ಕೋಲಾರ: ನಾನು ಕೋಲಾರದಿಂದಲೇ ಕಣಕ್ಕಿಳಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕೋಲಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಿಮ್ಮ ಪ್ರೀತಿ ಅಭಿಮಾನ ನೋಡಿದಾಗ ನಾನು ಇಲ್ಲಿಂದಲೇ ಕಣಕ್ಕಿಳಿಯಲು ಸಿದ್ಧನಾಗಿದ್ದೇನೆ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದು ಹೇಳಿದ್ದಾರೆ.
”ರಾಜಕೀಯದಲ್ಲಿ ಉಳಿಯುಲು ಮತದಾರರ ಆಶೀರ್ವಾದವಿದ್ದರೆ ಮಾತ್ರ ಸಾಧ್ಯ. ಕೆಲ ದಿನಗಳ ಹಿಂದೆ ನಾನು ಇಲ್ಲಿಗೆ ಬಂದು ದೇವಸ್ಥಾನ,ಮಸೀದಿ ಮತ್ತು ಚರ್ಚ್ ಗಳಿಗೆ ಹೋಗಿದ್ದೆ.ಎಲ್ಲರೂ ಇಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಈಗಾಗಲೇ ನಾನು ವರುಣಾ, ಚಾಮುಂಡೇಶ್ವರಿ, ಬಾದಾಮಿಕ್ಷೇತ್ರ ಗಳಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ” ಎಂದರು.
Related Articles
ನನಗೆ ಕ್ಷೇತ್ರವಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಹಳೆಯ ಕ್ಷೇತ್ರ ವರುಣಾದಿಂದ ಕಣಕ್ಕಿಳಿಯಲು ಒತ್ತಾಯಿಸುತ್ತಿದ್ದಾರೆ. ಬಾದಾಮಿ ಜನರು ದೂರ ಅನ್ನುವುದಾದರೆ ಒಂದು ಹೆಲಿಕ್ಯಾಪ್ಟರ್ ಅನ್ನೇ ಕೊಡಿಸುವುದಾಗಿ ಹೇಳಿದ್ದಾರೆ ಎಂದರು.
ಶಾಸಕ ಶ್ರೀನಿವಾಸಗೌಡ, ಮುನಿಯಪ್ಪ, ರಮೇಶ್ ಕುಮಾರ್, ಮುನಿಶಾಮಪ್ಪ, ನಾಸೀರ್ ಅಹ್ಮದ್, ಕಾರ್ಯಕರ್ತರಾದ ನೀವು ಕೂಡ ಒತ್ತಾಯಿಸುತ್ತಿದ್ದೀರಿ. ನಿಮ್ಮ ಪ್ರೀತಿಯನ್ನು ತಿರಸ್ಕರಿಸುವುದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಸಂಸದ ಕೆ.ಎಚ್ ಮುನಿಯಪ್ಪ’ ರಾಜ್ಯದ ಅಭಿವೃದ್ಧಿ ಗೆ ನಿರಂತರವಾಗಿ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಸದ್ಯ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿರುವ ಬಾದಾಮಿ, ಪುತ್ರ ಡಾ.ಯತೀಂದ್ರ ಅವರು ಪ್ರತಿನಿಧಿಸುತ್ತಿರುವ ವರುಣಾ ಮತ್ತು ಕೋಲಾರ ಕ್ಷೇತ್ರಗಳ ಪೈಕಿ ಅಂತಿಮವಾಗಿ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನುವ ಕುರಿತು ಭಾರಿ ಚರ್ಚೆಗಳು ನಡೆದಿದ್ದವು.
ಬಾದಾಮಿಯಲ್ಲೂ ನಾನು ಅಭಿಮಾನಿಗಳು, ಕಾರ್ಯಕರ್ತರು ಒತ್ತಾಯ ಮಾಡಿದಾಗ, ಇಲ್ಲಿಂದಲೇ ಕಣಕ್ಕಿಳಿಯುತ್ತೇನೆ ಎಂದು ಅವರನ್ನು ಸಮಾಧಾನ ಪಡಿಸಿದ್ದರು.
ಕೋಲಾರದಲ್ಲಿ 2018ರಲ್ಲಿ ಕೆ. ಶ್ರೀನಿವಾಸಗೌಡ ಅವರು ಜೆಡಿಎಸ್ ನಿಂದ ಗೆಲುವು ಸಾಧಿಸಿದ್ದರು. ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ಸೇರಿ ಚುನಾವಣಾ ಸಿದ್ಧತೆ ನಡೆಸುತ್ತಿದ್ದು, ಅಭ್ಯರ್ಥಿಯಾಗುವುದು ಖಚಿತವಾಗಿದ್ದು, ಸಿದ್ದರಾಮಯ್ಯ ಅವರಿಗೆ ಈಗಾಗಲೇ ಸವಾಲು ಹಾಕಿದ್ದಾರೆ.