ಮುಂಬಯಿ: ನಗರದ ಕನ್ನಡ ಸೇವಾ ಸಂಘ ಪೊವಾಯಿ ಇದರ ಸಂಸ್ಥಾಪಕ ಸದಸ್ಯ, ಮುಂಬಯಿಯಲ್ಲಿ ಕಾರ್ಮಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಂಘಟಕ, ಹಲವು ಗೌರವಗಳಿಗೆ ಪಾತ್ರರಾದ ಅಣ್ಣಪ್ಪ ಪೂಜಾರಿ ಅವರನ್ನು ಇತ್ತೀಚೆಗೆ ಹುಟ್ಟೂರಿನಲ್ಲಿ ನಡೆದ ಆದಿ ಗ್ರಾಮೋತ್ಸವದಲ್ಲಿ “ಯುವ ಸಿರಿ ಗೌರವ’ ನೀಡಿ ಸಮ್ಮಾನಿಸಲಾಯಿತು.
ಕರ್ನಾಟಕ ವಿಧಾನ ಪರಿಷತ್‌ನ ಮಾಜಿ ಸದಸ್ಯ, ಶಿಕ್ಷಣ ತಜ್ಞ, ಸಾಮಾಜಿಕ ಕಳಕಳಿಯ ಚಿಂತಕ ಕ್ಯಾ| ಗಣೇಶ ಕಾರ್ಣಿಕ್ ಅವರು ಗೌರವ ಪ್ರದಾನ ಮಾಡಿದರು. ಗೌರವ ಸ್ವೀಕರಿಸಿ ಮಾತನಾಡಿದ ಅಣ್ಣಪ್ಪ ಪೂಜಾರಿ ಅವರು, ನಾವು ಮುಂಬಯಿಗೆ ಹೊಟ್ಟೆ ಪಾಡಿಗಾಗಿ ಬಂದೆವು. ನಾಲ್ಕು ಜನರಿಗೆ ಉಪಕಾರ ಆಗಲಿ ಎಂಬ ದೃಷ್ಟಿಯಿಂದ ಶೇಖರ ಅಜೆಕಾರು ಅವರ ಅಧ್ಯಕ್ಷತೆಯಲ್ಲಿ ಮೂವತ್ತು ಜನ ಸೇರಿ ಪೊವಾಯಿಯಲ್ಲಿ ಕನ್ನಡ ಸೇವಾ ಸಂಘ ಕಟ್ಟಿದೆವು. ನಮ್ಮನ್ನು ಗುರುತಿಸಲಿ ಎಂಬ ಯಾವುದೇ ಆಸೆ ಇರಲಿಲ್ಲ. ನಮ್ಮ ಸೇವೆಯನ್ನು ಗುರುತಿಸಿ 20-25 ವರ್ಷಗಳ ಹಿಂದೆ ಮಾಡಿದ ಸಾಧನೆಯನ್ನು ಗುರುತಿಸಿ ನಾನು ಹುಟ್ಟಿದ ಉಡುಪಿ ಜಿಲ್ಲೆಯಲ್ಲಿ ಗೌರವಿಸಿದ್ದಾರೆ.
ಇದು ನನ್ನ ಪುಣ್ಯ. ಇದನ್ನು ಮುಂಬಯಿ ಕನ್ನಡಿಗರಿಗೆ ಸಮರ್ಪಿಸುತ್ತಿದ್ದೇನೆ. ಮುಂಬಯಿ ಮಹಾನಗರ ಬದುಕಿನ ಪಾಠವನ್ನು ಕಲಿಸಿದ ಹಾಗೆ ಬೇರೆ ಯಾವುದೇ ನಗರವು ಕಲಿಸಲಾರದು. ಮುಂಬಯಿ ಸಾವಿರಾರು ಮಂದಿ ತುಳು – ಕನ್ನಡಿಗರ ಬದುಕನ್ನು ಅರಳಿಸಿದೆ. ಇಂದು ಕರಾವಳಿ ಜಿಲ್ಲೆಯ ಅಭಿವೃದ್ಧಿಯ ಪ್ರತಿಯೊಂದು ಹೆಜ್ಜೆಯಲ್ಲೂ ಒಬ್ಬ ಮುಂಬಯಿ ತುಳು, ಕನ್ನಡಿಗರ ಸೇವೆಯ ಸ್ಪರ್ಶವಿದೆ ಎಂದು ಅವರು ಸಂತಸ ವ್ಯಕ್ತ ಪಡಿಸಿದರು.
ಇದನ್ನೂ ಓದಿ:ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಮಾಹಿತಿ ಸಂಗ್ರಹ
ಕನ್ನಡ ಸೇವಾ ಸಂಘ ಪೊವಾಯಿ ಇದರ ಸಂಸ್ಥಾಪಕ ಅಧ್ಯಕ್ಷ ಡಾ| ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಮುನಿರಾಜ ರೆಂಜಾಳ, ಯೋಗೀಶ್ ಮಲ್ಯ ಕಡ್ತಲ, ಸಂಪತ್ ಕುಮಾರ್ ಜೈನ್, ಕಬಡ್ಡಿ ತರಬೇತುದಾರ ರಮೇಶ ಸುವರ್ಣ, ರಾಘವ ದೇವಾಡಿಗ ಕಡ್ತಲ, ಕಾರ್ಕಳ ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಶೇಖರ ಕಡ್ತಲ ಸಹಿತ ಗಣ್ಯರು ಉಪಸ್ಥಿತರಿದ್ದರು.