Advertisement

ಅವಿಭಕ್ತ ಕುಟುಂಬಕ್ಕೂ ಶೂನ್ಯ ಬಡ್ಡಿ ಕೃಷಿ ಸಾಲ ಮುಂದುವರಿಕೆ

09:16 AM May 29, 2020 | mahesh |

ಮುಂಡಾಜೆ: ರಾಜ್ಯ ಸರಕಾರವು 2019 ಎ. 1ರಿಂದ ಪೂರ್ವಾನ್ವಯ ಆಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅವಿಭಕ್ತ ಕುಟುಂಬದ ರೈತರು ಪಡೆದ ಮಂಗಳಾ ಕಿಸಾನ್‌ ಕಾರ್ಡ್‌ ಅಲ್ಪಾವಧಿ ಸಾಲಗಳಲ್ಲಿ 3 ಲಕ್ಷ ರೂ. ವರೆಗಿನ ಸಾಲಗಳಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗಲಿದೆ ಎಂಬ ಆದೇಶವನ್ನು ಹಿಂದೆಗೆದುಕೊಂಡಿದೆ. ಹಲವು ರೈತರು, ಸಹಕಾರ ಭಾರತಿಯವರು, ಶಾಸಕರ ಮನವಿಗೆ ಸ್ಪಂದಿಸಿದ ಸರಕಾರ ಈ ನಿರ್ಧಾರದಿಂದ ಹೊರಬಂದಿದೆ. ಅದರನ್ವಯ ಒಂದು ಕುಟುಂಬದ ಎಲ್ಲ ಸದಸ್ಯರು ಪಡೆದಿರುವ ಯಾವುದೇ ಮೊತ್ತದ ಮಂಗಳಾ ಕಿಸಾನ್‌ ಕಾರ್ಡ್‌ ಸಾಲವು ಶೂನ್ಯ ಬಡ್ಡಿ ದರಕ್ಕೆ ಅರ್ಹವಾಗಲಿದೆ. ಪ್ರಸ್ತುತ ಇದನ್ನು 2020 ಮಾ. 31ರ ತನಕ ವಿಸ್ತರಿಸಲಾಗಿದೆ.

Advertisement

ಕೋವಿಡ್ ಕಾರಣದಿಂದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿದ್ದ ಅವಿಭಕ್ತ ಕುಟುಂಬದ ರೈತ ಸದಸ್ಯರು ಪರಿಷ್ಕೃತ ಆದೇಶದಿಂದಾಗಿ ನಿಟ್ಟುಸಿರುಬಿಡುವಂತಾಗಿದೆ. ಅವಿಭಕ್ತ ಕುಟುಂಬದ ಎಲ್ಲ ರೈತರಿಗೂ ಮಂಗಳಾ ಕಿಸಾನ್‌ ಕಾರ್ಡ್‌ ಅಲ್ಪಾವಧಿ ಸಾಲ ಲಭ್ಯವಾಗದೆ ಇರುವ ಕುರಿತು ಮೇ 3ರಂದು ಉದಯವಾಣಿಯು “ಅವಿಭಕ್ತ ಕುಟುಂಬಕ್ಕಿಲ್ಲ ಶೂನ್ಯ ಬಡ್ಡಿದರದ ಸಾಲ!’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ವರದಿಗೆ ಸ್ಪಂದನೆ ಎಂಬಂತೆ ಸರಕಾರ ತನ್ನ ಆದೇಶವನ್ನು ಹಿಂದೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next