ಹಾಸನ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಮುಂಭಾಗ ಸೌದೆ ಒಲೆಯಲ್ಲಿ ಚಹಾ ಕಾಯಿಸುವ ಮೂಲಕ ಅಡುಗೆ ಅನಿಲದ ದರ ಹೆಚ್ಚಳ ಮಾಡಿರುವುದನ್ನು ಅಣಕಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಚ್ಛೇ ದಿನ್ ಮರೀಚಿಕೆ: ನಗರದ ಬಿ.ಎಂ.ರಸ್ತೆ ಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಎನ್.ಆರ್. ವೃತ್ತದ ಮೂಲಕ ಹೇಮಾವತಿ ಪ್ರತಿಮೆ ಬಳಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, 2014ರಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶವನ್ನು ಆಳುತ್ತಿದೆ. ದೇಶಕ್ಕೆ ಅಚ್ಛೇ ದಿನ್ ತರುತ್ತೇವೆ. ಯುವಕರಿಗೆ ಉದ್ಯೋಗ ಕೊಡುತ್ತೇವೆ. ಮಹಿಳೆಯರಿಗೆ ಸ್ವಾವಲಂಬನೆ ಜೀವನ ಕೊಡುತ್ತೇವೆ ಎಂದು ಬಿಜೆಪಿ ಮುಖಂಡರು ಜನರನ್ನು ನಂಬಿಸಿ ಕಳೆದ 8 ವರ್ಷಗಳಲ್ಲಿ ದೇಶದ ಜನರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಜಿಂದಗಿ ಬಲು ದುಬಾರಿ: ಪೆಟ್ರೋಲ್, ಡೀಸೆಲ್ ದರ ನೂರರ ಗಡಿ ದಾಟಿದೆ. ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ ದರ 1000 ರೂ.ಆಗಿದೆ. ರಸಗೊಬ್ಬರದ ದರವೂ ಏರಿಕೆಯಾಗಿದೆ. ಜೀವನಾವಶ್ಯಕ ಔಷಧಿಗಳ ಬೆಲೆಯೂ ಏರಿಕೆಯಾಗಿದೆ. ಅಗತ್ಯ ವಸ್ತುಗಳ ದರ ಏರಿಕೆ ಪರಿಣಾಮವಾಗಿ ಹೋಟೆಲ್‌ಗಳಲ್ಲಿ ತಿಂಡಿ, ತಿನಿಸುಗಳ ದರಗಳೂ ಹೆಚ್ಚಳವಾಗಿವೆ. ಜನ ಸಾಮಾನ್ಯರು ಜೀವನ ನಡೆಸ ಲಾರದಂತಹ ನರಕವನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ನಿರ್ಮಾಣ ಮಾಡಿವೆ ಎಂದು ಕಿಡಿ ಕಾರಿದರು.
ಬಿಜೆಪಿ ಸರ್ಕಾರ ಕಿತ್ತೂಗೆಯುತ್ತೇವೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಕೊಟ್ಟ ಮಾತು ಮರೆತು ಅಧಿಕಾರವನ್ನು ಉಳಿಸಿಕೊಳ್ಳುವತ್ತ ಮಾತ್ರ ಮೇಲಾಟ ನಡೆಸುತ್ತಿವೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಗಳು ಮುಂದಾಗದೆ, ಜಾಣ ಕುರುಡು ಮೆರೆದಿವೆ. ಜನ ವಿರೋಧಿ ಬಿಜೆಪಿ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಬೇಕು. ಬಿಜೆಪಿ ಸರ್ಕಾರ ತೊಲಗಿಸುವವ ರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
ಪ್ರತಿಭಟನಾ ಮೆರವಣಿಯಲ್ಲಿ ಜಟಕಾ ಗಾಡಿ ಮೇಲೆ ದ್ವಿಚಕ್ರ ವಾಹವನ್ನಿಟ್ಟು, ಅಡುಗೆ ಅನಿಲದ ಸಿಲಿಂಡರ್ ಶವದಂತೆ ಅಣಕು ಪೂಜೆ ಮಾಡಿ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು, ಜಿಲ್ಲಾ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ತಾರಾ ಚಂದನ್, ಪಕ್ಷದ ಮುಖಂಡರಾದ ಕೆಲವತ್ತಿ ಸೋಮಶೇಖರ್, ವಿನಯ್ ಗಾಂಧಿ, ರಘು, ಸುಮಂತ್, ಸತೀಶ್, ಚಂದನ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿದೆ.