ನೀನೇನೇ ಹೇಳಿದರೂ, ನಾನು ನಿನ್ನನ್ನು ಮರೆತಿಲ್ಲ. ನೀನು ಎಲ್ಲೇ ಇದ್ದರೂ ಸುಖವಾಗಿರು. ಹಾಂ, ಒಂದು ವಿಷಯಕ್ಕೆ ನಾನು ನಿನಗೆ ಥ್ಯಾಂಕ್ಸ್ ಹೇಳಲೇಬೇಕು. ಯಾಕೆ ಗೊತ್ತಾ? ನೀನು ನನ್ನನ್ನು ಬಿಟ್ಟು ಹೋದ್ಮೇಲೆ ನನ್ನ ಪ್ರಪಂಚ ಬದಲಾಗಿದೆ…
ಕಣ್ಣ ಸನ್ನೆಯಲ್ಲೇ ನನ್ನ ಸಂದೇಶಕ್ಕೆ ಸಹಿ ಹಾಕಿದ ನಲ್ಲೆ ನೀನು. ಕಗ್ಗತ್ತಲು ಆವರಿಸಿದ್ದ ಬದುಕಲ್ಲಿ ಬೆಳಕಾಗಿ ಬಂದವಳು ನೀನು. ನನ್ನ ನೋಡಿದಾಗಲೆಲ್ಲಾ ಸುಮ್ ಸುಮ್ನೆ ಮುಗುಳ್ನಗೆ ಬೀರುತ್ತಿದ್ದ ನಿನ್ನ ಮುದ್ದಾದ ಮುಖಕ್ಕೆ ಮಾರುಹೋದವನು ನಾನು. ನಿನ್ನ ಮಾತಿನ ಧಾಟಿಗೆ ಮೂಕಸ್ಮಿತನಾದವನು, ನೀನೆಷ್ಟೇ ಮಾತಾಡಿದರೂ ನನ್ನ ಉತ್ತರ ಬರೀ ಮೌನವೇ… ಏಕೆಂದರೆ, ನಿನ್ನನ್ನೇ ನೋಡುತ್ತಾ ಕಳೆದು ಹೋದವನಿಗೆ ನಿನ್ನ ಮಾತು ಕೇಳುತ್ತಲೇ ಇರಲಿಲ್ಲ. ನಿನ್ನ ಕಾಲ್ಗೆಜ್ಜೆ ನಾದಕ್ಕೆ ನನ್ನ ಹೃದಯ ಬಡಿತವೇ ಮರೆತು ಹೋಗಿತ್ತು. ನೀನಿಲ್ಲದೆ ಒಂದು ಕ್ಷಣವೂ ನಾನು ಒಬ್ಬಂಟಿಯಾಗಿ ನಿಲ್ಲಲಾರೆ.
ನನ್ನ ಪ್ರೀತಿಯನ್ನು ನಿವೇದಿಸಿಕೊಳ್ಳಲು ಅದೆಷ್ಟೋ ಬಾರಿ ಪ್ರಯತ್ನಿಸಿದರೂ, ನೀನು “ಏನೋ’ ಅಂದಾಗ ಉತ್ತರಿಸದೆ ಒಳಗೊಳಗೇ ನಕ್ಕು ಸುಮ್ಮನಾಗುತ್ತಿದೆ. ನಿನ್ನೊಟ್ಟಿಗೆ ದಿನದಿನವೂ ಒಡನಾಟ ಹೆಚ್ಚಾಯ್ತು, ಸಲಿಗೆ ಅತಿಯಾಯ್ತು, ಸ್ನೇಹ ಮರೆಯಾಯ್ತು, ಪ್ರೀತಿಯ ಅಂಕುರವಾಯ್ತು. ಸಂತೆಯಲ್ಲಿದ್ರೂ ನಾನು ಏಕಾಂಗಿಯಾದೆ. ಸಮುದ್ರದ ತೀರದಲ್ಲಿ ನಿನ್ನ ಜೊತೆ ನೀರಲ್ಲಿ ಹೆಜ್ಜೆ ಹಾಕುವಾಸೆ, ಮುಸ್ಸಂಜೆ ಕಡುಗೆಂಪು ಸೂರ್ಯನ ಪ್ರತಿಬಿಂಬವನ್ನು ನೀರಲ್ಲಿ ನೋಡುತ್ತಾ ನಿನ್ನ ಜೊತೆ ನಡೆಯುವಾಸೆ. ಅದೇಕೋ ತಿಳೀತಿಲ್ಲ, ನಿನ್ನ ಜೊತೆ ಆಡಿದ ಮಾತುಗಳೇ ಮತ್ತೆ ಮತ್ತೆ ಹೃದಯದಲ್ಲಿ ಪಿಸುಗುಡುತ್ತಿವೆ. ನಿನ್ನೊಟ್ಟಿಗೆ ಕಳೆದ ಕ್ಷಣಗಳೇ ಪದೇಪದೆ ಕಾಡುತ್ತಿವೆ. ಇನ್ನು ಮುಂದೆ ನನ್ನ ಬದುಕು ಬಂಡಿಯ ಸಾರಥಿ ನೀನಾಗು ಎಂದು ಹೇಳಲು ಬಂದವನ ಹೃದಯ, ನೀನಾಡಿದ ಮಾತು ಕೇಳಿ ಕನ್ನಡಿ ಒಡೆದು ಚೂರಾಗುವಂತೆ ಚೂರಾಗಿ ಹೋಯ್ತು.
“ನನ್ನನ್ನು ಮರೆತು ಬಿಡೋ’ ಅನ್ನುವ ನಿನ್ನ ಮಾತಿನಲ್ಲೇ ಎಲ್ಲವನ್ನೂ ಅರಿತುಕೊಂಡೆ. ಹಿಂತಿರುಗಿಯೂ ನೋಡದೆ ನೀನು ಹೊರಟಾಗ, ನಿನ್ನೊಟ್ಟಿಗೆ ಕಳೆದ ಕ್ಷಣಗಳು ನೆನಪಾಗಿ ಸದ್ದಿಲ್ಲದೆ ಕೆನ್ನೆ ಮೇಲೆ ಕಣ್ಣ ಹನಿ ಜಾರಿತು. ತುಂಬಿದ ಮಂಟಪದಲ್ಲಿ ನೀನು ಬೇರೆಯವನ ಜೊತೆ ಸಪ್ತಪದಿ ತುಳಿಯುತ್ತಿದ್ದರೆ, ನನ್ನೊಟ್ಟಿಗೆ ನೀನು ಹಾಕಿದ ಪ್ರತಿಯೊಂದು ಹೆಜ್ಜೆ ಮೆಲ್ಲಗೆ ಹಿಂದೆ ಸರಿದಂತಾಗುತ್ತಿತ್ತು. ನಾನು ಕತ್ತಲ ಕೋಣೆ ಸೇರಿದ್ದೆ, ನಿನ್ನೊಟ್ಟಿಗೆ ಕಳೆದ ನೆನಪಿನ ಮಡಿಲಲ್ಲಿ ಭಾವನಾತ್ಮಕವಾಗಿ ಬದುಕುತ್ತಿದ್ದೆ. ನೀನು ಕರೆದಾಗಲೆಲ್ಲಾ, ಇರುವ ಕೆಲಸವನ್ನೆಲ್ಲ ಬದಿಗೊತ್ತಿ ನೀನೇ ನನ್ನ ಸರ್ವಸ್ವವೆಂದು ತಿಳಿದು ನನ್ನದೇ ಕನಸುಗಳನ್ನು ಕಟ್ಟಿಕೊಂಡು ಬರುತ್ತಿದ್ದೆ. ಸಂಜೆಯ ಸೂರ್ಯ ಗೂಡು ಸೇರಿದರೂ ನಾನು ಮಾತ್ರ ನಿನ್ನ ಪ್ರೀತಿಯ ಗುಂಗಲ್ಲಿ ನನ್ನ ಗೂಡನ್ನೇ ಮರೆಯುತ್ತಿದ್ದೆ. ಹೇ ಹುಡುಗಿ ಹೇಳು, ನೀನು ಮಾಡಿದ್ದು ಸರಿನಾ? ನಂಬಿದವನಿಗೆ ಏಕೆ ಕೈಕೊಟ್ಟೆ? ಮೊದಲೇ ಹೇಳಬಹುದಿತ್ತಲ್ಲ, “ನಾವು ಸ್ನೇಹಿತರಾಗಿರೋಣ’ ಎಂದು? ಅದು ಪ್ರೀತಿಗಿಂತ ಶ್ರೇಷ್ಠ.
ನೀನೇನೇ ಹೇಳಿದರೂ, ನಾನು ನಿನ್ನನ್ನು ಮರೆತಿಲ್ಲ. ನೀನು ಎಲ್ಲೇ ಇದ್ದರೂ ಸುಖವಾಗಿರು. ಹಾಂ, ಒಂದು ವಿಷಯಕ್ಕೆ ನಾನು ನಿನಗೆ ಥ್ಯಾಂಕ್ಸ್ ಹೇಳೆಬೇಕು. ಯಾಕೆ ಗೊತ್ತಾ? ನೀನು ನನ್ನನ್ನು ಬಿಟ್ಟು ಹೋದಮೇಲೆ ನಾನು ನನ್ನ ಪ್ರಪಂಚವನ್ನ ಬದಲಾಯಿಸಿಕೊಂಡೆ. ನೀನೇ ಸರ್ವಸ್ವ ಅಂದುಕೊಂಡಿದ್ದ ನನಗೆ ಈಗ ನನ್ನ ಹೆತ್ತವರೇ ಎಲ್ಲಾ. ನಿನ್ನ ನೆನಪಲ್ಲಿ ಕತ್ತಲ ಕೋಣೆ ಸೇರಿದ್ದ ನನ್ನ ಬದುಕಲ್ಲಿ ಮತ್ತೆ ಬೆಳಕನ್ನು ತಂದವರು ನನ್ನ ಹೆತ್ತವರು. ನನ್ನ ಕಣ್ಣಿಂದ ಹನಿ ಜಾರುವ ಮುನ್ನ ಅದಕ್ಕೆ ಕೈಅಡ್ಡ ಹಿಡಿದು, “ಇನ್ಯಾವತ್ತೂ ನಿನ್ನ ಕಣ್ಣಲ್ಲಿ ನೀರು ಬರದ ಹಾಗೆ ನೋಡಿಕೊಳ್ಳೋ ಜವಾಬ್ದಾರಿ ನಮ್ಮದು’ ಅಂದಾಗ, ಪಟ್ ಅಂತ ಯಾರೋ ನನ್ನ ಕೆನ್ನೆಗೆ ಬಾರಿಸಿದಂಗಾಯ್ತು! ಅರೇ ಏನಿದು? ಅವರನ್ನು ನೋಡಿಕೊಳ್ಳೋ ವಯಸ್ಸು, ಜವಾಬ್ದಾರಿ ನನ್ನದು. ಆದರೆ, ನಾನೇನು ಮಾಡ್ತಾ ಇದ್ದೀನಿ? ಇನ್ನು ನೀನೇನಿದ್ದರೂ ನನ್ನ ಬದುಕಲ್ಲಿ ಮುಗಿದ ಅಧ್ಯಾಯ. ನಾನು ಡಿಸೈಡ್ ಮಾಡಿದ್ದೀನಿ, ಇನ್ಮುಂದೆ ನಾನು ನನ್ನ ಹೆತ್ತವರಿಗಾಗಿ ಬದುಕುತ್ತೇನೆ. ನನ್ನವರನ್ನು ಮತ್ತೆ ಸೇರುವಂತೆ ಮಾಡಿದ ನಿನಗೆ ಥ್ಯಾಂಕ್ಸ್…
ಗೌರಿ ಭೀ. ಕಟ್ಟಿಮನಿ