ದಾವಣಗೆರೆ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಚಲೋ ನಡೆಸಿದ್ದಾರೆ.
ನಗರದ ಲೋಕಿಕೆರೆ ರಸ್ತೆಯ ವಿಮಾನಮಟ್ಟಿ ಗಣಪತಿ ದೇವಸ್ಥಾನದಿಂದ ಜಿಲ್ಲಾ ಪಂಚಾಯಿತಿಯವರೆಗೆ ಪಂಚಾಯತ್ ಚಲೋ ನಡೆಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಕರವಸೂಲಿಗಾರ, ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಸಿ ಗ್ರೂಪ್ ಹಾಗೂ ವಾಟರ್ ಮ್ಯಾನ್, ಸ್ವಚ್ಚತಾಗಾರರನ್ನು ಡಿ ಗ್ರೂಪ್ ನೌಕರರೆಂದು ಪರಿಗಣನೆ, ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಇಎಫ್, ಎಂಎಸ್ ಮೂಲಕ ವೇತನ ಪಾವತಿ, ಸರ್ಕಾರದ ಆದೇಶದಂತೆ 14ನೇ ಹಣಕಾಸು ಯೋಜನೆಯಡಿ ಆಡಳಿತ ವೆಚ್ಚದಲ್ಲಿ ಶೇ. 10ರಷ್ಟು ಹಾಗೂ ಸ್ಥಳೀಯ ತೆರಿಗೆ ಸಂಗ್ರಹದಲ್ಲಿ ಶೇ. 10ರಷ್ಟು ಹಣವನ್ನು ಸಿಬ್ಬಂದಿ ವೇತನಕ್ಕೆ ಬಳಕೆ, ಸಂಬಳಕ್ಕಾಗಿ 890 ಕೋಟಿ ಹಣದ ಅವಶ್ಯಕತೆ ಇದ್ದು, 518 ಕೋಟಿ ಮಾತ್ರ ಹಿಂದಿನ ಸರ್ಕಾರ ಮಂಜೂರಾತಿ ಮಾಡಿದ್ದು ಸಂಬಳಕ್ಕಾಗಿ ಬೇಕಾರುವ 372 ಕೋಟಿ ರೂ ಮಂಜೂರು ಮಾಡಲು ಅವರು ಒತ್ತಾಯಿಸಿದರು.
ಕೆಲವು ಗ್ರಾಮ ಪಂಚಾಯಿತಿಗಳಲ್ಲಿ 10 ರಿಂದ 15 ತಿಂಗಳ ಬಾಕಿ ಇರುವ ವೇತನ ನೀಡಬೇಕು, ಗ್ರಾಮ ಪಂಚಾಯಿತಿ ನೌಕರರ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯ ತಡೆ, ನಿವೃತ್ತಿ ವೇತನ, ಗಳಿಕೆ ರಜೆ,ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚವನ್ನು ಸರ್ಕಾರಿ ನೌಕರರಿಗೆ ನೀಡುವಂತೆ ಎಲ್ಲಾ ಪಂಚಾಯಿತಿ ನೌಕರರಿಗೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರು ಈ ಸಂದರ್ಭದಲ್ಲಿ ಆಗ್ರಹಿಸಿದರು. ಗ್ರಾ.ಪಂ. ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ಉಮೇಶ್, ಸಂಘದ ಖಜಾಂಚಿ ಆರ್.ಎಸ್.ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಾಚಾರ್, ಸಹ ಕಾರ್ಯದರ್ಶಿ ಬೇತೂರು ಬಸವರಾಜು, ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.