ಮೈಸೂರು: ಯುವ ಸಮುದಾಯ ಕನ್ನಡವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು. ನಗರದ ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ 62ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮದುವೆಗಳ ಕರೆಯೋಲೆ, ಜಂಗಮವಾಣಿಯ ಸಂದೇಶಗಳಲ್ಲಿ ವಿನಯ, ವಿದ್ವತ್, ಉದಾರತೆಯ ಸಂಪದ್ಭರಿತ ಕನ್ನಡವನ್ನು ಯುವ ಸಮುದಾಯ ಹೆಚ್ಚು ಬಳಸಬೇಕು, ಆ ಮೂಲಕ ತಾಂತ್ರಿಕವಾಗಿಯೂ ಕನ್ನಡವನ್ನು ಬೆಳೆಸುವ ಕೆಲಸವಾಗಬೇಕು ಎಂದರು. ಮಾತೃಭಾಷೆಯ ಬಗ್ಗೆ ನಮ್ಮಲ್ಲಿ ಎಷ್ಟು ಅಭಿಮಾನವಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದ ಅವರು, ಬೇರೆ ಭಾಷೆಗಳ ಬಗ್ಗೆ ಅಭಿಮಾನವಿರಲಿ. ಆದರೆ, ಅದು ಮಾತೃಭಾಷೆಯನ್ನು ಮರೆಯುವಷ್ಟರ ಮಟ್ಟಿಗೆ ಇರಬಾರದು ಎಂದರು.
ಸತ್ತವರಿಗೆ ಶ್ರದ್ಧಾಂಜಲಿಯನ್ನೂಇಂಗ್ಲಿಷ್ ಭಾಷೆಯಲ್ಲಿ ಸಲ್ಲಿಸುತ್ತೇವೆ ಎಂದರೆ ನಮ್ಮ ಭಾಷಾಭಿಮಾನ ಹೇಗಿದೆ ಎಂಬುದನ್ನು ನೀವು ಪ್ರಶ್ನೆಮಾಡಿಕೊಳ್ಳಬಹುದು. ಇಂಗ್ಲಿಷ್ ಭಾಷೆಯನ್ನು ವಿರೋಧಿಸಿ ಎಂದು ಹೇಳುವುದಿಲ್ಲ. ಆದರೆ ಎರಡು ಸಾವಿರ ಇತಿಹಾಸವುಳ್ಳ ಪ್ರಪಂಚದಲ್ಲಿ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ಕನ್ನಡವನ್ನು ಮರೆಯಬಾರದು ಎಂದು ಹೇಳಿದರು. ನಮ್ಮಲ್ಲಿರುವ ವಿಶಾಲಮನೋಭಾವ, ಹೃದಯ ವೈಶಾಲ್ಯತೆಯ ಈ ಒಳ್ಳೆಯ ಗುಣಗಳೇ ನಮಗೆ ಮುಳುವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪಂಪ, ಕುಮಾರವ್ಯಾಸ, ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಅನೇಕ ಮಹಾಕವಿಗಳು ಕನ್ನಡ ಸಾಹಿತ್ಯವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಅದನ್ನು ಉಳಿಸಿ, ಬೆಳೆಸುವ ಶಕ್ತಿ ಯುವ ಜನರಲ್ಲಿದೆ. ಕನ್ನಡ ಪುಸ್ತಕಗಳನ್ನು ಓದುವ ಅಲ್ಲಿನ ಜಾnನವನ್ನುಗಳಿಸಿಕೊಳ್ಳುವ ಮೂಲಕ ಮಾತೃಭಾಷೆಯ ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಮಾತನಾಡಿ, ಪ್ರಸ್ತುತ ಇಂಗ್ಲಿಷ್ ಭಾಷೆ ಕನ್ನಡದ ಮೇಲೆ ಸವಾರಿ ಮಾಡುತ್ತಿದೆ ಎನ್ನುವ ಮಾತಿದೆ, ನೂರಾರು ವರ್ಷಗಳ ಕಾಲ ವಿದೇಶಿಯರ ಆಡಳಿತಕ್ಕೆ ಒಳಪಟ್ಟಾಗಲೇ ಅಳಿಯದ ಕನ್ನಡ ಇಂದಿನ ಪರಿಸ್ಥಿತಿಯಲ್ಲೂ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಹಿತಿಗಳು ಭಾವೋಪಯೋಗಿಗಳಾಗುವ ಜತೆಗೆ ಲೋಕೋಪಯೋಗಿಯಾಗಿಯೂ ಕಾರ್ಯಮಾಡುವ ಮೂಲಕ ಎಲ್ಲರಿಗೂ ಭಾಷೆಯ ಬಗ್ಗೆ ಅರಿವು ಮೂಡಿಸಬೇಕು. ಕೇವಲ ನವೆಂಬರ್ ಕನ್ನಡವಾಗದೇ ನಂಬರ್-1 ಕನ್ನಡವನ್ನಾಗಿಸಬೇಕು. ವೈಚಾರಿಕ ಚಿಂತನೆಯ ಜತೆಗೆ ಬರವಣಿಗೆಯಲ್ಲಿ ಅಷ್ಟೇಅಲ್ಲದೇ ತಾಂತ್ರಿಕವಾಗಿಯೂ ಕನ್ನಡವನ್ನು ಬಳಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲರಾದ ರಾಜೇಶ್ವರಿ, ಮೂಗೂರು ನಟರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.