Advertisement

ಔದ್ಯಮಿಕ ಕೌಶಲಕ್ಕೆ  ಯುವೋದ್ಯಮಿ ತರಬೇತಿ

05:27 PM Nov 26, 2018 | Team Udayavani |

ಹುಬ್ಬಳ್ಳಿ: ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಟೈ ವತಿಯಿಂದ ಯುವೋದ್ಯಮಿ ವಿಶೇಷ ತರಬೇತಿ ಶಿಬಿರ ಇಲ್ಲಿನ ಐಎಂಎಸ್‌ಆರ್‌ ಸಭಾಂಗಣದಲ್ಲಿ ರವಿವಾರ ನಡೆಯಿತು. ಟೈ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ ಮಾತನಾಡಿ, ಪ್ರೌಢಶಾಲೆ ಹಂತದಿಂದ ವಿದ್ಯಾರ್ಥಿಗಳಲ್ಲಿ ಉದ್ಯಮದ ಪರಿಕಲ್ಪನೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಟೈ ವತಿಯಿಂದ ಯುವೋದ್ಯಮ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. 16 ವಾರಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉದ್ಯಮದ ಬಗ್ಗೆ ಕಲಿಸಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಔದ್ಯಮಿಕ ಕೌಶಲ ಮೂಡುತ್ತದೆ ಎಂದರು.

Advertisement

ಯುವೋದ್ಯಮಿ ತರಬೇತುದಾರ ವಿಜಯ ಮಾನೆ ಮಾತನಾಡಿ, ನಮ್ಮ ಭಾಗದಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೊರತೆಯಿಲ್ಲ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿದರೆ ವಿದೇಶಿಗರಿಗೂ ಸ್ಪರ್ಧೆಯೊಡುತ್ತಾರೆ. ಈ ಹಿಂದೆ ನಡೆದ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ಇದು ನಮ್ಮ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಪ್ರೌಢಾವಸ್ಥೆಯಲ್ಲಿ ಉದ್ಯಮದ ಬಗ್ಗೆ ಅರಿವು ಮೂಡಿಸುವುದರಿಂದ ಈ ಕ್ಷೇತ್ರದ ಅಭಿರುಚಿ ಹೆಚ್ಚಲು ಕಾರಣವಾಗುತ್ತದೆ ಎಂದು ಹೇಳಿದರು.

ಐಎಂಎಸ್‌ಆರ್‌ನ ನಿರ್ದೇಶಕ ಡಾ| ಪ್ರಸಾದ ರೂಡಗಿ ಮಾತನಾಡಿ, ಪ್ರಸುತ್ತ ಶಾಲಾ ಪಠ್ಯಗಳು ಸಮಗ್ರ ವಿಕಾಸ ನೀಡುತ್ತಿಲ್ಲ. ಹೆಚ್ಚು ಅಂಕ ಗಳಿಸುವುದಕ್ಕೆ ಸೀಮಿತವಾಗಿ ಲೋಕ ಜ್ಞಾನ ಕಡಿಮೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಕೌಶಲ್ಯಪೂರ್ಣ ಹಾಗೂ ಸಮಯಪ್ರಜ್ಞೆ ಇರುವ ಉದ್ಯಮಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಅಗತ್ಯವಿದೆ. ಇಂತಹ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಜ್ಞಾನದೊಂದಿಗೆ ಊದ್ಯೋಗಿಕ ಜ್ಞಾನ ನೀಡಲಾಗುತ್ತಿದೆ ಎಂದರು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಟೈ ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲಗೌಡ, ಉದ್ಯಮಿ ಪ್ರಸಾದ್‌ ಪಾಟೀಲ, ಟೈ ಸಂಚಾಲಕ ಮನೋಹರ ಜೋಶಿ ಇನ್ನಿತರರಿದ್ದರು.

ಧಾರವಾಡದಲ್ಲಿ ತರಬೇತಿ ಶಿಬಿರ
ಯುವೋದ್ಯಮಿ ತರಬೇತಿಯನ್ನು ಧಾರವಾಡದಲ್ಲಿ ಆಯೋಜಿಸುವ ಕುರಿತು ಬೇಡಿಕೆಗಳು ಬಂದ ಹಿನ್ನೆಲೆಯೆಲ್ಲಿ ಡಿ. 9ರಂದು ತರಬೇತಿ ಶಿಬಿರ ನಡೆಸಲು ನಿರ್ಧರಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳುವವರು ಮಾಹಿತಿಗೆ ಮೊ: 70907 82693, 70907 82692 ಸಂಪರ್ಕಿಸುವಂತೆ ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ ನಾಡಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next