Advertisement

ನಟಿ ಕಂಗನಾ ಹಾಗೂ ಪತ್ರಕರ್ತ ಅಜಿತ್ ಬಾರ್ತಿ ವಿರುದ್ಧ ಯುವ ಕಾಂಗ್ರೆಸ್ ನಿಂದ ದೇಶ ದ್ರೋಹದ ದೂರು

06:40 PM Nov 23, 2021 | Team Udayavani |

ಬೆಂಗಳೂರು ; ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳ ವಿರುದ್ಧ ಕ್ರೂರ ಮತ್ತು ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹತ್ಮಾ ಗಾಂಧೀಜಿ – ಪಂಡಿತ್ ಜವಾಹರ್ ಲಾಲ್ ನೆಹರು ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡಿರುವ ಪತ್ರಕರ್ತ ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹ ಪ್ರಕರಣದಡಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಗರದ ಹೈಗ್ರಾಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

Advertisement

ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದ ಯುವ ಕಾಂಗ್ರೆಸ್ ನ ಕಾನೂನು ಘಟಕ ಕಂಗನಾ ರಣಾವತ್ ಮತ್ತು ಅಜಿತ್ ಬಾರ್ತಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ.

ದೇಶ ದ್ರೋಹವೆಸಗಿರುವ ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ 124-A,153-A, 500, 504, 505 ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ನಾಯಕರ ವಿರುದ್ಧ ಮಾಡಿದ ಮಾನಹಾನಿಕರ ಟೀಕೆಗಳು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 13 ಅಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಕಂಗನಾ ರಣಾವತ್ ದೇಶಕ್ಕೆ 1947 ರಲ್ಲಿ ದೊರೆತಿದ್ದು ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ, ನಿಮಗೆ ನಿಜವಾದ ಸ್ವಾತಂತ್ರ್ಯ ದೊರೆತಿದ್ದು, 2014 ರಲ್ಲಿ ಎಂದು ಹೇಳುವ ಮೂಲಕ ಸ್ವಾತಂತ್ರ್ಯ ಸೇನಾನಿಗಳಿಗೆ ಘೋರ ಅಪಮಾನ ಮಾಡಿದ್ದಾರೆ. ಇದೇ ರೀತಿ ಅಜಿತ್ ಬಾರ್ತಿ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಕೆಪಿವೈಸಿಸಿ ಕಾನೂನು ಘಟಕ ತನ್ನ ದೂರಿಯಲ್ಲಿ ತಿಳಿಸಿದೆ.

ದೂರು ದಾಖಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಂ.ಎಸ್. ರಕ್ಷಾ ರಾಮಯ್ಯ, ದೇಶ 75 ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುತ್ತಿರುವ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಮಾಡಿರುವ ಟೀಕೆಯಿಂದ ಭಾರತದ ಕೀರ್ತಿಗೆ ದೇಶ ವಿದೇಶಗಳಲ್ಲಿ ಧಕ್ಕೆಯಾಗಿದೆ. ಇವರ ವಿರುದ್ಧ ಈವರೆಗೆ ಕೇಂದ್ರದ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಕಂಗನಾ ರಣಾವತ್ ನಿಜವಾದ ದೇಶ ಭಕ್ತೆಯಾಗಿದ್ದರೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಜಾದಿ ಕಾ ಅಮೃತ್ ಮಹೋತ್ಸವ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಮಾಡಿಕೊಳ್ಳುವುದು ಸೂಕ್ತ ಎಂದು ಕಿಡಿ ಕಾರಿದರು.

Advertisement

ಇದನ್ನೂ ಓದಿ : ಪರಿಷತ್ ಚುನಾವಣೆಯಲ್ಲಿ ಹಣ-ಬಲದೊಂದಿಗೆ ಎಲ್ಲವೂ ವರ್ಕ್ ಆಗುತ್ತದೆ: ಹೆಚ್ ಸಿ ಮಹದೇವಪ್ಪ

ಕಂಗನಾ ರಣಾವತ್ ಅವರು ಅವರು ಹೇಳಿರುವುದು ಸೂಕ್ತ ಎಂದು ಕಂಡು ಬಂದಲ್ಲಿ ಮೋದಿ ಸರ್ಕಾರ ಬೇಕಿದ್ದರೆ ನವ ಭಾರತದ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಿ. ಗಾಂಧೀಜಿ ಅವರ ಹೋರಾಟವನ್ನು ಅತ್ಯಂತ ಕೀಳು ಮಟ್ಟದಿಂದ ದಿಕ್ಕರಿಸಿರುವ ಈ ನಟಿಯನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಬೇಕಿದ್ದರೆ ಬಳಸಿಕೊಳ್ಳಲಿ. ಸ್ವಚ್ಛತಾ ಅಭಿಯಾನದಲ್ಲಿ ಮಹಾತ್ವಾ ಗಾಂಧೀಜಿ ಕನ್ನಡಕದ ಲೋಗೋ ತೆಗೆದು ಕಂಗನಾ ರಾಣಾವತ್ ಲೋಗೋ ಬೇಕಿದ್ದರೆ ಹಾಕಿಕೊಳ್ಳಲಿ ಎಂದು ರಕ್ಷಾ ರಾಮಯ್ಯ ವ್ಯಂಗ್ಯವಾಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇನ್ನೂ ಹಲವು ವೀರ ಸ್ವಾತಂತ್ರ್ಯ ಹೋರಾಟಗಾರರು ಈಗಲೂ ನಮ್ಮ ಜತೆ ಬದುಕಿದ್ದಾರೆ. ಇಂತಹ ದೇಶ ದ್ರೋಹಿಗಳನ್ನು ಮುಂದಿಟ್ಟುಕೊಂಡು ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮವನ್ನು ಹೇಗೆ ಮುಂದುವರೆಸುತ್ತೀರಿ ಎಂದು ಕೆಪಿವೈಸಿಸಿ ಅಧ್ಯಕ್ಷರು ಪ್ರಶ‍್ನಿಸಿದ್ದಾರೆ.

ಇದೇ ರೀತಿಯಲ್ಲಿ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿರುವ ಅಜಿತ್ ಬಾರ್ತಿ ವಿರುದ್ಧವೂ ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ತನ್ನ ಹೋರಾಟ ತೀವ್ರಗೊಳಿಸಲಿದೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕಾನೂನು ಘಟಕದ ಅಧ್ಯಕ್ಷ ಚಾಣಕ್ಯ, ಜವಾಹರ್ ಲಾಲ್ ಬಾಲ್ ಭವನ್ ಅಧ್ಯಕ್ಷ ಸಿರಿಲ್ ಪ್ರಭು, ಕೆಪಿವೈಸಿಸಿ ಕಾರ್ಯದರ್ಶಿ ವಿಜಯ್ ಆನಂದ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next