ಸಿಡ್ನಿ: ಭಾರತದ ಆಲ್ ರೌಂಡ್ ಆಟಗಾರ ಯುವರಾಜ್ ಸಿಂಗ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದು, ಈಗ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಮಿಂಚಲು ಸಿದ್ದರಾಗುತ್ತಿದ್ದಾರೆ. ವರದಿಯೊಂದರ ಪ್ರಕಾರ ಆಸ್ಟ್ರೇಲಿಯಾದ ಬಿಬಿಎಲ್ ನ ಮುಂದಿನ ಆವೃತ್ತಿಯಲ್ಲಿ ಯುವಿ ಆಡಲಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಭಾರತದ ಶ್ರೇಷ್ಠ ನಿಗಧಿತ ಓವರ್ ನ ಆಟಗಾರನೊಬ್ಬ ಬಿಗ್ ಬ್ಯಾಶ್ ಲೀಗ್ ನಲ್ಲಿ ಆಡಲಿದ್ದಾರೆ ಎಂದಿದೆ. ಆಸೀಸ್ ನ ಟಿ20 ಲೀಗ್ ನಲ್ಲಿ ಯುವರಾಜ್ ಸಿಂಗ್ ಆಡಲಿದ್ದಾರೆ ಎಂದು ವರದಿ ತಿಳಿಸಿದೆ.
ಬಿಗ್ ಬ್ಯಾಶ್ ಲೀಗ್ ನಲ್ಲಿ ಇದುವರೆಗೆ ಭಾರತದ ಯಾವುದೇ ಪುರುಷ ಆಟಗಾರ ಪಾಲ್ಗೊಂಡಿಲ್ಲ. ತನ್ನ ಅಡಿ ಬರುವ ಯಾವುದೇ ಆಟಗಾರನಿಗೆ ಬಿಸಿಸಿಐ ವಿದೇಶಿ ಲೀಗ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ. ಆದರೆ ಯುವರಾಜ್ ಸಿಂಗ್ ಬಿಸಿಸಿಐಗೆ ರಾಜೀನಾಮೆ ನೀಡಿರುವ ಕಾರಣ ಅವರು ವಿದೇಶಿ ಲೀಗ್ ಗಳಲ್ಲಿ ಆಡಬಹುದು. ಈ ಹಿಂದೆ ಕೆನಾಡದ ಗ್ಲೋಬಲ್ ಟಿ20 ಕೂಟದಲ್ಲಿ ಯುವಿ ಆಡಿದ್ದರು.
ಯುವರಾಜ್ ಮ್ಯಾನೇಜರ್ ಜೇಸನ್ ವಾರ್ನೆ ಈ ಬಗ್ಗೆ ಹೇಳಿಕೆ ನೀಡಿದ್ದು, ಯುವರಾಜ್ ಸಿಂಗ್ ಅವರನ್ನು ಸೇರಿಸಿಕೊಳ್ಳಲು ಫ್ರಾಂಚೈಸಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಎದುರು ನೋಡುತ್ತಿದೆ. ಇದರ ಬಗ್ಗೆ ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.