ಮುಂಬೈ: ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದಂತೆ ದೇಶದಲ್ಲಿ ಯೂಟ್ಯೂಬ್ ಕ್ರೇಜ್ ಕೂಡಾ ಜಾಸ್ತಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬರ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ವಿಚಾರಗಳನ್ನು ಹಿಡಿದು ವಿಡಿಯೋ ಮಾಡುವ ಯೂಟ್ಯೂಬರ್ಸ್ ಸಂಖ್ಯೆಯೂ ಹೆಚ್ಚುತ್ತಿದೆ. ಇದೇ ರೀತಿ 2020ರಲ್ಲಿ ಯೂಟ್ಯೂಬರ್ಸ್ ಭಾರತೀಯ ಆರ್ಥಿಕತೆಗೆ ಸುಮಾರು 6800 ಕೋಟಿ ರೂ ಕೊಡುಗೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಒಂದು ಲಕ್ಷಕ್ಕಿಂತ ಹೆಚ್ಚು ಚಂದಾದರನ್ನು ಹೊಂದಿರುವ ಸುಮಾರು 40 ಸಾವಿರ ಯೂಟ್ಯೂಬ್ ಚಾನೆಲ್ ಗಳು ದೇಶದಲ್ಲಿದೆ. ಹೆಚ್ಚಿನ ಭಾರತೀಯ ರಚನೆಕಾರರು ಯೂಟ್ಯೂಬ್ ನಲ್ಲಿ ಅವಕಾಶಗಳನ್ನು ಮತ್ತು ಪ್ರೇಕ್ಷಕರನ್ನು ಪಡೆಯುತ್ತಿದ್ದಾರೆ. ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ಹೊಸ ವರದಿಯ ಪ್ರಕಾರ, ದೇಶದಲ್ಲಿ ಯೂಟ್ಯೂಬ್ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವವ ಬೀರುತ್ತಿದೆ.
“ದೇಶದಲ್ಲಿ ಕ್ರಿಯೇಟರ್ ಆರ್ಥಿಕತೆಯು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಂಸ್ಕೃತಿಕ ಪ್ರಭಾವದ ಮೇಲೆ ಪ್ರಭಾವ ಬೀರುವ ಮೃದು-ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಯೂಟ್ಯೂಬ್ ಪಾಲುದಾರಿಕೆಗಳ ಪ್ರಾದೇಶಿಕ ನಿರ್ದೇಶಕ ಅಜಯ್ ವಿದ್ಯಾಸಾಗರ್ ಹೇಳಿದರು.
ಇದನ್ನೂ ಓದಿ:ಎರಡು ಸ್ಥಾನಕ್ಕೆ ಮೂವರ ಸ್ಪರ್ಧೆ: ಟೆಸ್ಟ್ ತಂಡದಲ್ಲಿ ಪೂಜಾರ- ರಹಾನೆ ಸ್ಥಾನ ತುಂಬುವವರು ಯಾರು?
ಭಾರತದಲ್ಲಿ ಶೇ.80ಕ್ಕಿಂತ ಹೆಚ್ಚಿನ ಸೃಜನಶೀಲ ಉದ್ಯಮಿಗಳು ಯೂಟ್ಯೂಬ್ ಅವರ ವೃತ್ತಿಪರ ಗುರಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ.
ಯೂಟ್ಯೂಬ್ ಕಾರಣದಿಂದ ವಿಶ್ವದಾದ್ಯಂತ ಹೊಸ ಪ್ರೇಕ್ಷಕರನ್ನು ತಲುಪಲು ಸಹಾಯವಾಗಿದೆ ಎಂದು ಸುಮಾರು 92 ಪ್ರತಿಶತದಷ್ಟು ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಒಪ್ಪಿಕೊಂಡಿದ್ದಾರೆ.