Advertisement

ಮಾಲ್‌ನಲ್ಲಿ ಯುವಕನಿಗೆ ಹಲ್ಲೆ: ಐವರಿಗೆ ಶಿಕ್ಷೆ

11:53 PM Oct 11, 2019 | Team Udayavani |

ಮಂಗಳೂರು: ಮೂರು ವರ್ಷಗಳ ಹಿಂದೆ ವಿದ್ಯಾರ್ಥಿನಿ ಜತೆ ತಿರುಗಾಡಲು ಬಂದ ಅನ್ಯ ಕೋಮಿನ ಯುವಕನಿಗೆ ನಗರದ ಮಾಲ್‌ ಒಂದರ ಸಮೀಪ ಹಲ್ಲೆ ನಡೆಸಿದ ಪ್ರಕರಣದ ಐವರಿಗೆ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಕಾವೂರು ಜ್ಯೋತಿನಗರ ನಿವಾಸಿ ಚೇತನ್‌ (23), ಶೃಂಗೇರಿ ನೆಲ್ಲೂರು ನಿವಾಸಿ ರಕ್ಷಿತ್‌ ಕುಮಾರ್‌ (21), ಮಂಗಳೂರು ಕಂದುಕ ನಿವಾಸಿ ಅಶ್ವಿ‌ನ್‌ರಾಜ್‌ (21), ಕಾರ್ಕಳ ಇನ್ನಾ ನಿವಾಸಿ ಸುಶಾಂತ್‌ ಶೆಟ್ಟಿ (23), ಕಾರ್‌ಸ್ಟ್ರೀಟ್‌ ನಿವಾಸಿ ಶರತ್‌ ಕುಮಾರ್‌ (28) ಶಿಕ್ಷೆಗೊಳಗಾದವರು.

ಆರೋಪಿಗಳಿಗೆ ಐಪಿಸಿ 143 (ಅಕ್ರಮ ಕೂಟ) ಅನ್ವಯ 3,000 ರೂ., ಐಪಿಸಿ 147 (ಅಕ್ರಮ ಕೂಟದ ಹಲ್ಲೆ) ಅನ್ವಯ 3,000 ರೂ., ಐಪಿಸಿ 148ರಡಿ (ಮರಣಾಂತಿಕ ಆಯಧ ಬಳಕೆ) 3,000 ರೂ., ಐಪಿಸಿ 342(ಅಕ್ರಮ ಬಂಧನ) ಪ್ರಕಾರ 1,000 ರೂ., ಐಪಿಸಿ 323ರಡಿ 1,000 ರೂ. ದಂಡ ವಿಧಿಸಲಾಗಿದೆ. ಎಲ್ಲ ಆರೋಪಿಗಳು ತಲಾ 21,000 ರೂ. ದಂಡ ಪಾವತಿಸಬೇಕು ಹಾಗೂ ತಪ್ಪಿದಲ್ಲಿ 8 ತಿಂಗಳ ಸಜೆ ಅನುಭವಿಸಬೇಕಾಗಿದೆ. ದಂಡದ ಮೊತ್ತದಲ್ಲಿ 50,000 ರೂ. ಗಳನ್ನು ಹಲ್ಲೆಗೊಳಗಾದ ಯುವಕನಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ವಿವರ
ಉಡುಪಿಯ ಯುವಕನೊಬ್ಬ ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಯುವತಿಯನ್ನು ಪಾಂಡೇಶ್ವರದ ಮಾಲ್‌ಗೆ ಕರೆದುಕೊಂಡು ಹೋಗಿದ್ದ. ಸಿನೆಮಾ ನೋಡಿದ ಬಳಿಕ ಮರಳಿ ಹೋಗಲು ರಿಕ್ಷಾ ಸ್ಟ್ಯಾಂಡ್‌ಗೆ ತಲುಪಿದಾಗ 5 ಮಂದಿ ಯುವಕರ ತಂಡ ತಡೆದು ಯುವಕನನ್ನು ದೇವಸ್ಥಾನ ಸಮೀಪದ ಓಣಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಿ ಮರದ ದೊಣ್ಣೆ, ಕಬ್ಬಿಣದ ರಾಡ್‌ ಮತ್ತು ಕೈ ಕಾಲುಗಳಿಂದ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಗಾಬರಿಗೊಂಡ ಯುವತಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಳು. ಘಟನೆ ಬಳಿಕ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಅನಂತ ಮುಡೇಶ್ವರ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.

Advertisement

ವಿಚಾರಣೆ ಕೈಗೆತ್ತಿಕೊಂಡ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಯಿದುನ್ನೀಸಾ ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ತಪ್ಪಿ ತ ಸ್ಥ ರಿಗೆ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದರು. 11 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 17 ದಾಖಲೆಗಳನ್ನು ಪರಿಗಣಿಸಲಾಗಿತ್ತು.

ದೂರುದಾರ ಯುವತಿ ನ್ಯಾಯಾಲಯದ ವಿಚಾರಣೆ ಹಂತದಲ್ಲಿ ಸಾಕ್ಷಿ ಹೇಳಲು ಹಿಂದೇಟು ಹಾಕಿದ್ದಳು. ಹಾಗಾಗಿ ಕೊಲೆ ಬೆದರಿಕೆ ಆರೋಪ ಸಾಬೀತಾಗಿಲ್ಲ. ಸಾಂದರ್ಭಿಕ ಸಾಕ್ಷಿಗಳು ಮತ್ತು ಹಲ್ಲೆಗೊಳಗಾದ ಯುವಕನಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ನುಡಿದ ಸಾಕ್ಷಿಯನ್ನು ಆಧರಿಸಿ ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ.ಎಂ. ಕ್ರಾಸ್ತಾ ವಾದಿಸಿದ್ದರು.

ಶಿಕ್ಷೆಗೊಳಗಾದ 2ನೇ ಪ್ರಕರಣ
ನಗರದಲ್ಲಿ ನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿ ಶಿಕ್ಷೆಗೊಳಗಾದ 2ನೇ ಪ್ರಕರಣ ಇದಾಗಿದೆ. ಈ ಹಿಂದೆ 2011ರಲ್ಲಿ ಯುವತಿಯೊಬ್ಬಳು ತನ್ನ ಪರಿಚಯದ ಯುವಕನೊಂದಿಗೆ ಕೊಣಾಜೆಯ ಕಾಲೇಜೊಂದಕ್ಕೆ ಹೋಗುತ್ತಿದ್ದಾಗ ಯುವಕರು ಅಡ್ಡಗಟ್ಟಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next