ಕುಂಬಳೆ: ದೇಶಪ್ರೇಮದೊಂದಿಗೆ ದೇಶ ರಕ್ಷಣೆಗೆ ಯುವಕರು ಮುಂದಾಗಬೇಕಿದೆ. ರಾತ್ರಿ ಹಗಲೆನ್ನದೆ ದೇಶವನ್ನು ಕಾಯುವ ಸೈನಿಕರಿಂದ ನಾವು ನಿಶ್ಚಿಂತೆಯಿಂದ ಬಾಳಬಹುದಾಗಿದೆ. ಆದರೆ ಸೈನಿಕರು ಕಾಶ್ಮೀರದ ಗಡಿಪ್ರದೇಶದಲ್ಲಿ ಪ್ರಾಣವನ್ನು ಪಣವಾಗಿರಿಸಿ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ದೇಶ ರಕ್ಷಣೆಗೆ ಮುಂದಾಗಿದ್ದಾರೆ. ಇವರನ್ನು ನಾವು ಸದಾ ಬೆಂಬಲಿಸಬೇಕು ಎಂಬುದಾಗಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು.
ಅವೇಕ್ ಸಂಘಟನೆ ಕಾಸರಗೋಡು ಮತ್ತು ಕೊಂಡೆ ವೂರು ಶ್ರೀ ನಿತ್ಯಾನಂದ ಪೀಠಂ ಟ್ರಸ್ಟ್ ವತಿಯಿಂದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಒಂದು ತಿಂಗಳ ಕಾಲ ಜರಗಿದ ಶಿಬಿರದ ಸಮಾರಂಭದಲ್ಲಿ ಪೂಜ್ಯರು ಆಶೀರ್ವಚನ ನೀಡಿದರು.
ಅವೇಕ್ ಸಂಘಟನೆಯ ಅಧ್ಯಕ್ಷ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಶ್ರೀಕಾಂತ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಪ್ರಮುಖರಾದ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಸುಧಾಮ ಗೋಸಾಡ, ಶಶಿಧರ ಶೆಟ್ಟಿ ಗ್ರಾಮ ಚಾವಡಿ ಮುಟ್ಟ, ಸುಕುಮಾರ್ ಕುದ್ರೆಪ್ಪಾಡಿ, ನಿಖೀಲೇಶ್, ಕೆ. ಮನೋಹರನ್, ಭರತ್ ಕುಮಾರ್, ಉಮಾ ಕಡಪ್ಪುರಂ ಉಪಸ್ಥಿತರಿದ್ದರು.
ಸಂಘಟನೆಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿದರು. ಉಪಾಧ್ಯಕ್ಷ ಹರೀಶ್ ಕುಮಾರ್ ವಂದಿಸಿದರು.
ಡಿಫೆನ್ಸ್ ಪ್ರಿ ಆರ್ಮಿ ರಿಕ್ರೂಟ್‌ಮೆಂಟ್ ಕ್ಯಾಂಪಸ್ ಶಿಬಿರದಲ್ಲಿ 60 ಮಂದಿ ಯುವಕರು ಒಂದು ತಿಂಗಳ ಕಾಲ ನಿವೃತ್ತ ಸೈನಿಕರಿಂದ ಉಚಿತ ತರಬೇತಿ ಪಡೆದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.