Advertisement

ಏಕದಿನ ಸರಣಿಗೆ ಯುವರಾಜ್‌ ಇಲ್ಲ

12:07 PM Aug 14, 2017 | |

ಹೊಸದಿಲ್ಲಿ: ಫಾರ್ಮ್ಗೆ ಮರಳಲು ಒದ್ದಾಡು ತ್ತಿರುವ ಯುವರಾಜ್‌ ಸಿಂಗ್‌ ಅವರನ್ನು ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಭಾರತೀಯ ಏಕದಿನ ತಂಡದಿಂದ ಕೈಬಿಡಲಾಗಿದೆ. ಆದರೆ ಎಂಎಸ್‌ ಧೋನಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

Advertisement

ಅನುಭವಿ ಆಟಗಾರ ಕರ್ನಾಟಕದ ಮನೀಷ್‌ ಪಾಂಡೆ ಅವರು ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ “ಎ’ ತಂಡಗಳ ತ್ರಿಕೋನ ಸರಣಿಯಲ್ಲಿ ಪಾಂಡೆ ನೇತೃತ್ವದ ಭಾರತ “ಎ’ ತಂಡ ಪ್ರಶಸ್ತಿ ಜಯಿಸಿತ್ತು. ಹಿರಿಯ ಬೌಲರ್‌ಗಳಾದ ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌ ಮತ್ತು ಪ್ರಮುಖ ಸ್ಪಿನ್ನರ್‌ಗಳಾದ ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಯುವ ವೇಗಿ ಶಾರ್ದೂಲ್‌ ಠಾಕುರ್‌ ಕೂಡ ತಂಡಕ್ಕೆ ಮರಳಿದ್ದಾರೆ. ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿ ವೇಳೆ ವಿಶ್ರಾಂತಿ ನೀಡಲಾಗಿದ್ದ ಜಸ್‌ಪ್ರೀತ್‌ ಬುಮ್ರಾ ಅವರನ್ನು 15 ಸದಸ್ಯರ ಏಕದಿನ ಮತ್ತು ಟ್ವೆಂಟಿ20 ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ. 

ದಾಂಬುಲದಲ್ಲಿ  ಮೊದಲ ಪಂದ್ಯ
ಐದು ಪಂದ್ಯಗಳ ಏಕದಿನ ಸರಣಿ ರವಿವಾರ ದಾಂಬುಲದಲ್ಲಿ ಆರಂಭವಾಗಲಿದೆ. ಸೆ. 6ರಂದು ಕೊಲಂಬೊದಲ್ಲಿ ಎರಡನೇ ಟ್ವೆಂಟಿ20 ಪಂದ್ಯದ ಮೂಲಕ ಭಾರತದ ಶ್ರೀಲಂಕಾ ಪ್ರವಾಸ ಅಂತ್ಯಗೊಳ್ಳಲಿದೆ.

ಯುವರಾಜ್‌ ಅವರನ್ನು ಕೈಬಿಟ್ಟಿರುವುದು ಅವರ ಕ್ರಿಕೆಟ್‌ ಬಾಳ್ವೆ ಅಂತ್ಯಗೊಳ್ಳುವ ಸೂಚನೆಯಂದು ಭಾವಿಸಲಾಗಿದೆ. ಎರಡು ಬಾರಿ ವಿಶ್ವಕಪ್‌ ವಿಜೇತ ತಂಡದಲ್ಲಿದ್ದ ಯುವರಾಜ್‌ ಏಕದಿನ ಕ್ರಿಕೆಟ್‌ನ ಸ್ಫೋಟಕ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಚಾಂಪಿಯನ್ಸ್‌ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ 50 ರನ್‌ ಹೊಡೆದ ಬಳಿಕ ಅವರು ಆಡಿದ ಏಳು ಏಕದಿನ ಪಂದ್ಯಗಳಲ್ಲಿ ಕೇವಲ 162 ರನ್‌ ಹೊಡೆದಿದ್ದರು. 

Advertisement

ಯುವರಾಜ್‌ ಮುಂಬರುವ 2019ರ ವಿಶ್ವಕಪ್‌ ವೇಳೆ ತಂಡದಲ್ಲಿರುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಮೊನಚಿಲ್ಲ. ಅವರ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮಟ್ಟ ಸಾಧಾರಣವಾಗಿದೆ. ಆದರೆ ಧೋನಿ ಮುಂಬರುವ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆಯಿದೆ. ಯುವರಾಜ್‌ ಇಷ್ಟರವರೆಗೆ 304 ಏಕದಿನ ಪಂದ್ಯಗಳನ್ನಾಡಿದ್ದು 8 ಸಾವಿರಕ್ಕಿಂತ ಹೆಚ್ಚಿನ ರನ್‌ ಗಳಿಸಿದ್ದಾರೆ. 40 ಟೆಸ್ಟ್‌ ಮತ್ತು 58 ಟ್ವೆಂಟಿ20 ಪಂದ್ಯಗಳನ್ನಾಡಿದ್ದಾರೆ.

ಭಾರತೀಯ ಏಕದಿನ ತಂಡ 
ವಿರಾಟ್‌ ಕೊಹ್ಲಿ  (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌, ಮನೀಷ್‌ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್‌ ಜಾಧವ್‌, ಎಂಎಸ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯುಜ್ವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಶಾರ್ದೂಲ್‌ ಠಾಕುರ್‌

Advertisement

Udayavani is now on Telegram. Click here to join our channel and stay updated with the latest news.

Next