Advertisement

ಚುನಾವಣೆ ಮುಂದೂಡಲು”ಸುಗ್ರೀವಾಜ್ಞೆ’ ನೆಪ? : ಹೆಚ್ಚಾಗಲಿದೆ ತಾ.ಪಂ,ಜಿ.ಪಂ. ಕ್ಷೇತ್ರಗಳ ಸಂಖ್ಯೆ

09:00 PM Aug 18, 2022 | Team Udayavani |

ಬೆಂಗಳೂರು:  ರಾಜ್ಯದ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಹಾದಿ ಸುಗಮವಾಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಏಕೆಂದರೆ, ಕ್ಷೇತ್ರಗಳ ಜನಸಂಖ್ಯೆ ನಿಗದಿಗೆ ಸಂಬಂಧಿಸಿದಂತೆ “ಸುಗ್ರೀವಾಜ್ಞೆ’ ತರಲು ಸರ್ಕಾರ ನಿರ್ಧರಿಸಿದೆ.

Advertisement

ತಾ.ಪಂ  ಹಾಗೂ ಜಿ.ಪಂ ಕ್ಷೇತ್ರಗಳ ಜನಸಂಖ್ಯೆ ಬಗ್ಗೆ “ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ವಿಧೇಯಕ-2022ನ್ನು ಕಳೆದ ಮಾರ್ಚ್‌ನಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಇದೀಗ ಈ ತಿದ್ದುಪಡಿ ಕಾಯ್ದೆಯ ಸೆಕ್ಷನ್‌ 121 ಮತ್ತು ಸೆಕ್ಷನ್‌ 160ರ ತಿದ್ದುಪಡಿಗೆ ಸುಗ್ರೀವಾಜ್ಞೆತರಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಅದನ್ನು ರಾಜ್ಯಪಾಲರಿಗೆ ಕಳಿಸಿಕೊಡಲಿದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.

ತಿದ್ದುಪಡಿ ಕಾಯ್ದೆಗೆ ತರುತ್ತಿರುವ ಸುಗ್ರೀವಾಜ್ಞೆಯಲ್ಲಿ 7 ಲಕ್ಷ ಜನಸಂಖ್ಯೆಗೆ ಕನಿಷ್ಠ 25 ಜಿ.ಪಂ. ಸದಸ್ಯರು, 7ರಿಂದ 9.5 ಲಕ್ಷ ಜನಸಂಖ್ಯೆಗೆ ಕನಿಷ್ಠ 28 ಜಿ.ಪಂ ಸದಸ್ಯರು ಇರಬೇಕು. ಅದೇ ರೀತಿ 2.30 ಲಕ್ಷ ಗ್ರಾಮೀಣ ಜನಸಂಖ್ಯೆಗೆ  ಕನಿಷ್ಠ 12 ತಾ.ಪಂ ಸದಸ್ಯರು ಇರಬೇಕು ಎಂಬ ಆಂಶ ತರಲಾಗಿದೆ.

ಆದರೆ, ಈ “ಸುಗ್ರೀವಾಜ್ಞೆ’ಯು ಚುನಾವಣೆಗಳನ್ನು ಮುಂದೂಡುವ ಇನ್ನೊಂದು ಅಸ್ತ್ರ ಎಂಬ ಆರೋಪಗಳು ಕೇಳಿ ಬರುತ್ತಿವೆ. ಏಕೆಂದರೆ, ಸುಗ್ರಿವಾಜ್ಞೆಯ ಪ್ರಕಾರ ತಾ.ಪಂ. ಜಿ.ಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ. ಇದು ಮುಂದೆ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಕ್ಷೇತ್ರ ಪುನರ್‌ ವಿಂಗಡಣೆಯ ಕರಡು ಸಹ ಈವರೆಗೆ ಸಲ್ಲಿಸಲಾಗಿಲ್ಲ ಎನ್ನಲಾಗಿದೆ.

ಜಿ.ಪಂ. ತಾ.ಪಂ ಕ್ಷೇತ್ರಗಳ ಗಡಿ ಗುರುತಿಸುವ ಪ್ರಕ್ರಿಯೆ ಮುಗಿದಿದ್ದು, ಜುಲೈ ಕೊನೆಗೆ ಕರಡು ಹೊರಡಿಸಲಾಗುವುದು ಎಂದು ಸೀಮಾ ನಿರ್ಣಯ ಆಯೋಗ ಹೇಳುತ್ತಿತ್ತು. ಆದರೆ, ಈವರೆಗೆ ಕರಡು ಸಲ್ಲಿಸಲಾಗಿಲ್ಲ.  ಈ  ಮಧ್ಯೆ ಒಬಿಸಿ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸವಾಲು ಸಹ ಸರ್ಕಾರದ ಮುಂದಿದೆ. ಇದೆಲ್ಲ ಗಮನಿಸಿದರೆ ಜಿ.ಪಂ. ತಾ.ಪಂ. ಚುನಾವಣೆಗಳಿಗೆ ಹಾದಿ ಸುಗಮ ಇಲ್ಲ ಎಂಬಂತಾಗಿದೆ.

Advertisement

ಏನಿದು ಸುಗ್ರೀವಾಜ್ಞೆ? :

ತಾ.ಪಂ ಹಾಗೂ ಜಿ.ಪಂ ಕ್ಷೇತ್ರಗಳ ಜನಸಂಖ್ಯೆ ಬಗ್ಗೆ “ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ವಿಧೇಯಕ-2022 ತರಲಾಗಿತ್ತು. ಅದರಂತೆ, ಸೆಕ್ಷನ್‌ 121 ಪ್ರಕಾರ  2 ಲಕ್ಷ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 12 ಸಾವಿರಕ್ಕೆ ಕಡಿಮೆಯಿಲ್ಲದ ಜನಸಂಖ್ಯೆಗೆ ಒಬ್ಬ ತಾ.ಪಂ. ಸದಸ್ಯ ಇರಬೇಕು. ಅದೇ ರೀತಿ 1 ಲಕ್ಷ  ಮೀರಿದ ಹಾಗೂ 2 ಲಕ್ಷ ಮೀರದ ಗ್ರಾಮೀಣ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಒಬ್ಬ ತಾ.ಪಂ. ಸದಸ್ಯರಂತೆ ಕನಿಷ್ಠ 11 ಚುನಾಯಿತ ಸದಸ್ಯರು ಇರಬೇಕು. 50ರಿಂದ 1 ಲಕ್ಷ ಜನಸಂಖ್ಯೆಗೆ ಒಂಭತ್ತು ಸದಸ್ಯರು. 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಗೆ ಏಳು ಮಂದಿ ಸದಸ್ಯರು ಇರಬೇಕು. ಅದೇ ರೀತಿ ಸೆಕ್ಷನ್‌ 160 ಪ್ರಕಾರ ಒಂದು ಜಿಲ್ಲೆಯಲ್ಲಿ 35ರಿಂದ 45 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಒಂದು ಜಿಲ್ಲೆಯಲ್ಲಿ 20 ಜಿ.ಪಂ. ಸದಸ್ಯರು ಇರಬೇಕು.

ಯಾಕೆ ಸುಗ್ರೀವಾಜ್ಞೆ? :

2022ರ ಮಾರ್ಚ್‌ನಲ್ಲಿ ತರಲಾದ ತಿದ್ದುಪಡಿಯಲ್ಲಿ 2 ಲಕ್ಷ ಮೇಲ್ಪಟ್ಟ ಜನಸಂಖ್ಯೆಗೆ 12 ತಾ.ಪ. ಸ್ಥಾನಗಳು ಎಂದು ಇತ್ತು. ಆದರೆ, 2 ಲಕ್ಷದ ಮೇಲೆ ಸ್ವಲ್ಪ ಪ್ರಮಾಣದ ಜನಸಂಖ್ಯೆ ಹೆಚ್ಚಿರುವ ಕಡೆ ಸ್ಥಾನಗಳ ನಿಗದಿಗೆ ಸಮಸ್ಯೆ ಆಗುತ್ತಿತ್ತು. ಅದೇ ರೀತಿ ಹಿಂದಿನ ತಿದ್ದುಪಡಿಯಲ್ಲಿ ಒಂದು ಜಿಲ್ಲೆಯಲ್ಲಿ ತಾಲೂಕುಗಳಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಪ್ರತಿ ಜಿಲ್ಲೆಯಲ್ಲಿ 20 ಇರಬೇಕು ಎಂದಿತ್ತು. ಇಲ್ಲಿಯೂ ಸಹ ಕಡಿಮೆ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ ಸ್ಥಾನ ನಿಗದಿ ಸಮಸ್ಯೆ ಆಗುತಿತ್ತು. ಅದಕ್ಕಾಗಿ, ಸುಗ್ರೀವಾಜ್ಞೆಯಲ್ಲಿ ಜಿಲ್ಲೆಗಳಿಗೆ ಜನಸಂಖ್ಯೆ ನಿಗದಿಪಡಿಸಲು ಈ ಸುಗ್ರೀವಾಜ್ಞೆ ತರಲಾಗಿದೆ. ಉಳಿದಂತೆ, ಹಿಂದಿನ ತಿದ್ದುಪಡಿ ಕಾಯ್ದೆಯಲ್ಲಿರುವಂತೆಯೇ ಮುಂದುವರಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

-ರಫೀಕ್‌ ಅಹ್ಮದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next