ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಇಂದಿನ ಆಧುನೀಕರಣದ ಪ್ರಭಾವಕ್ಕೆ ಸಿಲುಕಿರುವ ಪರಿಣಾಮ ಬಹುತೇಕ ಯುವಕರಿಗೆ ಚರಿತ್ರೆಯ ಅರಿವು ಕಡಿಮೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ವಿಶ್ವ ಪಾರಂಪರಿಕ ದಿನಾಚರಣೆ ಅಂಗವಾಗಿ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಪಾರಂಪರಿಕ ಕಲಾ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಚಿತ್ರ ಕಲೆಗಳು ನಮ್ಮ ನಾಡು – ನುಡಿ, ಸಂಸ್ಕೃತಿ, ಪರಂಪರೆ ಹಾಗೂ ಬದುಕನ್ನು ಪ್ರತಿನಿಧಿಸುತ್ತವೆ. ಸಂಗೀತ, ಕಲೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ವಿಶ್ವ ಪಾರಂಪರಿಕ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಇಂದಿನ ಬಹುತೇಕ ಯುವಕರಿಗೆ ನಮ್ಮ ಚರಿತ್ರೆಯ ಅರಿವಿನ ಕೊರತೆ ಇರುವುದರಿಂದ ನಮ್ಮ ಯುವಪೀಳಿಗೆಗೆ ಚರಿತ್ರೆಯ ಬಗ್ಗೆ ಸಾರಿ ಹೇಳಬೇಕಿದೆ. ಆ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಕಲೆ, ಸಂಸ್ಕೃತಿ ಉಳಿಸಿ – ಬೆಳೆಸಬೇಕಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಚಿವ ಎಚ್.ಸಿ. ಮಹದೇವಪ್ಪ ಚಿತ್ರ ಬಿಡಿಸುವ ಮೂಲಕ ಕಲಾ ಶಿಬಿರಕ್ಕೆ ಚಾಲನೆ ನೀಡಿದರು. ಸೋಮವಾರದಿಂದ ಆರಂಭಗೊಂಡಿರುವ ಪಾರಂಪರಿಕ ಕಲಾ ಶಿಬಿರದಲ್ಲಿ ಪಾಲ್ಗೊಂಡಿರುವ ಕಲಾವಿದರು ಸಮಕಾಲೀನ ಚಿತ್ರಗಳು ಮತ್ತು ಮೈಸೂರಿನ ಕಲಾ ಪ್ರಕಾರಗಳನ್ನು ಚಿತ್ರಿಸಲಿದ್ದು, ಇದಾದ ಬಳಿಕ ವಸ್ತುಪ್ರದರ್ಶನ ನಡೆಯಲಿದೆ. ಶಿಬಿರದಲ್ಲಿ ರಾಯಚೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾವಿದರು ಆಗಮಿಸಿದ್ದಾರೆ.
ಮೇಯರ್ ಎಂ.ಜೆ. ರವಿಕುಮಾರ್, ಉಪ ಮೇಯರ್ ರತ್ನ ಎಂ. ಲಕ್ಷ್ಮಣ, ಪುರಾತತ್ವ ಇಲಾಖೆ ನಿರ್ದೇಶಕ ಡಾ. ಗವಿಸಿದ್ಧಯ್ಯ, ಕಾಡಾ ಅಧ್ಯಕ್ಷ ನಂಜಪ್ಪ, ವಸ್ತು ಸಂಗ್ರಹಾಲಯ ನಿರ್ದೇಶಕ ಡಾ. ಆರ್. ಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಇನ್ನಿತರರು ಹಾಜರಿದ್ದರು.