ಬೆಂಗಳೂರು: ಬಿಜೆಪಿಯಿಂದ ಹಣ ಪಡೆದು ಬಸವಕಲ್ಯಾಣ ಕ್ಷೇತ್ರದಿಂದ ಅಲ್ಪಸಂಖ್ಯಾಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆಂಬ ಜಮೀರ್ ಅಹಮ್ಮದ್ ಖಾನ್ ಆರೋಪಕ್ಕೆ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
2008ರ “ಆಪರೇಷನ್ ಕಮಲ’ದ ಬಳಿಕದ 20ಕ್ಕೂ ಹೆಚ್ಚು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನವನ್ನು ಗೆಲ್ಲದೆ ಮುಖಭಂಗ ಅನುಭವಿಸಿದ್ದರ ಹಿಂದಿದ್ದ ನಾಯಕರು ಯಾರು ಹಾಗೂ ಅವರು ಎಷ್ಟು ಹಣ ಪಡೆದಿದ್ದರು ಎಂದು ಪ್ರಶ್ನಿಸುವ ಮೂಲಕ ಜಮೀರ್ ಹಾಗೂ ಸಿದ್ದರಾಮಯ್ಯ ಹೆಸರು ಹೇಳದೆ ಕುಟುಕಿದ್ದಾರೆ. ಕುಮಾರಸ್ವಾಮಿ ಬುಧವಾರ ಮಾಡಿರುವ ಸರಣಿ ಟ್ವೀಟ್‌ಗಳ ವಿವರ ಹೀಗಿದೆ.
ಬಸವಕಲ್ಯಾಣದಲ್ಲಿ ನಾನು ಬಿಜೆಪಿಯಿಂದ ಹಣ ಪಡೆದಿರುವುದಾಗಿ ಮಿತ್ರರೊಬ್ಬರು ಹೇಳಿದ್ದಾರೆ. 2005ರಲ್ಲಿ ಎಸ್.ಎಂ. ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆಗ ಬಿಜೆಪಿಯಿಂದ ದುಡ್ಡು ಪಡೆಯಲಾಗಿತ್ತೇ?’
ಆ ಮುಸ್ಲಿಂ ಅಭ್ಯರ್ಥಿಗಾಗಿ ಮಾಜಿ ಪ್ರಧಾನಿ ದೇವೇಗೌಡರು ಗಲ್ಲಿಗಲ್ಲಿಗಳಲ್ಲಿ ಸುತ್ತಿದ್ದರು. ದೇವೇಗೌಡರಂಥವರು ಅಂದು ಅಷ್ಟು ಕಷ್ಟಪಟ್ಟು ಉಪ ಚುನಾವಣೆ ನಡೆಸಿದ್ದು ಬಿಜೆಪಿಯನ್ನು ಗೆಲ್ಲಿಸಲೆಂದೇ? ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ ಪ್ರಾಮಾಣಿಕ ಉತ್ತರ ಕೊಡಬಹುದೇ?’ ಎಂದು ಪ್ರಶ್ನಿಸಿದ್ದಾರೆ.
ಮತದಾನಕ್ಕೆ 2 ದಿನ ಬಾಕಿ ಇರುವಾಗ ನಮ್ಮ “ಮುಸ್ಲಿಂ ಅಭ್ಯರ್ಥಿ’ ಹಣದ ಕೊರತೆ ಕಾರಣದಿಂದ ಏಕಾಏಕಿ ಕಾಣೆಯಾಗಿದ್ದರು. ಕೂಡಲೇ ನಾನು ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೆ. ಅಂದು ನಾನು ತಂದ ಸಾಲ ಬಿಜೆಪಿಯ ಹಣವಾಗಿತ್ತೇ?’
“ಅಂದು ಬಿಜೆಪಿಯನ್ನು ಗೆಲ್ಲಿಸಲೆಂದು ಆ ಅಭ್ಯರ್ಥಿಯನ್ನು ಕಣಕ್ಕಿಳಿಸಿರದಿದ್ದರೆ ಇಂದು ನನ್ನ ವಿರುದ್ಧ ಆರೋಪ ಮಾಡಲು ಆ ನಾಯಕರೇ ಇರುತ್ತಿರಲಿಲ್ಲ. ಜೆಡಿಎಸ್ ತ್ಯಾಗಕ್ಕಾಗಿ ಕಿಂಚಿತ್ತು ಕೃತಜ್ಞತೆ ಉಳಿಯದಿದ್ದರೆ ಹೇಗೆ?’
ಸನ್ಮಿತ್ರರು ನಮ್ಮಲ್ಲಿದ್ದಾಗ ಅವರನ್ನು ಬೆಂಗಳೂರು ಕೇಂದ್ರದಿಂದ ಲೋಕಸಭೆಗೆ ಕಣಕ್ಕಿಳಿಸಲಾಯಿತು. ಅವರ ಸಹೋದರನನ್ನು ಚಿಕ್ಕಪೇಟೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಇದನ್ನೆಲ್ಲ ಮಾಡಿದ್ದು ಬಿಜೆಪಿಯನ್ನು ಗೆಲ್ಲಿಸಲೆಂದೇ ಎಂದು ಪ್ರಶ್ನಿಸಿದ್ದಾರೆ.