Advertisement

ಹಿಂದುಳಿದ ವರ್ಗದ ನಾಯಕ ಎನ್ನುವ ಕಾರಣಕ್ಕೆ ಸಿಎಂರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ- ಜಮೀರ್

02:23 PM Sep 01, 2024 | Team Udayavani |

ಹುಬ್ಬಳ್ಳಿ,: ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಅನ್ನುವ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಅವರಿಗೆ ತೊಂದರೆ ಕೊಟ್ಟರೆ ಕಾಂಗ್ರೆಸ್ ಪತನವಾಗುತ್ತದೆ ಅನ್ನುವ ಲೆಕ್ಕಾಚಾರ ಅವರದು.‌ ಆದರೆ ಅವರು ರಾಜ್ಯದ ಜನರ ಮುಖ್ಯಮಂತ್ರಿ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.

Advertisement

ರವಿವಾರ(ಸೆ.1ರಂದು) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಂತವರ ವಿರುದ್ಧ ಯಾವುದೋ ಖಾಸಗಿ ವ್ಯಕ್ತಿ ಕೊಟ್ಟ ದೂರಿನ ಅನ್ವಯ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಹೀಗಾಗಿ ನಾವು ರಾಜಭವನ ಚಲೋ ಹೋರಾಟ ಮಾಡಿದ್ದೇವು. ದೂರು ಕೊಟ್ಟ ದಿನದಂದೇ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ಅದಕ್ಕಿಂತ ಮುಂಚೆಯೇ ಲೋಕಾಯುಕ್ತರು ನವೆಂಬರ್‌ನಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರು. ಇದರ ಜೊತೆಗೆ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೇಳಿದ್ದಾರೆ ಎಂದರು.

ಮುಡಾದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನು ಇದೆ..? ಅವರ ಬೇನಾಮಿ ಆಸ್ತಿ ಅನ್ನುವ ರೀತಿ ರಾಜ್ಯಪಾಲರ ಪರ ವಕೀಲರು ಮಾತನಾಡಿದ್ದಾರೆ. ಲಿಂಗ ಅನ್ನುವವರು ಈ ಭೂಮಿ ಖರೀದಿ ಮಾಡಿದಾಗ ಸಿದ್ದರಾಮಯ್ಯ ಅವರು ಹುಟ್ಟಿಯೇ ಇರಲಿಲ್ಲ. 2021ರಲ್ಲಿ 14 ಸೈಟ್ ಸಿಎಂ ಪತ್ನಿಗೆ ಕೊಡಲಾಗಿದೆ. ಆ ವೇಳೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಇವರೊಬ್ಬರಿಗೆ ಕೊಟ್ಟಿಲ್ಲ, 125 ಜನರಿಗೆ ಸೈಟ್ ಕೊಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇ ಇಲ್ಲ. ಇದು ಅವರಿಗೆ ಉರುಳಾಗುವ ಪ್ರಶ್ನೆಯೇ ಇಲ್ಲ ಎಂದರು.

ಸಿಎಂ ಟಗರು ಇದ್ದಂತೆ. ಅವರು ಭಯ ಬೀಳುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ಯಾವತ್ತಿದ್ದರೂ ಹುಲಿಯೇ. ಬಿಜೆಪಿಯವರಿಗೆ ಅವರ ಜನಪ್ರಿಯತೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಹೊಟ್ಟೆ ಕಿಚ್ಚು. ಕಾಂಗ್ರೆಸ್ ಸರ್ಕಾರ ಅಭದ್ರಗೊಳಿಸಲು ಈ ರೀತಿ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಇದೆ. ಎಲ್ಲ ಶಾಸಕರು ಮತ್ತು ರಾಜ್ಯದ ಜನರು ಅವರ ಪರ ಇದ್ದಾರೆ. ಪ್ರಕರಣದಲ್ಲಿ ಏನೂ ಇಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಕಾಂಗ್ರೆಸ್‌ನವರೇ ದಾಖಲೆ ಕೊಟ್ಟಿದ್ದಾರೆ ಎಂದು ಗೂಬೆ ಕೂರಿಸುತ್ತಿದ್ದಾರೆ ಎಂದು ಹರಿಹಾಯ್ದರು.

ನಟ ದರ್ಶನ್ ಬಳ್ಳಾರಿ ಜೈಲ್‌ಗೆ ಶಿಫ್ಟ್ ಆಗುವುದಕ್ಕೂ ನನಗೂ ಸಂಬಂಧವಿಲ್ಲ. ಆತ ನನ್ನ ಸ್ನೇಹಿತ ಇರಬಹುದು.‌ ನಾನು ಬಳ್ಳಾರಿ ಉಸ್ತುವಾರಿ ಮಂತ್ರಿ ಇರಬಹುದು. ಆದರೆ ನಾನು ಡಿಜಿ ಅಲ್ಲ. ಜೈಲಿನಲ್ಲಿನ ರಾಜ್ಯಾತಿಥ್ಯದ ಫೋಟೋ ಮಾಧ್ಯಮದಲ್ಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಬೇರೆ ಜೈಲಿಗೆ ವರ್ಗಾಯಿಸಲಾಗಿದೆ. ಇದನ್ನು ಪೊಲೀಸ್ ಇಲಾಖೆ ತೀರ್ಮಾನ ಮಾಡಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.