Advertisement

ಹೊಸದೊಂದು ವರುಷವಿದು ಮತ್ತೆ ಯುಗಾದಿ

03:57 PM Mar 21, 2023 | Team Udayavani |

ಚೈತ್ರ ಮಾಸದ ಮೊದಲದಿನ ಅಥವಾ ವರ್ಷದ ಮೊದಲ ದಿನವಾಗಿ ಆಚರಿಸಲ್ಪಡುವ ಹಿಂದೂಗಳ ಹಬ್ಬವೇ ಈ ಯುಗಾದಿಯಾಗಿದೆ. ಹಬ್ಬವೆಂದರೆ ಹರುಷ, ಹಬ್ಬವೆಂದರೆ ನಗು, ಹಬ್ಬವೆಂದರೆ ಕೂಡುಕುಟುಂಬ ಒಟ್ಟಾಗಿ ಸಂಭ್ರಮಿಸುವುದು. ಒಟ್ಟಾರೆ ಹಬ್ಬವೆಂದರೆ ಸಿಹಿ-ಸವಿಯೆನ್ನಬಹುದು. ಪ್ರಾದೇಶಿಕ ಹಬ್ಬಗಳನ್ನು ಆಯಾ ಪ್ರದೇಶದ ಸಂಸ್ಕೃತಿಯಂತೆ ವಿಧವಾಗಿ ಆಚರಿಸಲಾಗುತ್ತದೆ. ಯುಗಾದಿಯ ಆಚರಣೆ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳಲ್ಲಿ ಬಹಳಷ್ಟು ಸಂಭ್ರಮದಲ್ಲಿ ಆಚರಿಸಲಾಗುತ್ತದೆ.

Advertisement

ಮಾವಿನ ತೋರಣ ಕಟ್ಟುವುದು, ಕಲಶವನ್ನು ಇಡುವುದು ಜತೆಗೆ ಹೋಳಿಗೆ ಹಾಗೂ ಪಚ್ಚಡಿ ಎನ್ನುವ ಖಾದ್ಯದ ತಯಾರಿಕೆಯು ಈ ದಿನ ನಡೆಯುತ್ತದೆ. ಪಚ್ಚಡಿಯು ಸಿಹಿ, ಖಾರ,ಹುಳಿ, ಕಹಿಯ ಮಿಶ್ರಣವಾಗಿದ್ದು ಸಂತೋಷವನ್ನು, ಜೀವನೋತ್ಸಹಾವನ್ನು, ಕಷ್ಟವೊದಗುವ ಬಗೆಯನ್ನು ಜತೆಗೆ ಅದನ್ನು ಸಮರ್ಥವಾಗಿ ಎದುರಿಸುವ ಬಗೆಯನ್ನೂ ಸಂಕೇತಿಸುತ್ತದೆ. ಇದೊಂದು ಖಾದ್ಯವು ಜೀವನವನ್ನೇ ಪ್ರತಿನಿಧಿಸುತ್ತದೆ.

ವಸಂತ ಋತುವಿನಾಗಮನದ ಜತೆಗೆ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಮನುಷ್ಯನ ಜೀವನದಲ್ಲೂ ಹೊಸತನ ತುಂಬಿಸುವ ಬಗೆಗೆ ಮುಖಮಾಡುತ್ತದೆ. ಜನರು ಕಷ್ಟವ ಕಳೆದು ಸುಖದ, ಸಮೃದ್ಧಿಯ ಬದುಕಿನ ನಿರೀಕ್ಷೆಯಲ್ಲಿ ಇರುತ್ತಾರೆ.

ಈ ಹಬ್ಬದ ಇತಿಹಾಸವನ್ನು ತಿಳಿಯಲು ಹೊರಟರೆ ಹಲವು ಬಗೆಯಲ್ಲುಂಟು.

ಬ್ರಹ್ಮನು ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನವಿದಾದರೆ, ದಕ್ಷಿಣ ಭಾರತವನ್ನಾಳಿದ ಶಾಲಿವಾಹನನು ಇದೇ ದಿನದಂದು ಸಿಂಹಾಸನರೂಢನಾದ ಕಥೆಯೂ ಉಂಟು. ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ರಾಮರಾಜ್ಯವನ್ನು ಸ್ಥಾಪಿಸದ ದಿನವೂ ಇದೇ ಎಂಬ ಪ್ರತೀತಿಯಿದೆ.

Advertisement

ಹಬ್ಬದಾಚರಣೆಗಿಲ್ಲಿ ಬಡವ-ಬಲ್ಲಿದನೆನ್ನದೆ ಎಲ್ಲರೂ ಶುಭದಿನವೆಂದು ಹೊಸಕಾರ್ಯವನ್ನು ಇದೇ ದಿನ ಆರಂಭಿಸುವರು. ಬೇವು-ಬೆಲ್ಲ ನೀರಿನ ಸ್ನಾನ, ಬೇವು-ಬೆಲ್ಲದ ಸೇವನೆ ಜತೆಗೆ ಹೊಸಬಟ್ಟೆ ಈ ದಿನದ ಇನ್ನೊಂದು ಪ್ರಮುಖ ವಿಶೇಷತೆಯಾಗಿದೆ. ಬೆಲ್ಲ ಸಿಹಿನೀಡಿದರೆ, ಬೇವಿನ ಕಹಿ ಆರೋಗ್ಯವನ್ನೇ ನೀಡುತ್ತದೆ. ಎಲ್ಲದುದರ ಸ್ವೀಕಾರದಲ್ಲೂ ಸಮಾನತೆಯಿರಲಿ ಎನ್ನುವುದೇ ಈ ಹಬ್ಬದ ಆಶಯವಾಗಿದೆ.

ಈ ಹಬ್ಬದ ಮಾರನೇ ದಿನ “ವರ್ಷ ತೊಡಕು’ ಆಚರಿಸಲಾಗುತ್ತದೆ. ದೇವರಲ್ಲೊಂದು ಕೋರಿಕೆಯ ಮೂಲಕ ಸುಖ-ಶಾಂತಿ ಕೇಳಿಕೊಳ್ಳಲು ಇದೊಂದು ದಿನವಷ್ಟೇ. ಆ ದಿನ ಏನು ದೊರಕುವುದೋ ವರ್ಷಪೂರ್ತಿ ಅದೇ ಹಸನಾಗಿರುತ್ತದೆ ಎನ್ನುವುದು ಪೂರ್ವಜರ ನಂಬಿಕೆಯಾಗಿದೆ.

ಪ್ರಕೃತಿಯು ಹಳೆಯದೆಲ್ಲವ ಕಳೆದು ಮತ್ತೆ ಹಸುರಾಗುವ ಕಾಲದ ಆರಂಭದ ದಿನವಿದು. ಅದನ್ನು ಸಡಗರದಾಚರಣೆಯ ಮೂಲಕ ಆಹ್ವಾನಿಸಿಕೊಂಡು ಖುಷಿಪಡುವುದಿಲ್ಲಿ ಮುಖ್ಯವಾಗುತ್ತದೆ. ಹಳೆಯ ಕಹಿಯೆಲ್ಲವ ಮರೆತು ಮನೆಯ ಮಕ್ಕಳು/ಹಿರಿಯರು ಹಲವು ನೆರೆಹೊರೆಯವರಿಗೆ ಬೇವು-ಬೆಲ್ಲವ ಹಂಚುವ ಮೂಲಕ ಮತ್ತೆ ಅಲ್ಲಿ ಸಾಮರಸ್ಯ ನೆಲೆಸುತ್ತದೆ. ನೆಮ್ಮದಿಯ ಜತೆಗೆ ಸಂತಸ ನೂರ್ಮಡಿಯಾಗುತ್ತದೆ.

ಹಸುರು ಮರಗಳ ಚಿಗುರು ಆರಂಭವಾಗುವ ಈ ಪರ್ವಕಾಲದಲ್ಲಿ ಒಡೆದ ಮನಸ್ಸುಗಳೂ ಬೆಸೆಯಲಿ, ಕಷ್ಟವ ಎದುರಿಸಲು ಶಕ್ತಿ ದೊರಕಲಿ, ಮನ-ಮನದ ನಡುವೆಯಿರುವ ಅಹಂಕಾರ ಅಳಿಯಲಿ, ಪ್ರೀತಿ ನೆಲೆಸಲಿ, ಆರೋಗ್ಯ ಉಳಿಯಲಿ ಎಂಬ ಸದಾಶಯವನ್ನೊಳಗೊಂಡ ಹಬ್ಬದ ಕುರಿತು ಮುಂದಿನ ಪೀಳಿಗೆಗೂ ತಿಳಿಸಿ ಹೇಳುವುದು ನಮ್ಮ ಕರ್ತವ್ಯವಾಗಿದೆ.

„ ವಿನಯಾ ಕೌಂಜೂರು

Advertisement

Udayavani is now on Telegram. Click here to join our channel and stay updated with the latest news.

Next