ವಿಟ್ಲ : ವ್ಯಕ್ತಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಾಜೆ ಎಂಬಲ್ಲಿ ನಡೆದಿದೆ.
ಪೆರಾಜೆ ನಿವಾಸಿ ಪ್ರಶಾಂತ್ ನಾಯ್ಕ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ.
ರಾತ್ರಿ ಸುಮಾರು 2 ಗಂಟೆಯ ಬಳಿಕ ಈತ ಬಾವಿಗೆ ಹಾರಿರಬೇಕು ಎಂದು ಹೇಳಲಾಗುತ್ತಿದೆ. ಪ್ರಶಾಂತ್ ಅವರ ದೊಡ್ಡಮ್ಮ ವಾರಗಳ ಹಿಂದೆ ತೀರಿಕೊಂಡಿದ್ದು, ಅವರ ಉತ್ತರಕ್ರಿಯೆ ಕಾರ್ಯಕ್ರಮ ಬುಧವಾರ ಇವರ ಮನೆಯಲ್ಲಿ ನಡೆದಿತ್ತು. ಆ ಬಳಿಕ ರಾತ್ರಿ ಕೂಡ ಅದೇ ವಿಚಾರವಾಗಿ ಕಾರ್ಯಕ್ರಮದ ಊಟ ಮಾಡಿ ಸ್ನೇಹಿತರು ಹಾಗೂ ಬಂಧುಗಳು ಹೋದ ಬಳಿಕ ಎಲ್ಲರೂ ಮನೆಯಲ್ಲಿ ಮಲಗಿದ್ದರು.
ಆದೇ ಸಮಯದಲ್ಲಿ ಈತ ಮನೆಯಿಂದ ಹೊರಗೆ ಬಂದು ಮನೆಯ ಸಮೀಪದ ಬಾವಿಗೆ ಹಾರಿರಬೇಕು ಎಂದು ಶಂಕಿಸಲಾಗಿದೆ.
ನೇರಳಕಟ್ಟೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ಒಂದು ವರ್ಷ ಹಿಂದೆ ಮದುವೆಯಾಗಿದ್ದರು. ಸದಾ ನಗುಮೊಗದ ಪ್ರಶಾಂತ್ ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದುಕೊಂಡಿದ್ದರು. ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು. ಬಿಜೆಪಿಯ ಕಾರ್ಯಕರ್ತನಾಗಿದ್ದು, ಪೆರಾಜೆ ಯುವ ವೇದಿಕೆಯ ಕಾರ್ಯದರ್ಶಿಯಾಗಿ, ಪ್ರಸ್ತುತ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದರು.
ಸ್ಥಳಕ್ಕೆ ವಿಟ್ಲ ಪೋಲೀಸರು ಆಗಮಿಸಿದ್ದು, ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ.
ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಗೂಡಿನ ಬಳಿಯ ಮುಳುಗುತಜ್ಞರು ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.