ಅತಿಯಾದ ಬಿಲ್ಡಪ್‌ಗಳಿಲ್ಲದ, ಹೊಸ ನಟನ ಮ್ಯಾನರೀಸಂ, ಆತನ ಪರ್ಸನಾಲಿಟಿಗೆ ಒಪ್ಪುವ, ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗುವ ಒಂದೊಳ್ಳೆಯ ಕಥೆ ಸಿಕ್ಕರೆ ಅದು “ಬನಾರಸ್’ ಆಗುತ್ತದೆ. ಝೈದ್ ಖಾನ್ ನಟನೆಯ “ಬನಾರಸ್’ ಸಿನಿಮಾ ನೋಡಿದವರಿಗೆ ಈ ತರಹದ ಒಂದು ಭಾವನೆ ಬಂದರೆ ತಪ್ಪಲ್ಲ. ಆ ಮಟ್ಟಿಗೆ ಇದೊಂದು ನೀಟಾದ, ಗಟ್ಟಿ ಕಥೆ ಇರುವ ಸಿನಿಮಾವಾಗಿ “ಬನಾರಸ್’ ಗಮನ ಸೆಳೆಯುತ್ತದೆ.
ಇದು ಪಕ್ಕಾ ನಿರ್ದೇಶಕರ ಸಿನಿಮಾ. ನಿರ್ದೇಶಕ ಜಯತೀರ್ಥ ಸಿನಿಮಾದಿಂದ ಸಿನಿಮಾಕ್ಕೆ ಹೊಸದನ್ನು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅದು “ಬನಾರಸ್’ನಲ್ಲೂ ಮುಂದುವರೆದಿದೆ. “ಬನಾರಸ್’ನಲ್ಲಿ ಜಯತೀರ್ಥ ಆಯ್ಕೆ ಮಾಡಿಕೊಂಡಿರುವ ಕಥೆ ಕನ್ನಡದ ಮಟ್ಟಿಗೆ ಹೊಸದು. ಟೈಮ್ ಲೂಪ್ ಕುರಿತಾದ ಕಥೆಯನ್ನು ಜಯತೀರ್ಥ ಆಯ್ಕೆ ಮಾಡಿಕೊಂಡಿದ್ದಾರೆ. ಈ ಟೈಮ್ ಲೂಪ್‌ನಲ್ಲಿ ಸಿಲುಕಿದಾಗ ಎದುರಾಗುವ ಸಮಸ್ಯೆ, ಮನಸ್ಥಿತಿ ಸೇರಿದಂತೆ ಹಲವು ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆ.
ಸಾಮಾನ್ಯವಾಗಿ ಒಬ್ಬ ಹೊಸ ಹುಡುಗ ಹೀರೋ ಆಗಿ ಲಾಂಚ್ ಆಗುತ್ತಾನೆ ಎಂದಾಗ ಭರ್ಜರಿ ಫೈಟ್, ಇಂಟ್ರೋಡಕ್ಷನ್, ಪಂಚಿಂಗ್ ಡೈಲಾಗ್… ಇದ್ದೇ ಇರಬೇಕೆಂದು ಪಟ್ಟು ಹಿಡಿಯುವ ನಾಯಕ ನಟರು, ನಿರ್ಮಾಪಕರು ಇದ್ದಾರೆ. ಆದರೆ, ಆ ವಿಷಯದಲ್ಲಿ ನಾಯಕ ಝೈದ್ ಖಾನ್ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ. ಅವರ ಪರ್ಸನಾಲಿಟಿಗೆ ಹೊಂದುವ ಒಂದು ಕಥೆಯನ್ನು ಒಪ್ಪಿಕೊಂಡು ಅದಕ್ಕೆ ಎಷ್ಟು ನ್ಯಾಯ ಕೊಡಲು ಸಾಧ್ಯವೋ ಅಷ್ಟರ ಮಟ್ಟಿಗೆ ಕೊಟ್ಟಿದ್ದಾರೆ.
ಇದನ್ನೂ ಓದಿ:ನಾಳಿನ ಪಂದ್ಯಕ್ಕೆ ಮಳೆ ಬಂದರೆ? ಒಂದು ವೇಳೆ ದ.ಆಫ್ರಿಕಾ ಸೋತರೆ? ಹೇಗಿದೆ ‘ಸೆಮಿ’ ಲೆಕ್ಕಾಚಾರ
ಮೊದಲೇ ಹೇಳಿದಂತೆ ಇಲ್ಲೊಂದು ಗಟ್ಟಿಕಥೆ ಇದೆ. ತಂದೆಯ ಮಾತನ್ನು ಚಾಚೂತಪ್ಪದೇ ಪಾಲಿಸುವ ಮಗ, ಹುಡುಗಿಯೊಬ್ಬಳಿಗಾಗಿ ಬನಾರಸ್‌ಗೆ ಹೋಗುತ್ತಾನೆ. ಆ ಹುಡುಗಿ ಹಾಗೂ ಈತನ ನಡುವಿನ ಘಟನೆಯೊಂದು ಬನಾರಸ್‌ಗೆ ತೆರಳಲು ಮೂಲವಾಗುತ್ತದೆ. ಅಲ್ಲಿಂದ ಸಿನಿಮಾದ ನಿಜವಾದ ಜರ್ನಿ ಆರಂಭವಾಗುತ್ತದೆ. ನಿರ್ದೇಶಕ ಜಯತೀರ್ಥ ಈ ಬಾರಿ ಪ್ರೇಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಹೋಗಿದ್ದಾರೆ. ಕೆಲವು ಕಡೆ ಸಿನಿಮಾ ಇನ್ನಷ್ಟು ವೇಗವಾಗಿರಬೇಕಿತ್ತು ಎನಿಸದೇ ಇರದು. ಆದರೆ, ಚಿತ್ರದ ದ್ವಿತೀಯಾರ್ಧ ಸಿನಿಮಾದ ಹೊಸ ವಿಷಯಗಳೊಂದಿಗೆ ವೇಗ ಪಡೆದುಕೊಂಡು ಸಾಗಿದೆ. ಮೊದಲೇ ಹೇಳಿದಂತೆ ಇದು ಟೈಮ್ ಲೂಪ್ ಸಿನಿಮಾವಾದ್ದರಿಂದ ಇಲ್ಲಿ ಸತ್ಯ, ಸುಳ್ಳು, ಭ್ರಮೆ… ಇಂತಹ ಸನ್ನಿವೇಶಗಳು ಬರುತ್ತವೆ. ಇದನ್ನು ಪ್ರೇಕ್ಷಕ ಬೇಗನೇ ಅರ್ಥಮಾಡಿಕೊಂಡು, ಮುಂದಿನ ದೃಶ್ಯಕ್ಕೆ ಅಣಿಯಾಗುವ ಸವಾಲನ್ನು ನೀಡಿದ್ದಾರೆ.
ನಾಯಕ ಝೈದ್ ಖಾನ್ ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಇದು ಅವರ ಮೊದಲ ಚಿತ್ರ ಎನ್ನುವ ಭಾವನೆ ಬರದಂತೆ ನಟಿಸುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ನಾಯಕಿ ಸೋನಾಲ್ ಮೊಂತೆರೋ ದನಿ ಪಾತ್ರದ ಮೂಲಕ ಮಿಂಚಿದ್ದಾರೆ. ಉಳಿದಂತೆ ದೇವರಾಜ್, ಸುಜಯ್ ಶಾಸ್ತ್ರಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ “ಮಾಯಗಂಗೆ..’, “ಬೆಳಕಿನೆಡೆಗೆ …’ ಹಾಡುಗಳು ಇಂಪಾಗಿವೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣದಲ್ಲಿ “ಬನಾರಸ್’ ಕಂಗೊಳಿಸಿದೆ
ರವಿಪ್ರಕಾಶ್ ರೈ