ನವದೆಹಲಿ: ಮುಸ್ಕಾನ್ ಮತ್ತು ತಮನ್ನಾ ಸಹಿತ ಭಾರತದ ನಾಲ್ವರು ಬಾಕ್ಸರ್‌ಗಳು ಯುವ ಪುರುಷರ ಮತ್ತು ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಗೆಲುವು ಸಾಧಿಸಿ ಸೆಮಿಫೈನಲ್‌ಗೇರಿ ಪದಕ ಗೆಲ್ಲುವುದನ್ನು ಖಚಿತಪಡಿಸಿದ್ದಾರೆ.
ಯುವ ಏಷ್ಯನ್ ಕೂಟದ ಬೆಳ್ಳಿ ವಿಜೇತ ಕೀರ್ತಿ ಮತ್ತು ದೇವಿಕಾ ಘೋರ್ಪಡೆ ಅವರು ಸೆಮಿಫೈನಲ್ ಹಂತಕ್ಕೇರಿದ್ದು ಪದಕ ಗೆಲ್ಲುವುದನ್ನು ಖಚಿತಪಡಿಸಿದ್ದಾರೆ. ಇನ್ನೂ ನಾಲ್ಕು ಪದಕಗಳ ಸೇರ್ಪಡೆಯಿಂದಾಗಿ ಭಾರತವು ಒಟ್ಟಾರೆ 11 ಪದಕ ಗೆಲ್ಲಲಿದೆ. ಕಳೆದ ವರ್ಷದ ಕೂಟದಲ್ಲಿಯೂ ಭಾರತ 11 ಪದಕ ಜಯಿಸಿತ್ತು.
ದಿನದ ಮೊದಲ ಸ್ಪರ್ಧೆಯಲ್ಲಿ ತಮನ್ನಾ ಜಪಾನಿನ ಜುನಿ ಟೊನೆಗಾವಾ ಅವರನ್ನು ಸುಲಭವಾಗಿ ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ದೇವಿಕಾ ಜರ್ಮನಿಯ ಅಸಿಯಾ ಐರಿ ಅವರನ್ನು ಕೆಡಹಿದರು. ಮುಸ್ಕಾನ್ ಮತ್ತು ಕೀರ್ತಿ ಕೂಡ ಅಮೋಘವಾಗಿ ಆಡಿ ಮುನ್ನಡೆದರು. ಇದೇ ವೇಳೆ ಪ್ರೀತಿ ದಹಿಯಾ ರಿಥಮ್ ಮತ್ತು ಜಾಡುಮಣಿ ಸಿಂಗ್ ಮಂದೆಂಗ್‌ಬಾಮ್ ಅವರು ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ.
ಸೆಮಿಫೈನಲ್‌ನಲ್ಲಿ ಭಾರತದ ಎಂಟು ವನಿತಾ ಬಾಕ್ಸರ್‌ಗಳು ಪದಕಕ್ಕಾಗಿ ಹೋರಾಡಲಿದ್ದಾರೆ. ಮುಸ್ಕಾನ್, ತಮನ್ನಾ, ದೇವಿಕಾ, ಕೀರ್ತಿ, ಕುಂಜರಾನಿ ದೇವಿ ತೊಂಗಮ್, ಭಾವನಾ ಶರ್ಮ, ರವಿನಾ ಮತ್ತು ಲಶು ಯಾದವ್ ತಮ್ಮ ಎದುರಾಳಿಯೆದುರು ಹೋರಾಡಲಿದ್ದಾರೆ. ಫೈನಲ್ ಸ್ಪರ್ಧೆಯು ಶುಕ್ರ ಮತ್ತು ಶನಿವಾರ ನಡೆಯಲಿದೆ.