ಬೀದರ: ಅಲ್ಪ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಲಾಭದಾಯಕ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿ ಇದೀಗ ಗಡಿ ಜಿಲ್ಲೆ ಬೀದರನಲ್ಲೂ ಶುರುವಾಗಲಿದ್ದು, ಕೃಷಿ ಇಲಾಖೆ ಭರದ ಸಿದ್ಧತೆ ಮಾಡಿಕೊಂಡಿದೆ.
ಪ್ರಥಮ ಹಂತದ ಯೋಜನೆಗೆ ಅಗತ್ಯವಿರುವ ಎರಡು ಸಾವಿರ ಹೆಕ್ಟೇರ್ ಪ್ರದೇಶದ ಭೂಮಿಯಲ್ಲಿ ಯೋಜನೆ ಜಾರಿಗೆ ಉದ್ದೇಶಿಸಿದ್ದು, ಉಳಿಮೆ ಮಾಡುವ ರೈತರ ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. ರೈತರಿಗೆ ಸಾವಯವ ಪದ್ಧತಿ ಕುರಿತು ತರಬೇತಿ ನೀಡಲಾಗಿದ್ದು, ರೈತರ ಹೊಲದಲ್ಲಿನ ಮಣ್ಣಿನ ಪರೀಕ್ಷೆಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಸರ್ಕಾರದ ಉದ್ದೇಶ ಏನು: ಕೃಷಿ ಪರಿಕರಗಳ ಬೆಲೆ ಹೆಚ್ಚಳ, ಅನಿಶ್ಚಿತ ಮಳೆ, ಕೃಷಿ ಉತ್ಪನಗಳ ಬೆಲೆ ಕುಸಿತ ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹೀಗಾಗಿ ರೈತರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯುವ ಪದ್ಧತಿಯನ್ನು ರೈತರು ಅನುಸರಿಸಬೇಕೆಂಬ ಉದ್ದೇಶ ಸರ್ಕಾರದ್ದಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಗರದ ರಂಗಮಂದಿರದಲ್ಲಿ ನಡೆದ ಕೃಷಿ ಸ್ಪಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ‘ಶೂನ್ಯ ಬಂಡವಾಳ ಯೋಜನೆ’ ಅನುಷ್ಠಾನ ಕುರಿತು ಭರವಸೆ ನೀಡಿದ್ದರು. ಇದೀಗ ಆ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಸಜ್ಜಾಗಿದೆ.
ಎಲ್ಲಿ ಎಷ್ಟು ಪ್ರದೇಶ: ಬೀದರ್ ಜಿಲ್ಲೆಯ ಐದು ಹಾಗೂ ಕಲಬುರಗಿ ಜಿಲ್ಲೆಯ ಎರಡು ತಾಲೂಕುಗಳು ಸೇರಿ ಒಂದು ಕ್ಲಸ್ಟರ್ ನಿರ್ಮಿಸಲಾಗಿದೆ. ಒಟ್ಟು 7 ತಾಲೂಕುಗಳು ಒಂದು ಕ್ಲಸ್ಟರ್ ವಲಯದಲ್ಲಿದ್ದು, ಒಟ್ಟಾರೆ 2,122 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಬೀದರ ತಾಲೂಕಿನಲ್ಲಿ 479 ರೈತರನ್ನು ಗುರುತಿಸಲಾಗಿದ್ದು, 283 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ಭಾಲ್ಕಿ ತಾಲೂಕಿನ ಒಟ್ಟು 415 ರೈತರನ್ನು ಗುರುತಿಸಿದ್ದು, 305 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ಬಸವಕಲ್ಯಾಣ ತಾಲೂಕಿನ 333 ರೈತರನ್ನು ಗುರುತಿಸಲಾಗಿದ್ದು, 285 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ಹುಮನಾಬಾದ ತಾಲೂಕಿನ 548 ರೈತರನ್ನು ಗುರುತಿಸಲಾಗಿದ್ದು, 280 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ಔರಾದ ತಾಲೂಕಿನ 599 ರೈತರನ್ನು ಗುರುತಿಸಲಾಗಿದ್ದು, 285 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ 326 ರೈತರನ್ನು ಗುರುತಿಸಲಾದ್ದು, 303 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹಾಗೂ ಚಿಂಚೋಳಿ ತಾಲೂಕಿನಲ್ಲಿ 280 ರೈತರನ್ನು ಗುರುತಿಸಲಾಗಿದ್ದು, 380 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯಲಿದೆ.
ಬಂಡವಾಳವಿಲ್ಲದ ಕೃಷಿ: ನೈಸರ್ಗಿಕವಾಗಿ ಬರುವ ಬೆಳೆ ಬೆಳೆಯಲು ಕೃಷಿ ಇಲಾಖೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಬರುವ ಹಣ್ಣು, ತರಕಾರಿ ಸೇರಿ ವಿವಿಧ ಬೆಳೆಗಳನ್ನು ಹೇಗೆ ಬೆಳೆಯಬಹುದೆಂದು ರೈತರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಮಾರುಕಟ್ಟೆ ಕುರಿತು ರೈತರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತದೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ಅನ್ನದಾತರಿಗೆ ಮಾರ್ಗದರ್ಶನ ಮಾಡುತ್ತಾರೆ. ಅಲ್ಲದೆ ದೇಸಿ ಹಸುವಿನ ಗಂಜಲ, ಸೆಗಣಿ ಆಧಾರಿತ ಕಷಾಯಗಳಿಂದ ಬೀಜಗಳ ಲೇಪನ, ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಸಂಖ್ಯೆ ವೃದ್ಧಿಸಲು ಹಾಗೂ ಮಣ್ಣಿನ ವಾಯುಗುಣ ವೃದ್ಧಿಸಲು ಆದ್ಯತೆ ನೀಡಲಾಗುತ್ತದೆ.
ಉತ್ತಮ ಆಹಾರಕ್ಕೆ ಮಹತ್ವ: ರೈತರು ಕೃಷಿ ಕ್ಷೇತ್ರದಲ್ಲಿ ಬೆಳೆ ಉತ್ಪಾದನೆಗಾಗಿ ಹೆಚ್ಚಾಗಿ ರಾಸಾಯನಿಕ ಯುಕ್ತ ಪರಿಕರಗಳಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಮೇಲೆ ಅವಲಂಬನೆ ಆಗಿದ್ದಾರೆ. ರಾಸಾಯನಿಕ ಪರಿಕರಗಳಿಂದ ಅಂತರ್ಜಲ ಹಾಗೂ ಆಹಾರ ಪದಾರ್ಥ ಕಲುಷಿತಗೊಳ್ಳುತ್ತಿದೆ. ಅಲ್ಲದೆ, ರೈತ ಕೃಷಿ ಭೂಮಿಯಲ್ಲಿನ ಮಣ್ಣಿನ ಫಲವತ್ತತೆ ಕುಂಠಿತಗೊಂಡು ಜೀವ ವೈವಿಧ್ಯತೆಯಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಇದನ್ನರಿತ ಸರ್ಕಾರ ಇದೀಗ ಉತ್ತಮ ಆಹಾರ ಉತ್ಪಾದನೆಗೆ ಮಹತ್ವ ನೀಡಲು ಮುಂದಾಗಿದೆ. ಜಾಗತಿಕ ಮಟ್ಟದಲ್ಲಿ ಕಡಿಮೆ ಬಂಡವಾಳ ಹಾಗೂ ಕೃಷಿ ಪರಿಕರಗಳನ್ನು ಬಳಸಿ ಹೆಚ್ಚು ಇಳುವರಿ ಕೊಡುವ ಹೊಸ ಕೃಷಿ ವಿಧಾನ ಅನೇಕ ರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿದ್ದು, ಈ ರೀತಿಯ ಕೃಷಿ ವಿಧಾನದಿಂದ ಭೂಮಿಯ ಫಲವತ್ತತೆ ಹೆಚ್ಚುವ ಜತೆಗೆ ಉತ್ಪಾದನೆಯ ವೆಚ್ಚ ತಗ್ಗಿಸಿ ಕಲುಷಿತ ರಹಿತ ಆಹಾರ ಬಳಕೆದಾರರಿಗೆ ನೀಡಬಹುದಾಗಿದೆ ಎಂಬುದು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ನಿರೀಕ್ಷೆಯಾಗಿದೆ.
ಸರ್ಕಾರದಿಂದ ಸಮಿತಿ ರಚನೆ: ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವಿವಿಧ ಹಂತಗಳ ಸಮಿತಿ ರಚಿಸಿದೆ. ಜಿಲ್ಲಾಮಟ್ಟದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಅಧ್ಯಕ್ಷರು, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ ಉಪ ನಿರ್ದೇಶಕರು, ಮೂರು ಜನ ರೈತರು ಸದಸ್ಯರಾಗಿರುತ್ತಾರೆ. ಕ್ಲಸ್ಟರ್ ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಸಂಶೋಧಕ ಸಹಾಯಕ, ರೈತ ಪ್ರತಿನಿಧಿ, ಕ್ಷೇತ್ರ ಸಹಾಯಕರು, ಸಮುದಾಯ ಸಂಪನ್ಮೂಲ ವ್ಯಕ್ತಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾರ್ಯ ನಿರ್ವಹಿಸುತ್ತಾರೆ. ಈ ಸಮಿತಿಯ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಇವರು ರೈತರೊಂದಿಗೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಉತ್ತಮ ಬೆಳೆಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
•ದುರ್ಯೋಧನ ಹೂಗಾರ