ಕೋಲಾರ: ಮಣ್ಣು ಉಳಿಸಿ ಅಭಿಯಾನವನ್ನು ಏಕಾಂಗಿಯಾಗಿ ಪಾದಯಾತ್ರೆ ಮೂಲಕ ಪ್ರಾರಂಭಿಸಿರುವ ಶಿವಮೊಗ್ಗದ ಉಡುತಡಿ ತಾಲೂಕಿನ ಯಶಸ್ ಕೋಲಾರ ತಲುಪಿದ್ದು, ಕೊಯಮತ್ತೂರು ಇಶಾ ಫೌಂಡೇಶನ್ ತನಕ ಬರಿಗಾಲಿನಲ್ಲಿ 1008 ಕಿ. ಮೀ. ನಡಿಗೆಯನ್ನು ಪ್ರಾರಂಭಿಸಿದ್ದಾನೆ.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಅಭಿಯಾನದ ಬಗ್ಗೆ ಮಾತನಾಡಿದ ಯಶಸ್ ಅವರು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಮಣ್ಣನ್ನು ಉಳಿಸಿ ಎಂದು ಮನವಿ ಮಾಡಿದರು. ಮಣ್ಣು ನಮ್ಮ ಜೀವನದ ಮೂಲವಾಗಿದೆ ಮತ್ತು ಇದೀಗ ಅದು ಅಪಾಯದಲ್ಲಿದೆ.
ಎಲ್ಲಾದಕ್ಕೂ ಕಾನೂನು, ನಿಯಮಾವಳಿಗಳು ಇವೆ, ಮಣ್ಣಿಗೂ ಸರ್ಕಾರ ನಿಯಮ ತರುವ ಮೂಲಕ, ಭೂ ಮಂಡಲ ಉಳಿಯಲು ಮಣ್ಣಿನ ಪಾತ್ರವೇನು ಎಂದು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಯುಎನ್ ಪ್ರಕಾರ, ಕೇವಲ 45-60 ವರ್ಷಗಳ ಮಣ್ಣು ಉಳಿದಿದೆ. ಇದರರ್ಥ ನಾವು ಇನ್ನೂ 60 ವರ್ಷಗಳ ಕೊಯ್ಲು ಅಥವಾ ಕೃಷಿಯನ್ನು ಹೊಂದಬಹುದು. 2050 ರ ವೇಳೆಗೆ, ನಾವು ಈಗ ಕಾರ್ಯನಿರ್ವಹಿಸದ ಹೊರತು ಭೂಮಿಯ ಶೇ. 90 ಮಣ್ಣು ಕುಸಿಯಬಹುದು. ಕೃಷಿ ಚಟುವಟಿಕೆ ಕ್ಷೀಣಿಸಿ, ಆಹಾರಕ್ಕೆ ಕುತ್ತು ಬಂದು, 3ನೇ ಮಹಾ ಯುದ್ಧವೇ ನಡೆಯುತ್ತದೆ. ಹೀಗಾಗಿ ಮರಗಳನ್ನು ಹೆಚ್ಚಾಗಿ ಬೆಳಸುವ ಮೂಲಕ ಮಣ್ಣನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಎಚ್ಚರಿಸಿದರು.
Related Articles
ಈ ಅಭಿಯಾನವನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಳ್ಳಿ. ಇದರ ಜೊತೆಗೆ ಪ್ರಧಾನಮಂತ್ರಿಗೆ ಮಣ್ಣು ಕ್ಷೀಣಿಸುತ್ತಿರುವುದು ಕುರಿತಾಗಿ ಪತ್ರ ಬರೆದು, ಮಣ್ಣಿನ ಬಗ್ಗೆ ನಿಮಗೆ ಗೊತ್ತಿರುವರಿಗೆ ಮಾಹಿತಿ ನೀಡಿ ಎಂದ ಅವರು, ವಿಶೇಷವಾಗಿ ಮಕ್ಕಳಿಗೆ, ಯುವ ಪೀಳಿಗೆಗೆ ಮಣ್ಣಿನ ಅಳಿವಿನ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದನ್ನು ಉಳಿಸುವ ಬಗ್ಗೆ ಪ್ರತಿಯೊಬ್ಬರೂ ಈ ಅಭಿಯಾನವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್, ಖಜಾಂಚಿ ಎ.ಜಿ. ಸುರೇಶ್, ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ಹಿರಿಯ ಪತ್ರಕರ್ತ ಮುನಿಯಪ್ಪ, ಬ್ರಹ್ಮಕುಮಾರಿ ಸದಸ್ಯೆ ವಾಣಿ ಆರ್.ಕೆ.ಬಹದ್ದೂರ್, ಪರಿಸರವಾದಿ ಮಹೇಶ್ ರಾವ್ ಕದಂಬ, ಯೋಗ ತರಬೇತಿ ಶಿಕ್ಷಕಿ ನವೀನ ಇತರರಿದ್ದರು.