ಬೆಂಗಳೂರು: ಕೈ ಕೊಯ್ದಕೊಂಡು ವಿಂಡ್ಸರ್ ಮ್ಯಾನರ್ ಹೋಟೆಲ್ ಮೇಲ್ಸೇತುವೆ ಮೇಲೆ ನಿಂತು ಹಾರಲು ಯತ್ನಿಸಿದ ಬಿಹಾರ ಮೂಲದ ಯುವಕ ಅಜಯ್ ಕುಮಾರ್ ಇದೀಗ ಮತ್ತೂಂದು ವರಸೆ ತೆಗೆದಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಜಯ್ ಕುಮಾರ್, “ನನ್ನ ಬಳಿ ಒಂದೊಳ್ಳೆ ಮೊಬೈಲ್ ಫೋನಿಲ್ಲ. ಪೋಷಕರು ಕರೆ ಮಾಡಿದರೆ ಒಂದು ಒಳ್ಳೆ ಐಫೋನ್ ತರೋಕೆ ಹೇಳಿ ಪ್ಲೀಸ್. ಗೇಮ್ ಡೌನ್‌ಲೋಡ್ ಮಾಡಿಕೊಂಡು ಆಡಬೇಕು’ ಎಂದು ಪೊಲೀಸರ ಬಳಿ ಅಂಗಲಾಚಿದ್ದಾನೆ.
ಈತನ ಬೇಡಿಕೆಯಿಂದ ಆಶ್ಚರ್ಯ ಚಕಿತರಾದ ಪೊಲೀಸರು, ಯಾವ ಗೇಮ್ ಎಂದು ಪ್ರಶ್ನಿಸಿದರೆ, ಯಾವುದೋ ಒಂದು ಗೇಮ್ ಅಷ್ಟೇ ಎನ್ನುತ್ತಾನೆ. ಇನ್ನು ಹೆಚ್ಚಿನ ಮಾಹಿತಿ ಕೇಳಿದರೆ, “ಮಾನಸಿಕ ಒತ್ತಡ ಹೆಚ್ಚಾಗಿ ಸೇತುವೆಯಿಂದ ಹಾರಲು ಯತ್ನಿಸಿದೆ. ಮೈಸೂರಿನಲ್ಲಿ ನನ್ನ ರೂಮ್‌ಗೆ ಹೋಗಿ ನನ್ನ ಫ್ರೆಂಡ್ ಎಲ್ಲ ಹೇಳ್ತಾನೆ,’ ಎನ್ನುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಜಯ್ ಕುಮಾರ್, ಭಾನುವಾರ ರಾತ್ರಿಯಿಡೀ ನಿದ್ದೆ ಮಾಡಿಲ್ಲ. ಒಬ್ಬನೇ ಎದ್ದು ಅಳುತ್ತಾನೆ. ವಿಂಡ್ಸರ್ ಮ್ಯಾನರ್ ಹೋಟೆಲ್ ಬಳಿ ಬರುವ ಮೊದಲು ಬೇರೆಯೆಲ್ಲಿಯೋ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯಿದೆ. ಆತನ ದೇಹದ ಮೇಲಿರುವ ಗಾಯಗಳು ಈ ರೀತಿ ಶಂಕೆ ವ್ಯಕ್ತಪಡಿಸುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಮಾಡದೆ ಉಪವಾಸ ಇದ್ದು, ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಾನೆ. ಹೀಗಾಗಿ ಆತನ ಭದ್ರತೆಗಾಗಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗಾಗಲೇ ಅಜಯ್ ಪೋಷಕರಿಗೆ ಮಾಹಿತಿ ನೀಡಿದ್ದು, ಮಂಗಳವಾರ ಬೆಳಗ್ಗೆ ಬರುವ ಸಾಧ್ಯತೆಯಿದೆ. ನಂತರ ಅವರ ಸಮ್ಮುಖದಲ್ಲಿಯೇ ಅಜಯ್ ವಿಚಾರಣೆ ನಡೆಸುತ್ತೇವೆ
ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ವಿಂಡ್ಸರ್ ಮ್ಯಾನರ್ ಹೋಟೆಲ್ ಮೇಲ್ಸೇತುವೆ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದ ಅಜಯ್ ಕುಮಾರ್‌ನನ್ನು ಹೈಗ್ರೌಂಡ್ಸ್ ಪೊಲೀಸರು ರಕ್ಷಿಸಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.