ, ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಮಾಟರಂಗಿ, ಕುಂಟೋಜಿ, ಮ್ಯಾಕಲಝರಿ, ಬೆಣಚಮಟ್ಟಿ, ಗೌಡಗೇರಿ, ಜಿಗೇರಿ ಹಾಗೂ ವದೆಗೋಳ ಸೇರಿ 23 ಗ್ರಾಮಗಳು 29055 ಜನಸಂಖ್ಯೆ ಹೊಂದಿವೆ.

ಈ ಮೊದಲು ಸೂಡಿ ಮತ್ತು ನಿಡಗುಂದಿ ಎರಡೇ ಜಿಪಂ ಕ್ಷೇತ್ರಗಳಿದ್ದವು. ಆದರೆ, ರಾಜೂರ ಹೊಸದಾಗಿ ಸೇರ್ಪಡೆಯಾಗಿದೆ. ಇದರ ಜತೆಗೆ ತಾಲೂಕಿನಲ್ಲಿ 2 ತಾಪಂ ಕ್ಷೇತ್ರಗಳು ಕಡಿಮೆಯಾಗಿವೆ. ತಾಪಂ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ರಾಜೂರಗೆ ಜಿಪಂ ಗರಿ: ಭೌಗೋಳಿಕವಾಗಿ ಬೆಳೆದಿರುವ ರಾಜೂರ ಗ್ರಾಮಕ್ಕೆ ಜಿಪಂ ಕ್ಷೇತ್ರ ನೀಡುವಂತೆ ಸಾರ್ವಜನಿಕರಿಂದ ಹಲವಾರು ಮನವಿಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದವು. ಅದರನ್ವಯ ಈ ಹಿಂದೆ ರಾಜೂರ ಗ್ರಾಪಂ ನಿಡಗುಂದಿ ಜಿಪಂಗೆ ಒಳಪಟ್ಟಿತ್ತು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕೆ ರಾಜೂರ ಗ್ರಾಪಂಗೆ ಜಿಪಂ ಕ್ಷೇತ್ರದ ಗರಿ ಒಲಿದಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಜನಸಂಖ್ಯೆ ಆಧಾರದಲ್ಲಿ ವಿಂಗಡಣೆ: ಎಲ್ಲ ಕ್ಷೇತ್ರಗಳ ಸಂಖ್ಯೆಯನ್ನು ಜನಸಂಖ್ಯೆ ಆಧಾರದ ಮೇಲೆ ಜಿಪಂ ಕ್ಷೇತ್ರಗಳ ಹೆಚ್ಚಳ ಹಾಗೂ ತಾಪಂ ಕ್ಷೇತ್ರಗಳ ಕಡಿತ ಮಾಡಿ ನಿಗದಿಪಡಿಸಿದೆ. ಮಾರ್ಗಸೂಚಿಗಳನ್ವಯ ಕ್ಷೇತ್ರಗಳ ನಕ್ಷೆ ಗುರುತಿಸಿದ್ದಾರೆ.

ಪುನರ್‌ ವಿಂಗಡಣೆಗೆ ಮಾನದಂಡ: ಆಯಾ ತಾಲೂಕಿನ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಗಡಿ ಗುರುತಿಸಬೇಕು. ಈ ನಿಟ್ಟಿನಲ್ಲಿ ನಿಗದಿಪಡಿಸಿದ ಗಡಿ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಾದಲ್ಲಿ ಪಕ್ಕದ ಗ್ರಾಮಗಳನ್ನು ವಿಭಜಿಸದೆ ಸಂಪೂರ್ಣವಾಗಿ ಸೇರಿಸಿಕೊಂಡು ಕ್ಷೇತ್ರ ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next