Advertisement

ಸ್ಪ್ಲೆಂಡರ್‌ನಲ್ಲಿ ಯುವಕರ ದೇಶ ಪರ್ಯಟನೆ! ಭಾರತದ ಧ್ವಜ ಕಂಡು ಹಲ್ಲೆಗೆ ಮುಂದು

04:04 PM May 18, 2022 | Team Udayavani |

ಹುಬ್ಬಳ್ಳಿ: ದೇಶಾದ್ಯಂತ ಬೈಕ್‌ ಮೇಲೆ ಪ್ರವಾಸ ಕೈಗೊಳ್ಳುವವರು ಅದರಲ್ಲೂ ಜಮ್ಮು-ಕಾಶ್ಮೀರದಂತಹ ರಾಜ್ಯಗಳಿಗೆ ತೆರಳುವವರು 150 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಮೋಟಾರ್‌ ಬೈಕ್‌ ಮೇಲೆಯೇ ತೆರಳುತ್ತಾರೆ. ಆದರೆ ಧಾರವಾಡದ ಯುವಕರಿಬ್ಬರು 97 ಸಿಸಿ ಸಾಮರ್ಥ್ಯದ ಅದರಲ್ಲೂ ಸುಮಾರು 11 ವರ್ಷಗಳ ಹಳೆಯ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಮೇಲೆ 12 ರಾಜ್ಯಗಳನ್ನು ಸುತ್ತಿ ಸುಮಾರು 6,275 ಕಿಮೀ ಪ್ರಯಾಣಿಸಿದ್ದು, ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾಗಿದೆ.

Advertisement

ಧಾರವಾಡದ ವಿಜೇತಕುಮಾರ ಹೊಸಮಠ ಹಾಗೂ ಮಹ್ಮದ್‌ ರಫಿಕ್‌ ಎಂಬ ಯುವಕರು ಜಮ್ಮುವಿನಿಂದ ಕನ್ಯಾಕುಮಾರಿವರೆಗೆ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ನಲ್ಲಿ ಪ್ರಯಾಣಿಸಿದ್ದಾರೆ. ವಿಶೇಷ ಎಂದರೆ ವಿಜೇತಕುಮಾರ ಒಬ್ಬರೇ ಸುಮಾರು 6,275 ಕಿಮೀ ದೂರ ಬೈಕ್‌ ಚಾಲನೆ ಮಾಡಿದ್ದಾರೆ. ಕುಟುಂಬ ಹಾಗೂ ಸ್ನೇಹಿತರ ಆರ್ಥಿಕ ನೆರವಿನೊಂದಿಗೆ ಪ್ರವಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

18 ಸಾವಿರ ಅಡಿ ಎತ್ತರ ಪ್ರದೇಶ: ಕಳೆದ ವರ್ಷ ಅ. 8ರಂದು ಜಮ್ಮುವಿನಿಂದ ಆರಂಭವಾದ ಪ್ರಯಾಣ, ಮೈನಸ್‌ ಎರಡು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ಮೈಕೊರೆಯುವ ಚಳಿಯಲ್ಲಿ 600 ಕಿಮೀ ದೂರವನ್ನು ಮೂರು ದಿನದಲ್ಲಿ ಕ್ರಮಿಸಿ ಸಮುದ್ರಮಟ್ಟದಿಂದ ಸುಮಾರು 18 ಸಾವಿರ ಅಡಿ ಎತ್ತರ ಪ್ರದೇಶ ಲೇಲಡಾಕ್‌ನ ಕುರ್ದುಂಗ್ಲಾಕ್ಕೆ ಅ.11ರಂದು ತಲುಪಿದ್ದರು. ಅಲ್ಲಿಂದ ಸಿಯಾಚಿನ್‌ ಗಡಿ ಭಾಗದಿಂದ ಅ.12ರಿಂದ ಪ್ರಯಾಣ ಮುಂದುವರಿಸಿ ಪಂಜಾಬ್‌, ಗುಜರಾತ್‌ ಸೇರಿದಂತೆ ಸುಮಾರು 12 ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು, ಅ.21ರಂದು ಕನ್ಯಾಕುಮಾರಿ ತಲುಪಿಸಿದ್ದಾರೆ. ನಿತ್ಯ 450-500 ಕಿಮೀ ಪ್ರಯಾಣಿಸಲಾಗುತ್ತಿತ್ತು. ಜಮ್ಮುವಿನಲ್ಲಿ ವಿಶ್ವದ ಅತಿ ಎತ್ತರದ ಪ್ರದೇಶವನ್ನು ಏರಬೇಕಾದರೆ ಅಲ್ಲಿನ ಸ್ಥಳೀಯರು 150ರಿಂದ 350 ಸಿಸಿ ಸಾಮರ್ಥ್ಯದ ರಾಯಲ್‌ ಎನ್‌ ಫೀಲ್ಡ್‌ ಬೈಕ್‌ಗಳು ಮಾತ್ರ ಈ ಎತ್ತರ ಕ್ರಮಿಸಬಹುದಾಗಿದ್ದು, ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಮೇಲೆ ಹೋಗುವುದು ಸಾಧ್ಯವಿಲ್ಲ ಎಂದಿದ್ದರು. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ ವಿಜೇತಕುಮಾರ ಕೇವಲ 10 ಕಿಮೀ ವೇಗದಲ್ಲಿ ಫಸ್ಟ್‌ಗೇರ್‌ನಲ್ಲಿ 100 ಕಿಮೀ ಮೇಲೇರಿದ್ದು, 100 ಕಿಮೀ ಸಾಗುವುದರೊಳಗೆ ಬೈಕ್‌ನ 13 ಸ್ಪಾರ್ಕ್‌ ಪ್ಲಗ್‌ಗಳನ್ನು
ಬದಲಾಯಿಸಬೇಕಾಯಿತಂತೆ.

ಜಮ್ಮು-ಕಾಶ್ಮೀರದಲ್ಲಿ ಹೊರಗಡೆ ಮಲಗಲು ಸೈನಿಕರು ಅವಕಾಶ ನೀಡದ್ದರಿಂದ ಅಲ್ಲಿ ಎರಡು ದಿನ ರೂಮ್‌ ಮಾಡಿದ್ದು ಬಿಟ್ಟರೆ ಉಳಿದೆಲ್ಲ ಕಡೆ ಧಾಬಾ, ಪೆಟ್ರೋಲ್‌ ಬಂಕ್‌, ಲಾರಿಗಳು ನಿಂತಿರುವ ಕಡೆಗಳಲ್ಲಿಯೇ ಮಲಗುತ್ತಿದ್ದರು. 6,275 ಕಿಮೀ ದೂರದ ಪ್ರಯಾಣದಲ್ಲಿ ಸುಮಾರು 1,000 ಮಾಸ್ಕ್ಗಳನ್ನು ಲಾರಿ ಚಾಲಕರಿಗೆ ವಿತರಿಸಿದ್ದಾರೆ.

ಇಂಡಿಯನ್‌ ಬುಕ್‌ ರೆಕಾರ್ಡ್‌ ಸಾಧನೆ: ವ್ಯಕ್ತಿಯೊಬ್ಬರು ಬಿಎಂಡ ಬ್ಲ್ಯು 1,000 ಸಿಸಿ ಸಾಮರ್ಥ್ಯದ ಬೈಕ್‌ನಲ್ಲಿ 17 ದಿನಗಳಲ್ಲಿ ಜಮ್ಮುವಿನಿಂದ ಕನ್ಯಾಕುಮಾರಿಗೆ 3,100 ಕಿಮೀ ಪ್ರಯಾಣಿಸಿದ್ದರು. ಅವರು ದೆಹಲಿಗೆ ಬಂದು ಅಲ್ಲಿನ ಶಾರ್ಟ್‌ಕಟ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಇಲ್ಲಿಯವರೆಗಿನ ದಾಖಲೆ ಅದೇ ಆಗಿತ್ತು. ಇದು ಇಂಡಿಯನ್‌ಬುಕ್‌ ರೆಕಾರ್ಡ್‌ಗೆ ದಾಖಲಾಗಿತ್ತು. ವಿಜೇತಕುಮಾರ ಹೊಸಮಠ, ಮಹ್ಮದ್‌ ರಫಿಕ್‌ ಅವರು 97 ಸಿಸಿ ಸಾಮರ್ಥ್ಯದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ನಲ್ಲಿ ಜಮ್ಮುವಿನಿಂದ ಕನ್ಯಾಕುಮಾರಿಗೆ 13 ದಿನಗಳಲ್ಲಿ 12 ರಾಜ್ಯಗಳನ್ನೊಳಗೊಂಡು 6,275 ಕಿಮೀ ದೂರ ಕ್ರಮಿಸುವ ಮೂಲಕ ಹಿಂದಿನ ದಾಖಲೆ ಮುರಿದಿದ್ದಾರೆ. ಪ್ರಯಾಣ ವೇಳೆ ಜಿಪಿಎಸ್‌ ಅಳವಡಿಕೆ, ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಹಾಕಿಸಿಕೊಂಡ ಬಿಲ್‌, ಪೆಟ್ರೋಲ್‌ ಬಂಕ್‌ ಹಾಗೂ ಟೋಲ್‌ಗ‌ಳಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿರುವುದು ಇನ್ನಿತರೆ ಮಾಹಿತಿಗಳನ್ನು ಆಧರಿಸಿ ದಾಖಲೆ ಪುಸ್ತಕಕ್ಕೆ ಸೇರಿಸಲಾಗುತ್ತದೆ.

Advertisement

ಭಾರತ ಧ್ವಜ ಕಂಡು ಹಲ್ಲೆಗೆ ಮುಂದು
ಜಮ್ಮು-ಕಾಶ್ಮೀರದಲ್ಲಿನ ಅನಂತನಾಗ ಜಿಲ್ಲೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಒಂದು ಕೋಮಿನ ಕೆಲವರು ಪ್ರಾರ್ಥನೆ ಮುಗಿಸಿ ಆಗಮಿಸುವಾಗ ಭಾರತದ ಧ್ವಜ ಕಂಡು ಯಾರು ನೀವು, ಈ ಧ್ವಜ ಹಿಡಿದು ಯಾಕೆ ಬಂದಿದ್ದೀರಿ ಎಂದು ಹಲ್ಲೆಗೆ ಮುಂದಾಗಿದ್ದರಾದರೂ ಬೈಕ್‌ನಲ್ಲಿ ಹಿಂದಿನ ಸವಾರ ತನ್ನ ಹೆಸರು, ಪರಿಚಯ ಹೇಳಿಕೊಂಡ ನಂತರ ಸುಮ್ಮನೆ ಕಳುಹಿಸಿದ್ದು ಬಿಟ್ಟರೆ ಬೇರಾವ ಕೆಟ್ಟ ಘಟನೆಗಳು ಆಗಿಲ್ಲ. ಪ್ರಯಾಣದುದ್ದಕ್ಕೂ ಅನೇಕ ಕಡೆಗಳಲ್ಲಿ ಲಾರಿ ಚಾಲಕರೇ
ಊಟ ನೀಡಿ, ರಾತ್ರಿ ವೇಳೆ ತಮ್ಮೊಂದಿಗೆ ಇರಿಸಿಕೊಂಡಿದ್ದರು.

ಕನ್ಯಾಕುಮಾರಿ ತಲುಪುವ ವೇಳೆಗೆ ತಮಿಳುನಾಡಿನಲ್ಲಿ ಚಂಡಮಾರುತ ಕಂಡುಬಂದು ದೊಡ್ಡ ಪ್ರಮಾಣ ಮಳೆ ಬಿದ್ದಿತ್ತಲ್ಲದೆ ಬೈಕ್‌ನಲ್ಲಿ ತೆರಳುವುದು ಬೇಡ ಎಂದು ಪೊಲೀಸರು ಸಲಹೆ ನೀಡಿದ್ದರು. ಆದರೆ ಮಳೆಯಲ್ಲಿಯೇ ಪ್ರಯಾಣ ಬೆಳೆಸಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ತಲುಪಿದೆವು ಎಂಬುದು ಬೈಕ್‌ ಸವಾರರಿಬ್ಬರ ಅನಿಸಿಕೆ.

ಗುಜರಾತ್‌ನಿಂದ ಈಶಾನ್ಯ ರಾಜ್ಯಗಳಿಗೆ ಬೈಕ್‌ ಪ್ರವಾಸ
ಮತದಾನ ಜಾಗೃತಿಗಾಗಿ2018ರಲ್ಲಿ ಧಾರವಾಡದಿಂದ ಕನ್ಯಾಕುಮಾರಿವರೆಗೆ ಇದೇ ಸ್ಪ್ಲೆಂಡರ್‌ಪ್ಲಸ್‌ ಬೈಕ್‌ನಲ್ಲಿ ಮೂರು ದಿನದಲ್ಲಿ ಸುಮಾರು 2,700 ಕಿಮೀ ಪ್ರಯಾಣ ಕೈಗೊಂಡಿದ್ದೆ. 2021ರಲ್ಲಿ ಜಮ್ಮುವಿನಿಂದ ಕನ್ಯಾಕುಮಾರಿವರೆಗೆ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಪ್ರಯಾಣ ಮಾಡಿಯಾಗಿದೆ. ಪ್ರಾಯೋಜಕರು ದೊರೆತರೆ ಜುಲೈ-ಆಗಸ್ಟ್ ನಲ್ಲಿ ಇದೇ ಬೈಕ್‌ನಲ್ಲಿ ಗುಜರಾತ್‌ನಿಂದ ಅಸ್ಸಾಂ, ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ತೆರಳಲು ನಿರ್ಧರಿಸಿದ್ದೇನೆ. ದೇಶ ಸುತ್ತಲು ಬೈಕ್‌ ಪ್ರಯಾಣ ಎಂದರೆ ಕೇವಲ 150 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳು ಬೇಕು ಎಂಬ ಅನಿಸಿಕೆ ಸುಳ್ಳಾಗಿಸಲು 11 ವರ್ಷ ಹಳೆಯದಾದ 97 ಸಿಸಿ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಸವಾರಿ ಕೈಗೊಂಡಿದ್ದೇನೆ. ಜಮ್ಮು-ಕಾಶ್ಮೀರದಲ್ಲಿ ಮೈನಸ್‌ 2 ಡಿಗ್ರಿ ಚಳಿ ಅನುಭವಿಸಿದರೆ, ರಾಜಸ್ಥಾನ, ಗುಜರಾತ್‌ನಲ್ಲಿ ಮೈ ಮೇಲೆ ಬೊಬ್ಬೆ ಬರುವಷ್ಟು ಬಿಸಿಲು ಅನುಭವಿಸಿದೆವು. ರಾತ್ರಿ ಪ್ರಯಾಣವನ್ನೇ ಹೆಚ್ಚು ಕೈಗೊಳ್ಳುತ್ತಿದ್ದೆವು. ಮುಂಬೈನಲ್ಲಿ ಕುಂದಾಪುರ ಮೂಲದವರೊಬ್ಬರು ಪೇದೆಯಾಗಿದ್ದು, ನಮ್ಮನ್ನು ತಡೆದರಾದರೂ ಪ್ರಯಾಣದ ವಿಷಯ ತಿಳಿದು ಚಹಾ ಕುಡಿಸಿ ಕಳುಹಿಸಿಕೊಟ್ಟರು. ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಿಂದ ಮೆಡಲ್‌, ಪ್ರಮಾಣ ಪತ್ರಗಳನ್ನು ಕಳುಹಿಸಿದ್ದಾರೆ.
ವಿಜೇತಕುಮಾರ ಹೊಸಮಠ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next