ವಾಷಿಂಗ್ಟನ್: ಜನಪ್ರಿಯ ಯೂಟ್ಯೂಬ್ (YouTube)ನ ಮಾಜಿ ಸಿಇಒ (CEO) ಸುಸಾನ್ ವೋಜ್ಸಿಕಿ (56ವರ್ಷ) ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಶನಿವಾರ (ಆಗಸ್ಟ್ 10) ನಿಧನರಾಗಿರುವುದಾಗಿ ಆಲ್ಫಾ ಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.
ಸುಸಾನ್ ವೋಜ್ಸಿಕಿ ಅವರು 1990ರಲ್ಲಿ ಗೂಗಲ್ ನಲ್ಲಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 2014ರಿಂದ 2023ರವರೆಗೆ ಯೂಟ್ಯೂಬ್ ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಅಸಾಧಾರಣ ಪ್ರತಿಭೆಯ ಸುಸಾನ್ ನಿಧನವನ್ನು ನಂಬಲೂ ಸಾಧ್ಯವಿಲ್ಲ. ಗೂಗಲ್ ನಲ್ಲಿ ವೋಜ್ಸಿಕಿ ತಮ್ಮ ಅದ್ಭುತ ಕಾರ್ಯಶೈಲಿಯ ಮೂಲಕ ಇತಿಹಾಸ ಬರೆದಿದ್ದರು. ಅಂತರ್ಜಾಲ ತಾಣದ ರೂಪರೇಶೆಯಲ್ಲಿ ಅವರದ್ದು ಗಣನೀಯ ಕೊಡುಗೆ ಇದ್ದಿರುವುದಾಗಿ ಸುಂದರ್ ಪಿಚೈ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ವೋಜ್ಸಿಕಿ ಪತಿ ಡೆನ್ನಿಸ್ ಟ್ರೊಪರ್ ಫೇಸ್ ಬುಕ್ ಖಾತೆಯಲ್ಲಿ ಪತ್ನಿ ನಿಧನದ ವಿಷಯ ಹಂಚಿಕೊಂಡಿದ್ದು, ವೋಜ್ಸಿಕಿ ಅವಳದ್ದು ಬ್ರಿಲಿಯಂಟ್ ಮೈಂಡ್, ಆಕೆ ಹಲವರಿಗೆ ಪ್ರೀತಿಯ ವ್ಯಕ್ತಿಯಾಗಿದ್ದಳು ಎಂದು ಉಲ್ಲೇಖಿಸಿದ್ದಾರೆ.
26 ವರ್ಷಗಳ ದಾಂಪತ್ಯ ಜೀವನ, ಐದು ಮಕ್ಕಳ ತಾಯಿಯಾಗಿರುವ ವೋಜ್ಸಿಕಿ ಎರಡು ವರ್ಷಗಳ ಕಾಲ ಶ್ವಾಸಕೋಶದ ಕ್ಯಾನ್ಸರ್ ಜೊತೆ ಹೋರಾಡಿ, ಇಂದು ನಮ್ಮನ್ನೆಲ್ಲಾ ಅಗಲಿದ್ದಾಳೆ. ಸುಸಾನ್ ಕೇವಲ ನನ್ನ ಜೀವನ ಸಂಗಾತಿ ಮಾತ್ರ ಆಗಿರಲಿಲ್ಲ. ಆಕೆ ಅಪ್ರತಿಮ ಪ್ರತಿಭಾವಂತೆಯಾಗಿದ್ದಳು..ಎಂದು ಪತಿ ಡೆನ್ನಿಸ್ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.