ಮುಂಬಯಿ: ಸಿನಿಮಾರಂಗದಲ್ಲಿ ಕ್ರಿಕೆಟ್ ದಿಗ್ಗಜರಾದ (Cricket) ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ,ಅಜರುದ್ದೀನ್ ಅವರ ಜೀವನಗಾಥೆ ಆಧಾರಿತ ಸಿನಿಮಾಗಳು ಬಂದಿವೆ. ಸ್ಪೋರ್ಟ್ಸ್ ಡ್ರಾಮ ಸಿನಿಮಾಗಳು ಬಾಲಿವುಡ್ ಈ ಹಿಂದೆ ಸದ್ದು ಮಾಡಿವೆ.
ಇದೀಗ ಈ ಸಾಲಿಗೆ ಮತ್ತೊಬ್ಬ ದಿಗ್ಗಜ ಕ್ರಿಕೆಟಿಗ, ಟೀಮ್ ಇಂಡಿಯಾದ (Team India) ಮಾಜಿ ಆಟಗಾರ ಯುವರಾಜ್ ಸಿಂಗ್ (Yuvraj Singh) ಅವರ ಲೈಫ್ ಸ್ಟೋರಿ ಸಿನಿಮಾವಾಗಿ ಬರಲಿದೆ.
2007ರ ಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಆರಕ್ಕೆ ಆರು ಸಿಕ್ಸರ್ ದಾಖಲಿಸಿದ್ದು, ಭಾರತ 2011ರ ಏಕದಿನ ವಿಶ್ವಕಪ್ ಗೆಲುವಿಗೆ ಪ್ರಧಾನ ಪಾತ್ರವಹಿಸಿದ ಯುವರಾಜ್ ಸಿಂಗ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಇಂದಿಗೂ ಮರೆತಿಲ್ಲ.
ಕ್ರಿಕೆಟ್ ಲೋಕದಲ್ಲಿ ಗೆದ್ದಿದ್ದ ಅವರು ಕ್ಯಾನ್ಸರ್ ಕಾಯಿಲೆಯನ್ನು ಮೆಟ್ಟಿನಿಂತೂ ಮತ್ತೆ ಕ್ರಿಕೆಟ್ರ ಲೋಕದಲ್ಲಿ ಅಬ್ಬರಿಸಿದ ರೀತಿ ಎಷ್ಟೋ ಮಂದಿಗೆ ಸ್ಪೂರ್ತಿದಾಯಕವಾಗಿದೆ. ಇಂತಹ ಅದ್ಭುತ ಪ್ರತಿಭೆಯ ಕಥೆ ಈಗ ಸಿನಿಮಾವಾಗಲು ಸಿದ್ದವಾಗಿದೆ.
ಇದರ ಮೊದಲ ಹಂತವಾಗಿ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. ಟೀ-ಸೀರಿಸ್(T-Series Films) ಬ್ಯಾನರ್‌ನಲ್ಲಿ ಭೂಷಣ್ ಕುಮಾರ್ (Bhushan Kumar) ಮತ್ತು ರವಿ ಭಾಗಚಂಡ್ಕ ಅವರು ಯುವರಾಜ್ ಸಿಂಗ್ ಬದುಕಿನ ಕುರಿತ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಸೇರಿದಂತೆ ಅವರ ಕ್ರಿಕೆಟ್ ಜರ್ನಿಯಲ್ಲಿ ಸಾಗಿಬಂದ ಹಾದಿಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂದು ವರದಿ ಆಗಿದೆ. ಸದ್ಯ ತಾತ್ಕಾಲಿಕವಾಗಿ ಸಿನಿಮಾಕ್ಕೆ ʼಸಿಕ್ಸ್ ಸಿಕ್ಸಸ್ʼ ಎಂದು ಟೈಟಲ್ ಇಡಲಾಗಿದೆ.
ಸಿನಿಮಾದ ನಿರ್ದೇಶಕ, ಪ್ರಧಾನ ಪಾತ್ರ ಹಾಗೂ ಇತರೆ ಮಾಹಿತಿಗಳ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಟೀಮ್ ಇಂಡಿಯಾದ ಪರವಾಗಿ ಸುದೀರ್ಘವಾಗಿ ತನ್ನ ಆಟವನ್ನು ನೀಡಿದ ಯುವರಾಜ್ 2019ರಲ್ಲಿ ನಿವೃತ್ತಿ ಆದರು.
ಈ ಹಿಂದೆಯೇ ಯುವರಾಜ್ ಸಿಂಗ್ ಅವರ ಬಯೋಪಿಕ್ ಬಗ್ಗೆ ಮಾತುಕತೆ ನಡೆದಿತ್ತು. ಕರಣ್ ಜೋಹರ್ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದರು ಆದರೆ ಅದು ಸಾಧ್ಯವಾಗಿರಲಿಲ್ಲ.