ಕ್ಯಾಲಿಫೋರ್ನಿಯಾ: ಜಗತ್ತಿನ ಅತೀ ದೊಡ್ಡ ವಿಡಿಯೋ ತಾಣ ಯೂಟ್ಯೂಬ್‌ನ ಪ್ರಧಾನ ಕಚೇರಿಯ ಮೇಲೆ ಮಹಿಳೆಯೊಬ್ಬಳು ಗುಂಡಿನ ದಾಳಿ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ದಾಳಿಯಲ್ಲಿ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ದಾಳಿ ನಡೆಸಿದ ಮಹಿಳೆ ಸ್ವಯಂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
39 ರ ಹರೆಯದ ನಾಸಿಮ್ ಅಗ್ಧಾಮ್ ಎಂಬಾಕೆ ಕೃತ್ಯ ಎಸಗಿದ್ದು, ತನ್ನ ವೆಬ್‌ಸೈಟ್‌ನ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಪ್ರಕಟವಾಗಲು ತಡೆ ಹಾಕಿರುವ ವಿರುದ್ದ ಆಕ್ರೋಶಗೊಂಡು ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಏಕಾಏಕಿ ಗನ್‌ನೊಂದಿಗೆ ನುಗ್ಗಿದ ನಾಸಿಮ್ ಉದ್ಯೋಗಿಗಳನ್ನು ಬೆದರಿಸಿ ಮನ ಬಂದಂತೆ ಗುಂಡು ಹಾರಿಸಿದ್ದಾಳೆ. ಅಷ್ಟರಲ್ಲಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಯ್ತು. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆಕೆ ಸ್ವಯಂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾಳೆ.
ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.