ಮಹದೇವಪುರ: “ನಿನ್ನ ಪ್ರೀತಿ ನಿಜಾನೇ ಆಗಿದ್ದರೆ ಸಾಯಿ’ ಎಂಬ ಪ್ರಿಯಕರನ “ಆತ್ಮಹತ್ಯೆ ಚಾಲೆಂಜ್’ ಸ್ವೀಕರಿಸಿದ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಸಾವಿಗೆ ಶರಣಾಗಿದ್ದಾಳೆ. ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಗನೂರು ಗ್ರಾಮದ ದಿವ್ಯಾ(19) ಎಂಬಾಕೆಯೇ ಸವಾಲಿಗಾಗಿ ಪ್ರಾಣ ಕಳೆದುಕೊಂಡ ಯುವತಿ. ಹರೀಶ್ ಎಂಬಾತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರು ದಾಖಲಾಗಿದ್ದು, ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈಕೆ ಹಲಸೂರಿನ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ಕಲಿಯುತ್ತಿದ್ದಳು. ಎದುರು ಮನೆಯ ಹರೀಶ್ ಎಂಬಾತ ದಿವ್ಯಾಳನ್ನು ಪ್ರೀತಿಸುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ದಿವ್ಯಾಳ ಪೋಷಕರಿಗೆ ಈ ಪ್ರೀತಿಯ ವಿಷಯ ಗೊತ್ತಾಗಿ, ಈಕೆಯನ್ನು ಕಾಲೇಜಿನಿಂದ ಬಿಡಿಸಿ ಮನೆಯಲ್ಲೇ ಇರಿಸಿಕೊಂಡಿದ್ದರು.
ಒಂದೂವರೆ ವರ್ಷದ ಪ್ರೀತಿ: ಇವರಿಬ್ಬರೂ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಪೊಲೀಸರ ಸಹಾಯದಿಂದ ಇವರಿಬ್ಬರನ್ನು ದಿವ್ಯಾಳ ಪೋಷಕರು ಪತ್ತೆ ಮಾಡಿದ್ದರು. ಜತೆಗೆ ಎರಡೂ ಕುಟುಂಬಗಳ ನಡುವೆ ರಾಜೀ ಪಂಚಾಯತಿ ನಡೆದು, ಪ್ರತ್ಯೇಕ ಮಾಡಲಾಗಿತ್ತು. ಇಷ್ಟಾದರೂ ದಿವ್ಯಾಳ ಪೋಷಕರನ್ನು ಯಾಮಾರಿಸಿದ್ದ ಹರೀಶ್, ಸ್ನೇಹಿತರ ಮೂಲಕ ಆಕೆಗೆ ಮೊಬೈಲ್ ಕೊಡಿಸಿ ಚಾಟಿಂಗ್ ನಡೆಸುತ್ತಿದ್ದ.
ಸಾವಿನ ಚಾಲೆಂಜ್: ಈ ಬೆಳವಣಿಗೆಗಳ ಮಧ್ಯೆ “ತಾನು ಬೇರೊಂದು ಯುವತಿಯನ್ನು ಪ್ರೀತಿಸುತ್ತಿದ್ದೇನೆ, ನಿನ್ನನ್ನು ವಿವಾಹವಾಗಬೇಕಾದರೆ 15 ಲಕ್ಷ ಕೊಡಬೇಕು. ನಿನ್ನ ಪ್ರೀತಿ ನಿಜಾನೇ ಆಗಿದ್ದರೆ ವಿಷ ಕುಡಿದು ಸಾಯಿ, ಸಾಯೋದಕ್ಕೂ ಮೀಟರ್ ಇದೆಯೇ” ಎಂದು ಹರೀಶ್ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದ. ಇದರಿಂದ ಮನನೊಂದಿದ್ದ ದಿವ್ಯಾ, ಅ.30 ರಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮನೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾಳೆ.
ಹರೀಶ್ ವಿರುದ್ಧ ದೂರು: ದಿವ್ಯಾ ಆತ್ಮಹತ್ಯೆಗೆ ಹರೀಶ್ ಪ್ರಚೋದನೆಯೇ ಕಾರಣ ಎಂದು ಪೋಷಕರು ಆವಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಹರೀಶ್ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹರೀಶ್ ಗಾಂಜಾ ವ್ಯಸನಿಯಾಗಿದ್ದು ಇದೇ ರೀತಿ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. ಇಂಥವನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.