ಮಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಜನಪ್ರತಿನಿಧಿಗಳ ಆಡಳಿತ ಮುಕ್ತಾಯವಾಗಿ ಬರೋಬ್ಬರಿ ಎರಡು ವರ್ಷಗಳೇ ಕಳೆದಿವೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ 2016ರ ಫೆಬ್ರವರಿಯಲ್ಲಿ ನಡೆದಿತ್ತು. ಜಿ.ಪಂ.ನ ಚುನಾಯಿತ ಅವಧಿ 2021ರ ಎ. 27ಕ್ಕೆ ಮುಕ್ತಾಯಗೊಂಡು 5 ವರ್ಷಗಳ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿತ್ತು. ಅದಾಗಲೇ ಚುನಾವಣೆ ನಡೆಯಬೇಕಿತ್ತಾದರೂ ವಿವಿಧ ಕಾರಣಗಳಿಂದ ಮುಂದೂಡಿಕೆಯಾಗಿತ್ತು. ಹೀಗಾಗಿ 2 ವರ್ಷದಿಂದ ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿ ವರ್ಗವೇ ಜಿ.ಪಂ., ತಾ.ಪಂ.ಗಳಲ್ಲಿ ಆಡಳಿತ ನಡೆಸುವಂತಾಗಿದೆ.
ದ.ಕ. ಜಿಲ್ಲೆಯಲ್ಲಿ ಮಂಗಳೂರು, ಪುತ್ತೂರು, ಕಡಬ ಹಾಗೂ ಮೂಡುಬಿದಿರೆ ತಾ.ಪಂ.ಗಳ ಚುನಾಯಿತ ಅವಧಿ 2021ರ ಮೇ 7ಕ್ಕೆ ಮತ್ತು ಬಂಟ್ವಾಳ, ಬೆಳ್ತಂಗಡಿ ತಾ.ಪಂ.ಗಳ ಚುನಾಯಿತ ಅವಧಿ ಮೇ 10ಕ್ಕೆ ಹಾಗೂ ಸುಳ್ಯ ತಾ.ಪಂ.ನ ಚುನಾಯಿತ ಅವಧಿ ಮೇ 5ಕ್ಕೆ ಕೊನೆಗೊಂಡಿತ್ತು. ಜತೆಗೆ ಹೊಸದಾಗಿ ಉಳ್ಳಾಲ ಹಾಗೂ ಮೂಲ್ಕಿ ತಾಲೂಕುಗಳ ತಾ.ಪಂ.ಗಳು ಸೇರ್ಪಡೆಯಾಗಿವೆ.
ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾ.ಪಂ.ಗಳ ಅ ಧಿಕಾರ ಅವಧಿ 2021ರ ಮೇ 10ರೊಳಗೆ ಪೂರ್ಣಗೊಂಡಿತ್ತು. ಜತೆಗೆ ಹೊಸದಾಗಿ ಕಾಪು, ಬ್ರಹ್ಮಾವರ, ಬೈಂದೂರು ಹಾಗೂ ಹೆಬ್ರಿ ತಾಲೂಕುಗಳು ಸೇರ್ಪಡೆಯಾಗಿವೆ.
ಚುನಾವಣೆ ನಡೆಯದಿರಲು ಕಾರಣ
ಅವಧಿ ಮುಕ್ತಾಯದ ಸಂದರ್ಭದಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣ ಆಯೋಗ ಸಿದ್ಧತೆ ನಡೆಸಿತ್ತು. ಜಿ.ಪಂ., ತಾಲೂಕು ಕ್ಷೇತ್ರಗಳ ಪುನರ್‌ವಿಂಗಡನೆ ಕಾರ್ಯ ನಡೆದು ಹೊಸ ಕ್ಷೇತ್ರಗಳ ಹೆಸರು ಹಾಗೂ ಕ್ಷೇತ್ರವಾರು ಮತದಾರರ ಸಂಖ್ಯೆ ನಿಗದಿಯೂ ಆಗಿತ್ತು. ಕ್ಷೇತ್ರವಾರು ಮೀಸಲಾತಿ ನಿಗದಿ ಮಾತ್ರ ಬಾಕಿಯುಳಿದಿತ್ತು. ಈ ಹಂತದಲ್ಲಿಯೇ ಕೊರೊನಾ ಎದುರಾದ ಕಾರಣದಿಂದ ಎಲ್ಲ ಚುನಾವಣೆಗಳನ್ನು 6 ತಿಂಗಳ ಕಾಲ ರಾಜ್ಯ ಸರಕಾರ ಮುಂದೂಡಿತ್ತು. ಕೊರೊನಾ ಕಡಿಮೆಯಾದ ಬಳಿಕ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿ ಚುನಾವಣ ಆಯೋಗ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ರಾಜ್ಯ ಸರಕಾರ ಕ್ಷೇತ್ರ ಪುನರ್‌ವಿಂಗಡನೆಯನ್ನು ವಿಧಾನಸಭಾ ಕ್ಷೇತ್ರವಾರು ನಡೆಸುವ ನಿರ್ಧಾರ ಕೈಗೊಂಡ ಹಿನ್ನಲೆಯಲ್ಲಿ ಚುನಾವಣ ಸಂಬಂಧಿತ ಪ್ರಕ್ರಿಯೆ ಸ್ಥಗಿತಗೊಂಡಿತು. ಜತೆಗೆ ಮೀಸಲಾತಿ ಕುರಿತ ವಿಚಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು.