ನಿನ್ನ ಹೂಕೆನ್ನೆಗೆ ಸವಿಮುತ್ತಗರೆಯುವ ಬಯಕೆ ಹೆಚ್ಚುತ್ತಿದೆ. ನೀನೋ ಮಾಯಾಜಿಂಕೆ. ಸಿಕ್ಕೆ ಸಿಕ್ಕೆ ಎನ್ನುವಷ್ಟರಲ್ಲಿಯೇ ಚಳ್ಳೆಹಣ್ಣು ತಿನ್ನಿಸಿ, ಕಣ್ತಪ್ಪಿಸಿ ಮರೆಯಾಗಿರುತ್ತೀಯಾ.
ಹೃದಯ ದೇಗುಲದ ಒಡತಿಯೇ…ನಿನ್ನ ಬೊಗಸೆಕಂಗಳನ್ನು ಎವೆಯಿಕ್ಕದೆ ದಿಟ್ಟಿಸುತ್ತೇನೆ. ಏಕೆ ಗೊತ್ತಾ? ಅದರಲ್ಲಿ ಯಾವುದಾದರೂ ವಂಚನೆಯ ಸಂಚೊಂದು ಸುಳಿದೀತಾ? ನಾನರಿಯದ ಸತ್ಯವನ್ನು ಮನವರಿಕೆ ಮಾಡಿಕೊಟ್ಟಿತಾ ಎಂಬ ಕಲ್ಪನೆಯ ಅನುಮಾನದೊಂದಿಗೆ ನಿನ್ನನ್ನೇ ನೋಡುತ್ತೇನೆ. ಅಂಥ ಯಾವ ಭಾವವೂ ಅಲ್ಲಿ ಕಾಣುವುದಿಲ್ಲ. ನೀನು ಕೇವಲ ನನ್ನವಳು, ನನಗೋಸ್ಕರವೇ ಬದುಕುತ್ತಿರುವವಳು, ನನ್ನ ಸಕಲ ಸಿರಿ, ಆಸೆಗಳ ಮಹಲು, ಕನಸುಗಳ ಗೋಪುರ, ಬಯಕೆಯ ತೇರು ಎಲ್ಲವೂ ನೀನೆ.
ನನ್ನ ಬಾಳ ಜಾತ್ರೆಯಲ್ಲಿ ನೀನೊಂದು ಮುಗಿಯದ ಸಂಭ್ರಮ. ಬತ್ತದ ಪ್ರೀತಿ. ಉಳಿದೆಲ್ಲ ನೆನಪುಗಳು ಕಾಡದೇ ಇರುವಷ್ಟು, ನೀನು, ನಿನ್ನ ನೆನಪುಗಳು ಬಿಡದೇ ಕಾಡತೊಡಗುತ್ತವೆ. ಒಮ್ಮೊಮ್ಮೆ ಭೀತಿಗೊಳ್ಳುತ್ತೇನೆ. ನೀನಿರದ ದಿನಗಳನ್ನು ಕಳೆಯುವುದು ಹೇಗೆ ಎಂಬ ಗೊಂದಲದಲ್ಲಿ ಸಿಲುಕುತ್ತೇನೆ. ಒಡನೆಯೇ ನೀನು ಕೊನೆಯವರೆಗೂ ನನ್ನೊಡನೆಯೇ ಇರುವವಳು ಎಂಬ ಭಾವ ನೆಮ್ಮದಿ ತರಿಸುತ್ತದೆ.
ನನ್ನನ್ನು ಬದುಕು ಬೇಸರಗೊಳಿಸುವುದಿಲ್ಲ. ಚಿಂತೆಗಳು ಹಣಿಯುವುದಿಲ್ಲ. ದುಃಖಗಳು, ಬೆಟ್ಟದಂಥ ಕಷ್ಟಗಳು ನೋವು ನೀಡುವುದಿಲ್ಲ. ಬೇರೆ ಯಾವ ಸಂಬಂಧಗಳೂ ಸಂತುಷ್ಟಗೊಳಿಸುವುದಿಲ್ಲ. ಜಗತ್ತಿನಲ್ಲಿ ನೀನೊಬ್ಬಳೇ ನನ್ನನ್ನು ಪರಿಪರಿಯಾಗಿ ಕಾಡುವುದು. ನಿನ್ನ ಸಾಮಿಪ್ಯವೇ ಸ್ವರ್ಗ ಸುಖವನ್ನು ಕರುಣಿಸುವುದು. ನಿನ್ನ ನಗೆಯೊಂದೇ ಹೊಂಬೆಳಕನ್ನು ಹರಡುವುದು.
ನೀನೀಗ ಸಕ್ಕರೆ ನಿದ್ದೆಯಲ್ಲಿರಬಹುದು. ಹೊನ್ನ ಕನಸೊಂದನ್ನು ಕಾಣುತ್ತಿರಬಹುದು. ಕನಸುಗಳಲ್ಲಿ ನಾನಿರುತ್ತೇನಾ?.. ಗೊತ್ತಿಲ್ಲ. ಹೇಗೆ ಮಲಗಿರುತ್ತೀಯೋ? ಹೊದಿಕೆ ಸರಿದರೆ ಹೊದಿಸುವವರಾರು? ಚಳಿಯಾದರೆ ಬೆಚ್ಚಗೆ ಮೈತುಂಬ ಹೊದಿಸಿ ಹಣೆಗೊಂದು ಹೂಮುತ್ತನ್ನಿತ್ತು ಕಾಯುವವರಾರು? ಎಂದು ಯೋಚಿಸುತ್ತೇನೆ. ನಾನೇನಾದರೂ ನಿನ್ನ ಬಳಿ ಇದ್ದಿದ್ದರೆ ನಿನಗೆ ಪ್ರೀತಿಯ ಚುಕ್ಕು ತಟ್ಟುತ್ತಿದ್ದೆ. ನಿದ್ದೆ ಬರುವವರೆಗೂ ಇಂಪಾದ ಹಾಡು ಕೇಳಿಸುತ್ತಿದ್ದೆ.
ನೀನು ಏಳುವವರೆಗೂ ನಿನ್ನ ಕಾಲ ಬಳಿಯಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ. ಆದರೆ ನೋಡು, ಆಸೆಗಳೆಲ್ಲ ಎದೆಯ ತಳದಲ್ಲೇ ಉಳಿಯುತ್ತವೆ. ಹೇಳಬೇಕಾದ ಮಾತುಗಳು ಗಂಟಲಿನಿಂದ ಆಚೆ ಬರುತ್ತಲೇ ಇಲ್ಲ. ಮುಗಿಯಲಾರದ ಸಂಭ್ರಮವನ್ನು ನೀನು ಎಂದು ಹೊತ್ತು ತರುತ್ತೀಯೋ ಕಾದು ನೋಡಬೇಕಿದೆ. ನಿನ್ನ ಹೂಕೆನ್ನೆಗೆ ಸವಿಮುತ್ತಗರೆಯುವ ಬಯಕೆ ಹೆಚ್ಚುತ್ತಿದೆ. ನೀನೋ ಮಾಯಾಜಿಂಕೆ. ಸಿಕ್ಕೆ ಸಿಕ್ಕೆ ಎನ್ನುವಷ್ಟರಲ್ಲಿಯೇ ಚಳ್ಳೆಹಣ್ಣು ತಿನ್ನಿಸಿ, ಕಣ್ತಪ್ಪಿಸಿ ಮರೆಯಾಗಿರುತ್ತೀಯಾ. ಆಮೇಲೆ ಉಳಿಯುವುದಷ್ಟೇ ನೀರವ ಮೌನ.
-ನಿನ್ನವನು
ನಾಗೇಶ್ ಜೆ. ನಾಯಕ