Advertisement

ನೌಕರಿ ತ್ಯಜಿಸಿದವನ ಕೈ ಹಿಡಿದ ಪೇರಲ-ಸೀತಾಫಲ

04:55 PM Jan 23, 2021 | Team Udayavani |

ಸಿಂದಗಿ: ಕಳೆದ ನಾಲ್ಕೈದು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿ ಆದಾಯ ಪಡೆಯುತ್ತಿರುವ ತಾಲೂಕಿನ ಕನ್ನೊಳ್ಳಿ ಗ್ರಾಮದ ಬಿಎ, ಬಿಈಡಿ ಪದವೀಧರ ಸಿದ್ದು ಬಸವರಾಜ ಸಿಂದಗಿ ಇತರೆ ಯುವ ರೈತರಿಗೆ, ಪದವೀಧರರಿಗೆ ಮಾದರಿಯಾಗಿದ್ದಾನೆ.ಕೃಷಿ ಆಧಾರಿತ ಕುಟುಂಬದಿಂದ ಬಂದ ಸಿದ್ದು ಸಿಂದಗಿ ಮೀನುಗಾರಿಕೆ ಇಲಾಖೆಯಲ್ಲಿ ಸಿಕ್ಕ ನೌಕರಿ ಮಾಡದೇ ಕೃಷಿಯತ್ತ ಹೆಜ್ಜೆ ಹಾಕಿದ. ಸಿದ್ದು ಅವರದ್ದು ಆರು ಎಕರೆ ಜಮೀನು. ಅದರಲ್ಲಿ ಒಂದೂವರೆ ಎಕರೆಯಲ್ಲಿ ಪೇರಲ,
ಒಂದೂವರೆ ಎಕರೆಯಲ್ಲಿ ಸೀತಾಫಲ, ಎರಡೂವರೆ ಎಕರೆಯಲ್ಲಿ ನಿಂಬೆ, ಅರ್ಧ ಎಕರೆಯಲ್ಲಿ ಬಾಳೆ ಕೃಷಿ ಮಾಡುತ್ತಿದ್ದಾರೆ.

Advertisement

ಸಮಗ್ರ ಕೃಷಿಯ ಭಾಗವಾಗಿ ನಾಲ್ಕು ಆಕಳುಗಳಿವೆ. ಜಮೀನಿನ ಉಳಿದ ಜಾಗದಲ್ಲಿ 200 ಹೆಬ್ಬೆವು, 10 ಕರಿಬೇವು, 10ಚಿಕ್ಕು, 10 ಮಾವು ಮರಗಳು ಪೂರಕ
ಆದಾಯಕ್ಕೆ ನೆರವಾಗಿವೆ. ನೀರಿನ ಆಸರೆಗಾಗಿ ಒಂದು ತೆರೆದ ಬಾವಿ ಇದ್ದು, ನೀರಾವರಿಗೆ ಆಧಾರವಾಗಿದೆ. ಜತೆಗೆ 4 ಆಕಳುಗಳು ಜೀವಾಮೃತ ಘಟಕ, ಸಾವಯವ ಗೊಬ್ಬರಕ್ಕೆ ಆಧಾರವಾಗಿವೆ.

ಒಂದೂವರೆ ಎಕರೆಯಲ್ಲಿ ಎಲ್‌-49 ಸುಧಾರಿತ ತಳಿಯ 500 ಪೇರಲ ಗೀಡ ನಾಟಿ ಮಾಡಿದ್ದಾರೆ. ಎರಡನೇ ವರ್ಷದ ಬೆಳೆಯಾಗಿದ್ದರಿಂದ 12 ಟನ್‌ ಬೆಳೆಯಲಾಗಿದೆ. ಒಂದುವರೆ ಎಕರೆಯಲ್ಲಿ ಎನ್‌ಎಂಕೆ ಗೋಲ್ಡನ್‌ ಸುಧಾರಿತ ತಳಿಯ 500 ಸೀತಾಫಲ ಗಿಡ ನಾಟಿ ಮಾಡಿದ್ದಾರೆ. ಒಂದನೇ ವರ್ಷದ ಬೆಳೆಯಾಗಿದ್ದರಿಂದ 5 ಟನ್‌ ಹಣ್ಣು ಬೆಳೆದಿದ್ದಾರೆ. ಪೇರಲ ಹಾಗೂ ಸೀತಾಫಲ ಹಣ್ಣುಗಳ ಮಾರಾಟದಿಂದ 5ಲಕ್ಷ ರೂ., 250 ನಿಂಬೆ ಗಿಡಗಳಿಂದ ಸರಾಸರಿ 5-6 ಲಕ್ಷ ರೂ. ಆದಾಯ ಸೇರಿದಂತೆ ಒಟ್ಟಾರೆ ವಾರ್ಷಿಕವಾಗಿ 10 ಲಕ್ಷ ರೂ.ಗಿಂತಲೂ ಹೆಚ್ಚಿನ ಆದಾಯ ಬರುತ್ತಿದೆ. ವರ್ಷಗಳು ಕಳೆದಂತೆ ಆದಾಯ ಹೆಚ್ಚುತ್ತದೆ.

ಮೊದಲ ವರ್ಷ ಸಸಿಗಳ ಖರೀದಿಗೆ ಹೆಚ್ಚು ಬಂಡವಾಳ ಅಗತ್ಯ. ಎರಡನೇ ವರ್ಷದಿಂದ ಅದರ ಖರ್ಚು ಆದಾಯದಲ್ಲಿ ಸೇರಿಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ನಿರ್ವಹಣೆ ವೆಚ್ಚ ಮಾತ್ರ. ಕೊಯ್ಲು, ಸಾಗಾಣಿಕೆ, ದರ ಏರುಪೇರುಗಳ ಜಂಜಡಗಳಿಲ್ಲ. ಖರೀದಿ ಮಾಡಿದ ತಕ್ಷಣ ಹಣ ಪಾವತಿ ಮಾಡುತ್ತಾರೆ. ಇದೆಲ್ಲವನ್ನು ಲೆಕ್ಕ ಹಾಕಿದರೆ ವರ್ಷಕ್ಕೆ ಎರಡು ಬಾರಿ ಕಟಾವು ಮಾಡುವ ಪೇರಲ, ವಾರ್ಷಿಕ ಒಂದು ಕಟಾವು ಮಾಡುವ ಸಿತಾಫಲ, ಪ್ರತಿ ವಾರದಲ್ಲಿ ಎರಡು ಬಾರಿ ಕಟಾವು ಮಾಡುವ ನಿಂಬೆ ಕೃಷಿಯಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ತೋಟಗಾರಿಕೆ ಬೆಳೆಯಿಂದ ಉತ್ತಮ ಆದಾಯ ಪಡೆಯಬಹುದಾಗಿದೆ. ದ್ರಾಕ್ಷಿ, ಪೇರು, ದಾಳಿಂಬೆ, ನಿಂಬೆಗಳಂತಹ ಬಹು ವಾರ್ಷಿಕ ಬೆಳೆಗಳ ಜತೆಗೆ
ತರಕಾರಿಯನ್ನೂ ಬೆಳೆಯಬೇಕು. ರೈತರು ತೋಟಗಾರಿಕೆ ಇಲಾಖೆ ಸದುಪಯೋಗ ಪಡಿಸಿಕೊಂಡು ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕು. ಕನ್ನೊಳ್ಳಿ ಗ್ರಾಮದ ಯುವಕ ಸಿದ್ದು ಬಸವರಾಜ ಸಿಂದಗಿ ಇತರೆ ಯುವಕರಿಗೆ ಮಾದರಿಯಾಗಿದ್ದಾರೆ. ಅಮೋಘಿ ಹಿರೇಕುರಬರ,

Advertisement

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಸಿಂದಗಿ

ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಲ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ದೇಹಕ್ಕೆ ಅಗತ್ಯವಾಗಿ ಬೇಕಿರುವ ಪ್ರಮುಖ
ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು.

ಡಾ|ಶಿವಾನಂದ ಹೊಸಮನಿ, ವೈದ್ಯರು, ಸಿಂದಗಿ

ತೋಟಗಾರಿಕೆ ಬೆಳೆಯಿಂದ ಆದಾಯ ಹೆಚ್ಚಿಸಿರುವುದಲ್ಲದೇ ಆರೋಗ್ಯವೂ ವೃದ್ಧಿಯಾಗಿದೆ. ಖುಷಿ ತಂದಿದೆ. ಪೇರಲ, ಸೀತಾಫಲ ಕೃಷಿ ನಿರ್ವಹಣೆಗೆ 7353441305ಗೆ ಸಂಪರ್ಕಿಸಬೇಕು.
ಸಿದ್ದು ಸಿಂದಗಿ, ಯುವ ಕೃಷಿಕ, ಕನ್ನೊಳ್ಳಿ

*ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next