ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನವಾಗಿದೆ. ಇಲ್ಲಿನ 11 ವರ್ಷದ ಕಾವೇರಿ ಎಂಬ ಜೀಬ್ರಾ, ಬುಧವಾರ ರಾತ್ರಿ 8.45ಕ್ಕೆ ಮುದ್ದಾದ ಮರಿಗೆ ಜನ್ಮ ನೀಡಿದ್ದು, ಉದ್ಯಾನವನದಲ್ಲಿ ಜೀಬ್ರಾ ಒಂದು ಮರಿ ಹಾಕಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾವೇರಿ ಮತ್ತು ಪೃಥ್ವಿ ಎಂಬ ಜೀಬ್ರಾ ಜೋಡಿಗೆ ಮರಿ ಜನಿಸಿದೆ. ಈ ಮೂಲಕ ಉದ್ಯಾನವನದಲ್ಲಿ ಜಿಬ್ರಾಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಇಸ್ರೇಲ್‌ನ ರಾವತ್‌ಗನ್‌ನಿಂದ 2014ರಲ್ಲಿ ಎರಡು ಗಂಡು, ಎರಡು ಹೆಣ್ಣು ಜೀಬ್ರಾಗಳನ್ನು ವಿಮಾನದ ಮೂಲಕ ಬನ್ನೇರುಘಟ್ಟ ಉದ್ಯಾನವನಕ್ಕೆ ತರಿಸಿಕೊಳ್ಳಲಾಗಿತ್ತು.
ನಂತರ 2016ರಲ್ಲಿ ಇನ್ಫೋಸಿಸ್ ಫೌಂಡೇಷನ್ ನಿರ್ಮಿಸಿಕೊಟ್ಟಿದ್ದ ಜೀಬ್ರಾಗಳ ಬಯಲು ಆಲಯಕ್ಕೆ ಅವುಗಳನ್ನು ವರ್ಗಾಹಿಸಿ, ಪ್ರವಾಸಿಗರ ವೀಕ್ಷಣೆಗೂ ಅವಕಾಶ ಮಾಡಿಕೊಡಲಾಗಿತ್ತು. ಇದೇ ವೇಳೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ಜೀಬ್ರಾಗಳಿಗೆ ಭರತ್, ಪೃಥ್ವಿ, ಹೇಮಾವತಿ ಮತ್ತು ಕಾವೇರಿ ಎಂದು ನಾಮಕರಣ ಮಾಡಿದ್ದರು. 8 ತಿಂಗಳುಗಳ ಹಿಂದೆ ಬಯಲು ಆಲಯದಲ್ಲಿದ್ದ ಗುಂಡಿಯೊಂದಕ್ಕೆ ಬಿದ್ದು ಹೇಮಾವತಿ ಎಂಬ ಜೀಬ್ರಾ ಮೃತಪಟ್ಟಿತ್ತು.
“ಬುಧವಾರ ರಾತ್ರಿ ಜನಿಸಿರುವ ಮರಿ ಜೀಬ್ರಾಗೆ ಇನ್ನೂ ಹೆಸರಿಟ್ಟಿಲ್ಲ. ತಾಯಿ ಮತ್ತು ಮರಿ ಆರೋಗ್ಯವಾಗಿದ್ದು, ಅವರಿಬ್ಬರನ್ನೂ ಉದ್ಯಾನದ ಸಿಬ್ಬಂದಿ ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಮೊದಲ ದಿನ ಜೀಬ್ರಾ ಮರಿ ವೀಕ್ಷಿಸಿದ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ,’ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಗೋಕುಲ್ ತಿಳಿಸಿದ್ದಾರೆ.