ಬ್ಯಾಡಗಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ದಿನಾಚರಣೆ ಅಂಗವಾಗಿ ಹಾವೇರಿ ಜಿಲ್ಲಾಮಟ್ಟದ ರಾಷ್ಟ್ರೀಯ ಯುವದಿನ ಹಾಗೂ ಯುವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾವೇರಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಭಾರತದ ಹಿರಿಮೆ ಜಗತ್ತಿನ ಎಲ್ಲೆಡೆ ಪಸರಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲಬೇಕು ಎಂದರು.
ಇದನ್ನೂ ಓದಿ: ಕನ್ನಡ ಧ್ವಜ ತೆರವಿಗೆ ಮೋರ್ಚಾ
ಸಾಂಸ್ಕೃತಿಕ ವಿಭಾಗದಿಂದ ಹಾವೇರಿ ಜಿಲ್ಲಾಮಟ್ಟದ ಚರ್ಚಾಕೂಟ ಸ್ಪರ್ಧೆ ಹಮ್ಮಿಕೊಂಡಿದ್ದು, ಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಹಾನಗಲ್‌ನ ಕುಮಾರೇಶ್ವರ ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ ಹಂಚಿನಮನಿ ಪ್ರಥಮ, ಮೊಟೆಬೆನ್ನೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರುಣಕುಮಾರದ್ವಿತೀಯ, ಬಂಕಾಪುರ ಸ.ಪ್ರ.ದ. ಕಾಲೇಜಿನ ಹೊನ್ನಪ್ಪ ಒಲೇಕಾರ ತೃತೀಯ ಸ್ಥಾನ ಗಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ| ಪಿ.ಕೆ. ಬಿನ್ನಾಳ ವಹಿಸಿದ್ದರು. ಮಂಜುಳಾ ಪಡಗೊದಿ ಇದ್ದರು. ಡಾ| ಜೆ.ಸಿ. ಇಂಡಿಮಠ, ಪ್ರೊ| ಚಂದ್ರಕುಮಾರ ಎಸ್. ಹಾಗೂ ಸುನಿತಾ ಎಚ್. ಮತ್ತು ಜ್ಯೋತಿ ಬನ್ನಿ ಹಟ್ಟಿ ಚರ್ಚಾಗೋಷ್ಠಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಡಾ| ನಿಂಗಪ್ಪ ಅರಬಗೊಂಡ ಸ್ವಾಗತ ಹಾಗೂ ಚರ್ಚಾ ಗೋಷ್ಠಿ ನಿರ್ವಹಿಸಿದರು.