ಬೆಂಗಳೂರು: ರಾಜ್ಯ ಸರಕಾರದ “ಯುವನಿಧಿ’ ಯೋಜನೆಗೆ ಫಲಾನುಭವಿಗಳ ಹೆಸರುಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಲು ಕ್ರಮ ಕೈಕೊಳ್ಳ ಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ| ಶರಣಪ್ರಕಾಶ್ ಪಾಟೀಲ್ ಅವರು, ಅಭ್ಯರ್ಥಿಗಳ ನೋಂದಣಿ ವೇಳೆ ನಕಲಿ ಪ್ರಮಾಣಪತ್ರ ಸಲ್ಲಿಕೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪ್ರಮಾದ ಕಂಡು ಬಂದರೆ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಗಳ ಜತೆಗೆ ವೀಡಿಯೋ ಸಂವಾದ ನಡೆಸಿದ ಅವರು, ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ಆಗದಿರುವುದಕ್ಕೆ ಅಧಿಕಾರಿ ಗಳಿಂದ ವಿವರಣೆ ಪಡೆದ ಸಚಿವರು,ಅಧಿಕಾರಿಗಳು ಹೆಚ್ಚು ಸಕ್ರಿಯರಾಗುವಂತೆ ಸೂಚನೆ ನೀಡಿದರು.
ಪದವಿ ಕಾಲೇಜುಗಳು, ಡಿಪ್ಲೊಮಾ, ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಮುಖ್ಯಸ್ಥರು, ಪ್ರಾಂಶುಪಾಲರ ಜತೆಗೆ ಕೂಡಲೇ ಸಭೆ ನಡೆಸಿ ಗರಿಷ್ಠ ಪ್ರಮಾಣದಲ್ಲಿ ನೋಂದಣಿ ಮಾಡಿಸಬೇಕು. ಸರಕಾರದ ಈ ಯೋಜನೆ ಪರಿಣಾಮ ಕಾರಿ ಅನುಷ್ಠಾನಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡಬೇಕು. ಯೋಜನೆಯಿಂದ ಸಿಗುವ ಲಾಭದ ಬಗ್ಗೆ ಮನವರಿಕೆ ಮಾಡುವಂತೆ ಸಲಹೆ ನೀಡಿದರು.
ಸಾಮಾಜಿಕ ಜಾಲತಾಣ ಬಳಸಿ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಇದರಿಂದ ಯೋಜನೆ ಹೆಚ್ಚು ಜನರಿಗೆ ತಲುಪಲಿದೆ. ಪ್ರತಿಯೊಂದು ಕಾಲೇಜು ಮುಂಭಾಗ ಬೃಹತ್ ಪ್ರಮಾಣದ ಕಟ್‌ಔಟ್, ಹೋರ್ಡಿಂಗ್ ಹಾಕಬೇಕು. ಅಲ್ಲದೆ, ಗ್ರಾಮ ಪಂಚಾಯತ್‌ಗಳು ಮತ್ತು ಪ್ರತಿ ಗ್ರಾಮದಲ್ಲೂ ಊರಿನ ಮುಂಭಾಗ ಫ್ಲೆಕ್ಸ್ ಆಳವಡಿಸಲು ಸೂಚನೆ ನೀಡಿದರು. ಸಚಿವರಾದ ಎಂ.ಸಿ. ಸುಧಾಕರ್, ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.