Advertisement

28 ಗುಂಟೆ ಜಮೀನಿನಲ್ಲಿ ಬಹುಬೆಳೆ ಬೆಳೆದು ಆದಾಯ ಕಂಡುಕೊಂಡ ಯುವ ರೈತ ರೇವಣ್ಣ

03:36 PM Nov 24, 2020 | sudhir |

ಮಂಡ್ಯ: ವಾಣಿಜ್ಯ ಬೆಳೆ ಕಬ್ಬು ಹಾಗೂ ಭತ್ತ ಬೆಳೆಗೆ ತೀಲಾಂಜಲಿ ಇಟ್ಟು ಬಹುಬೆಳೆಗಳನ್ನು ಬೆಳೆದು ಪ್ರತಿ ತಿಂಗಳು ಆದಾಯ ಕಂಡುಕೊoಡಿರುವ ಯುವ ರೈತ ರೇವಣ್ಣ.

Advertisement

ಹೌದು, ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ರೈತ ರೇವಣ್ಣ ತಮಗಿರುವ 28 ಗುಂಟೆ ಜಮೀನಿನಲ್ಲಿ ವಿವಿಧ ರೀತಿಯ ಹೂವು, ಹಣ್ಣು, ತರಕಾರಿ ಬೆಳೆದು ಆದಾಯ ಕಂಡುಕೊoಡಿದ್ದಾರೆ. ಇದರಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಅಣ್ಣತಮ್ಮಂದಿರಿಗೆ ಇರುವ 28 ಗುಂಟೆ ಜಮೀನನ್ನು ಇಬ್ಭಾಗ ಮಾಡದೆ ತಮ್ಮ ರೇವಣ್ಣನೇ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅಣ್ಣನೂ ಸಹ ಸಹಕಾರ ನೀಡುತ್ತಿದ್ದು, ತಮ್ಮನ ಹೆಗಲಾಗಿ ನಿಂತಿದ್ದಾರೆ.

ವಿವಿಧ ಬಹುಬೆಳೆ:
ಕಡಿಮೆ ಜಮೀನಿದೆ. ಏನು ಮಾಡಲು ಸಾಧ್ಯ ಎನ್ನುವವರು ಹೆಚ್ಚಿದ್ದಾರೆ. ಆದರೆ ರೇವಣ್ಣ 28 ಗುಂಟೆ ಜಮೀನಿನಲ್ಲಿ ಬಹು ಬೆಳೆಗಳನ್ನು ಬೆಳೆದಿದ್ದಾರೆ. ಇದರ ಜೊತೆಗೆ ಬೇರೆಯವರ ಜಮೀನು ಗುತ್ತಿಗೆ ಪಡೆದು ಅಲ್ಲಿಯೂ ಬೆಳೆ ಬೆಳೆದಿದ್ದಾರೆ. ಕಬ್ಬು ಬೆಳೆಯಿಂದ ನಿರೀಕ್ಷಿತ ಆದಾಯ ಬರದಿದ್ದ ಕಾರಣ ಬಹುಬೆಳೆಯತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ:ನಿನಗೆ ತಾಕತ್ತಿದ್ದರೆ ರಾಜ್ಯ ಬಂದ್ ಮಾಡು ನೋಡೋಣ: ವಾಟಾಳ್ ನಾಗರಾಜ್ ಗೆ ರೇಣುಕಾಚಾರ್ಯ ಸವಾಲು

Advertisement

300 ಏಲಕ್ಕಿ ಬಾಳೆ ಗಿಡ, 15 ಸಪೋಟ, 40 ತೆಂಗು, 150 ಅಡಿಕೆ, 5 ಗುಂಟೆಯಲ್ಲಿ ಕನಕಾಂಬರ, ಕಾಕಟ ಹೂವು ಬೆಳೆದಿದ್ದಾರೆ. ಇದರ ಜೊತೆಗೆ 2 ಎಮ್ಮೆ ಹಾಗೂ 4 ಆಡುಗಳನ್ನು ಸಾಕಿದ್ದಾರೆ. ಬೇರೆಯವರ ಒಂದೂವರೆ ಎಕರೆ ಜಮೀನು ಗುತ್ತಿಗೆ ಪಡೆದಿರುವ ಇವರು, ಅಲ್ಲಿಯೂ ತರಕಾರಿ, ಹೂವು, ಬಾಳೆ ಬೆಳೆದಿದ್ದಾರೆ.

ಮಧ್ಯವರ್ತಿಗಳಿಂದ ದೂರ:
ರೈತ ರೇವಣ್ಣ ಮಧ್ಯವರ್ತಿಗಳಿಂದ ದೂರ ಉಳಿದಿದ್ದಾರೆ. ಸ್ವತಃ ಇವರೇ ಖುದ್ದಾಗಿ ಹೂವು, ಬಾಳೆ ಹಣ್ಣು, ಸಪೋಟ, ಟೊಮ್ಯಾಟೋ ಸೇರಿದಂತೆ ವಿವಿಧ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಗುಣಮಟ್ಟದ ತಾಜಾ ತರಕಾರಿ ಗ್ರಾಹಕರಿಗೆ ಕೊಡುವುದರಿಂದ ಬೇಡಿಕೆಯೂ ಹೆಚ್ಚಿದೆ. ಇದರಿಂದ ತಿಂಗಳಿಗೆ ೧ ಲಕ್ಷ ರೂ.ವರೆಗೂ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ, ಊಟಕ್ಕಾಗಿ ಬಾಳೆ ಎಲೆಗಳನ್ನು ಮಾರಾಟ ಮಾಡುತ್ತಾರೆ. ಮದುವೆ ಸೇರಿದಂತೆ ವಿವಿಧ ಸಮಾರಂಭಗಳಿಗೆ ಬೇಕಾದ ಬಾಳೆ ಎಲೆಗಳನ್ನು ಸರಬರಾಜು ಮಾಡುತ್ತಾರೆ.

ನೀರಿಗೂ ಕೊರತೆ ಇಲ್ಲ:
ಬೆಳೆಗೆ ನೀರಿನ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಪಕ್ಕದಲ್ಲಿಯೇ ಕಾಲುವೆ ನೀರು ಹರಿಯುತ್ತದೆ. ಇದರ ಜೊತೆಗೆ ಜಮೀನಿನ ಬಳಿ ಹಳ್ಳವಿದ್ದು, ಸದಾ ನೀರು ತುಂಬಿರುತ್ತದೆ. ಇದೇ ನೀರನ್ನು ಬಳಸಿಕೊಂಡು ಬೆಳೆಗೆ ಹಾಯಿಸುತ್ತಾರೆ. ವರ್ಷ ಪೂರ್ತಿ ಸದಾ ಹಳ್ಳದಲ್ಲಿ ನೀರು ದೊರಕುತ್ತಿದೆ.

ಎಮ್ಮೆ ಫಾರಂ ಮಾಡುವ ಕನಸು:
9ನೇ ತರಗತಿ ಓದಿರುವ ರೇವಣ್ಣ. ಎಮ್ಮೆ ಫಾರಂ ಮಾಡಲು ಮುಂದಾಗಿದ್ದಾರೆ. ಎಮ್ಮೆ ಹಾಲಿಗೆ ಬೇಡಿಕೆ ಇರುವುದರಿಂದ ಸುಮಾರು 10 ಎಮ್ಮೆಗಳಿರುವ ಫಾರಂ ಮಾಡುವ ಕನಸು ಹೊಂದಿದ್ದಾರೆ. ಇದಕ್ಕೆ ಪತ್ನಿ ಪವಿತ್ರ ಸಹ ಸಾಥ್ ನೀಡಿದ್ದಾರೆ. ಎಮ್ಮೆ ಹಾಗೂ ಆಡುಗಳಿಗೆ ಬೇಕಾಗಿರುವ ಮೇವನ್ನು ಸ್ವತಃ ಬೆಳೆದಿದ್ದಾರೆ. ಹಿಪ್ಪುನೇರಳೆ ಹಾಗೂ ಸೀಮೆ ಹುಲ್ಲು ಬೆಳೆದುಕೊಂಡಿದ್ದಾರೆ. ಇದರಿಂದ ಮೇವಿಗೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಯುವರೈತ ಪ್ರಶಸ್ತಿ ಪ್ರದಾನ:
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಇವರನ್ನು ಗುರುತಿಸಿ ಕಳೆದ ಒಂದು ವಾರದ ಹಿಂದೆ ನಡೆದ ಕೃಷಿ ಮೇಳದಲ್ಲಿ ಮಂಡ್ಯ ತಾಲೂಕು ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರತೀ ವರ್ಷ ಪ್ರಶಸ್ತಿ:
2 ಎಮ್ಮೆಗಳನ್ನು ಸಾಕಿರುವ ಅವರು ಉತ್ತಮ ಗುಣಮಟ್ಟದ ಹಾಲು ಪೂರೈಸುವಲ್ಲಿ ಪ್ರತೀ ವರ್ಷ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿoದ ಪ್ರಶಸ್ತಿ ಇವರಿಗೆ ದೊರೆಯುತ್ತಿತ್ತು. ಇದರಿಂದ ಇವರ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾಯಿತು. ಇದನ್ನು ಮನಗಂಡ ರೇವಣ್ಣ ಪ್ರತಿದಿನ ಬೆಳಿಗ್ಗೆ ಮನೆ ಮನೆಗಳಿಗೆ ತೆರಳಿ ಹಾಲು ಹಾಕುತ್ತಿದ್ದಾರೆ. ಡೈರಿಗೆ ಹಾಕಿದ್ದಕ್ಕಿಂತ ಹೆಚ್ಚಿನ ಆದಾಯ ಇಲ್ಲಿ ಸಿಗುತ್ತಿದೆ. ಆದ್ದರಿಂದ ಕಳೆದ 4 ವರ್ಷಗಳಿಂದ ಡೈರಿಗೆ ಹಾಲು ಹಾಕುವುದನ್ನು ನಿಲ್ಲಿಸಿದ್ದೇನೆ ಎನ್ನುತ್ತಾರೆ ರೇವಣ್ಣ.

– ಎಚ್.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next