Advertisement

ಯುವ ಮತದಾರ ಒಲಿದರೆ ಗೆಲುವು!

12:35 PM Apr 16, 2018 | |

ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಏಕೆಂದರೆ, ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟಾರೆ ಸೇರ್ಪಡೆಗೊಂಡ ಯುವ ಮತದಾರರಲ್ಲಿ ಬೆಂಗಳೂರಿನಿಂದಲೇ ಅತಿ ಹೆಚ್ಚು ನೋಂದಣಿಯಾಗಿವೆ. ಅಂದುಕೊಂಡಂತೆ ಇವರೆಲ್ಲರೂ ತಮ್ಮ ಹಕ್ಕು ಚಲಾಯಿಸಿದರೆ, ಎಂಟರಿಂದ ಹತ್ತು ಕ್ಷೇತ್ರಗಳಲ್ಲಿ ಈ ಯುವಕರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 

Advertisement

ಉಳಿದೆಡೆ ಇರುವಂತೆಯೇ ನಗರದಲ್ಲೂ ಜಾತಿ ಲೆಕ್ಕಾಚಾರ, ಅಭಿವೃದ್ಧಿ, ಮೂಲ ಸೌಕರ್ಯ, ವೈಯಕ್ತಿಕ ವರ್ಚಸ್ಸು, ಪಕ್ಷದ ಪ್ರಭಾವ ಸೇರಿ ಹಲವು ಅಂಶಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರೊಂದಿಗೆ ಯುವ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದರಿಂದ ಈ ವರ್ಗವೂ ನಿರ್ಣಾಯಕ ಆಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ರಾಜ್ಯದಲ್ಲಿ ಈ ಬಾರಿ ಅಂದಾಜು 15.42 ಲಕ್ಷ ಯುವ ಮತದಾರ ಪೈಕಿ, 2.81 ಲಕ್ಷ ಜನ ಬೆಂಗಳೂರೇ ಇದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಆಯುಕ್ತ ಕೆ.ಎನ್‌.ರಮೇಶ್‌ ಮಾಹಿತಿ ನೀಡಿದ್ದಾರೆ.

ಲೆಕ್ಕಾಚಾರ ಹೀಗೆ: ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನವೇ ಇಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಸರಾಸರಿ ಪ್ರತಿ ಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ಮತದಾರರು ಇದೇ ಮೊದಲ ಬಾರಿಗೆ ಹಕ್ಕು ಚಲಾಯಿಸಲಿದ್ದಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಅಂತರ 10ರಿಂದ 15 ಸಾವಿರ ಮತಗಳು ಇವೆ. ಅಂತಹ ಕಡೆ ಈ ಮತದಾರರು ಯಾರ ಕಡೆ ಒಲವು ತೋರುತ್ತಾರೆ ಎಂಬುದರ ಮೇಲೆ ಆ ಕ್ಷೇತ್ರದ ಭವಿಷ್ಯ ನಿರ್ಧಾರ ಆಗುತ್ತದೆ ಎಂದು ಯುವ ಮತದಾರ ನೋಂದಣಿ ಮತ್ತು ಜಾಗೃತಿ ಅಭಿಯಾನ ಕಾರ್ಯಕರ್ತ ಡಿ.ವಿ.ಆನಂದ್‌ ಅಭಿಪ್ರಾಯಪಡುತ್ತಾರೆ.

Advertisement

ಯುವ ಮತದಾರರು ಮಾತ್ರವಲ್ಲ, ನಗರದಲ್ಲಿ 10-15 ಸಾವಿರ ಅಪಾರ್ಟ್‌ಮೆಂಟ್‌ಗಳಿದ್ದು, ಅಲ್ಲಿ ಎರಡು ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಆದರೆ, ಅವರು ವೋಟು ಹಾಕಲು ಮುಂದೆಬರುತ್ತಿಲ್ಲ. ಹಾಗೊಂದು ವೇಳೆ ಅವರು ಮನಸ್ಸು ಮಾಡಿದರೆ ಸಿಲಿಕಾನ್‌ ಸಿಟಿಯಲ್ಲಿ ಈ ವರ್ಗವೂ ನಿರ್ಣಾಯಕ ಪಾತ್ರ ವಹಿಸಲಿದೆ ಎಂದೂ ಅವರು ಪ್ರತಿಪಾದಿಸುತ್ತಾರೆ.

ಮಹಿಳಾ ಮತದಾರರ ಸಂಖ್ಯೆಯೂ ಹೆಚ್ಚಳ: ಯುವ ಮತದಾರ ಮತ್ತು ಹೊಸದಾಗಿ ಮೊದಲ ಬಾರಿ ವೋಟು ಮಾಡುವವರು ಎಂದು ಎರಡು ಪ್ರಕಾರಗಳಿದ್ದು, 18-19 ವರ್ಷದ ಒಳಗಿನವರು ಯುವ ಮತದಾರರಾಗುತ್ತಾರೆ.

ಬಿಬಿಎಂಪಿಯಿಂದ ಶಾಲಾ-ಕಾಲೇಜುಗಳಲ್ಲಿ ವಿಶೇಷ ಅಭಿಯಾನ, ಸಂಚಾರಿ ಮತದಾರರ ನೋಂದಣಿ ವಾಹನ, ಬೂತ್‌ ಮಟ್ಟದ ಅಧಿಕಾರಿಗಳ ಮನೆ-ಮನೆ ಭೇಟಿ ಒಳಗೊಂಡಂತೆ ಹಲವು ಕ್ರಮಗಳಿಂದ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವುದು ಸಾಧ್ಯವಾಗಿದೆ. ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಹೇಳುತ್ತಾರೆ.

ಪ್ರತಿಯೊಂದು ಪಕ್ಷಗಳಿಗೆ ತನ್ನದೇ ಆದ ವೋಟ್‌ ಬ್ಯಾಂಕ್‌ ಇದೆ. ಅದಾವುದರಲ್ಲೂ ಈ ಯುವ ವರ್ಗ ಸೇರಿರುವುದಿಲ್ಲ. ಯಾಕೆಂದರೆ, ಅವರೆಲ್ಲಾ ರಾಜಕೀಯ ಅರಿಯದ ಮುಗªರು. ಸಾಮಾಜಿಕ ಜಾಲತಾಣದಲ್ಲಿ ಇವರು ಕ್ರಿಯಾಶೀಲವಾಗಿದ್ದರೂ, ಅಲ್ಲಿಯೂ ವಿವಿಧ ಪಕ್ಷಗಳು ಸಕ್ರಿಯವಾಗಿದ್ದಾರೆ. ಹಾಗಾಗಿ, ಯಾರಿಗೆ ವೋಟು ಹಾಕಬೇಕು ಎಂಬುದು ಅಲ್ಲಿಯೂ ಗೊಂದಲ ಹಾಗೇ ಉಳಿಯುತ್ತದೆ.

ಕೊನೆ ಕ್ಷಣದಲ್ಲಿ ಈ ಯುವಕರು ಯಾರ ಕಡೆ ಮುಖಮಾಡುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಈ ಬಾರಿ ಇಂತಹ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿಯೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಬಿ-ಪ್ಯಾಕ್‌ ಸದಸ್ಯ ಮತ್ತು ವಕೀಲ ಹರೀಶ್‌ ಹೇಳುತ್ತಾರೆ. 

ಏನೇನು ಪ್ರಭಾವ ಬೀರುತ್ತೆ?: ಬಹುತೇಕ ಎಲ್ಲ ಕಾಲೇಜುಗಳಲ್ಲಿ ಈಗ ವಾರ್ಷಿಕೋತ್ಸವ ನಡೆಯುತ್ತಿವೆ. ಅಲ್ಲಿ ಆಹ್ವಾನಿತ ನಾಯಕರು ಪ್ರಭಾವ ಬೀರಬಹುದು. ಕೆಲವರು ಸ್ಥಳೀಯ ಅಭ್ಯರ್ಥಿಗಳ ಪರ ಪ್ರಚಾರ, ಅಭಿಯಾನಗಳಲ್ಲಿ ಭಾಗವಹಿಸಿರುತ್ತಾರೆ. ಅವರೂ ಒಂದಿಷ್ಟು ಯುವಕರನ್ನು ಸೆಳೆಯುತ್ತಾರೆ.

ಇನ್ನು ಪದವಿ ಪರೀಕ್ಷೆಗಳು ಚುನಾವಣೆ ನಂತರ ಇರುವುದರಿಂದ ಮತದಾನ ಪ್ರಮಾಣವೂ ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ಹರೀಶ್‌ ಸ್ಪಷ್ಟನೆ ನೀಡುತ್ತಾರೆ. ಆದರೆ, ನಗರದಲ್ಲಿ ಮತದಾರರ ಪಟ್ಟಿ ಹೆಚ್ಚಿದ್ದರೂ ಮತದಾನದ ಪ್ರಮಾಣ ಕಡಿಮೆ ಇದೆ. ಈ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ.

ಇನ್ನು ಬೆಂಗಳೂರಿನಲ್ಲಿ ಇರುವವರು ಬಹುತೇಕ ಹೊರಗಡೆಯಿಂದ ಬಂದವರಾಗಿದ್ದು, ಈ ಪೈಕಿ ಕೆಲವರು ಎರಡೆರಡು ಮತದಾರರ ಚೀಟಿ ಹೊಂದಿರುತ್ತಾರೆ. ಮತದಾನದಂದು ರಜೆ ಇರುವುದರಿಂದ ಹಕ್ಕು ಚಲಾಯಿಸಲು ಅವರೆಲ್ಲಾ ತಮ್ಮ ಊರುಗಳಿಗೆ ಹೋಗುವವರೂ ಇರುತ್ತಾರೆ. ಈ ನಿಟ್ಟಿನಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗುತ್ತದೆ ಎಂದೂ ತಜ್ಞರು ವಿಶ್ಲೇಷಿಸುತ್ತಾರೆ. 

ಕಡಿಮೆ ಅಂತರದ ಗೆಲುವಿನ ಕ್ಷೇತ್ರಗಳು
ಕ್ಷೇತ್ರ    ಗೆಲುವಿನ ಅಂತರ

-ಹೆಬ್ಟಾಳ    5,136
-ಪುಲಿಕೇಶಿನಗರ    10,199
-ದಾಸರಹಳ್ಳಿ    10,828
-ಸಿ.ವಿ. ರಾಮನ್‌ನಗರ    8,419
-ರಾಜಾಜಿನಗರ    14,762
-ಚಿಕ್ಕಪೇಟೆ    13,059
-ಮಹಾಲಕ್ಷ್ಮೀ ಲೇಔಟ್‌    15,136
-ಜಯನಗರ    12,312

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next