Advertisement

ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಅಹೋರಾತ್ರಿ ಪ್ರತಿಭಟನೆ

05:41 PM Aug 12, 2022 | Team Udayavani |

ಬೆಂಗಳೂರು: ಕೇಂದ್ರದ ಎನ್ ಡಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಜನ ಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮ ಜಾರಿಮಾಡಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳದ ಮೂಲಕ ಸಾಮಾನ್ಯ ಜನರಿಗೆ ಹಿಂದೆಂದೂ ಕಂಡರಿಯದ ಆಘಾತ ನೀಡಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

Advertisement

ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆ ವಿರುದ್ಧ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ನಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಎಲ್ಲಾ ರೀತಿಯಿಂದಲೂ ಹೊಡೆತ ನೀಡುತ್ತಿದೆ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ದಿನ ಬಳಕೆ ವಸ್ತುಗಳು ಸಾಮಾನ್ಯರಿಗೆ ಕೈಗೆಟುಕದಂತಾಗಿದೆ ಎಂದರು.

ನೋಟು ಅಮಾನ್ಯೀಕರಣ, ಸಾಮಾನ್ಯ ಜನತೆ ಬಳಸುವ ವಸ್ತುಗಳ ಮೇಲೆ ಜಿಎಸ್ ಟಿ ಹೇರಿಕೆ, ಹೀಗೆ ಎಲ್ಲಾ ಹಂತಗಳಲ್ಲೂ ಸಾಮಾನ್ಯರಿಗೆ ಹೊಡೆತ ಕೊಡುತ್ತಿದೆ. ಜನತೆ ಹೇಳಿಕೊಳ್ಳಲು ಸಾಧ್ಯವಾಗದಂತಹ ಯಾತನೆ ಅನುಭವಿಸುತ್ತಿದ್ದಾರೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇದು ಮೊದಲಿನಿಂದಲೂ ನಡೆಯುತ್ತಿದ್ದು, ನೂರಾರು ವರ್ಷಗಳಿಂದ ಇಂತಹ ವಿಭಜನಕಾರಿ ಪ್ರಯತ್ನಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ ಇದು ತಾತ್ಕಲಿಕ ಪ್ರಯತ್ನಗಳಾಗಿದ್ದು, ಇದಕ್ಕೆ ಜನತೆ ಅವಕಾಶ ನೀಡುವುದಿಲ್ಲ. ರಾಜ್ಯ ಸರ್ಕಾರ ಕೂಡ ಇದೇ ಧೋರಣೆ ಅನಸರಿಸುತ್ತಿದ್ದು, ಪ್ರವೀಣ್ –  ಫಾಝಿಲ್ ಎಂದು ವಿಭಜನೆ ಮಾಡಿ ಯುವ ಜನತೆ ಸಿಡಿದೇಳುವಂತಹ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇಂತಹ ವಿಭಜಕ ಶಕ್ತಿಗಳನ್ನು ಹತ್ತಿಕ್ಕಲು ಯುವ ಕಾಂಗ್ರೆಸ್ ನಿಂದ ಆಗಸ್ಟ್ 15 ರಿಂದ ಭಾರತ್ ಜೋಡೋ – ಯೂತ್ ಜೋಡೋ ಎಂಬ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಇಡಿ, ಐಟಿ ಸೇರಿದಂತೆ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಎದುರಾಳಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಯುವ ಕಾಂಗ್ರೆಸ್ ತಕ್ಕ ಉತ್ತರ ನೀಡಲಿದೆ ಎಂದರು.

Advertisement

ಇದನ್ನೂ ಓದಿ: ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ: ದರ್ಪ ತೋರಿದ್ದ ಕುರುಗೋಡು ಪಿಎಸ್ಐ ವರ್ಗಾವಣೆ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತುಮಕೂರು ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ ಅಹೋರಾತ್ರಿ ಹೋರಾಟ ಅತ್ಯಂತ ಮಹತ್ವದ್ದಾಗಿದ್ದು, ಇದೇ ರೀತಿಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವುದಾಗಿ ಘೋಷಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next