Advertisement

ಯುವ ವೈದ್ಯರು ಗ್ರಾಮೀಣರ ಸೇವೆಗೆ ಮುಂದಾಗಿ

09:30 PM Mar 09, 2020 | Lakshmi GovindaRaj |

ಚಾಮರಾಜನಗರ: ಯುವ ವೈದ್ಯರು ಗುಡ್ಡಗಾಡು, ಗಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಸಲಹೆ ಮಾಡಿದರು. ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ವೈದ್ಯಕೀಯ ವ್ಯಾಸಂಗ ಮುಗಿಸಿ ಹೊರಬರುವ ವೈದ್ಯಕೀಯ ವಿದ್ಯಾರ್ಥಿಗಳು ಮೊದಲ ಎರಡರಿಂದ ಐದು ವರ್ಷ ಗ್ರಾಮೀಣ ಭಾಗಗಳಲ್ಲಿ ಸೇವೆ ಮಾಡುವ ತೀರ್ಮಾನ ಕೈಗೊಳ್ಳಬೇಕು. ಗ್ರಾಮೀಣರ ಸೇವೆಗೆ ಮುಂದಾಗುವ ಹಂಬಲ ವಿದ್ಯಾರ್ಥಿಗಳಲ್ಲಿ ಉಂಟಾಗಬೇಕು ಎಂದರು.

ಎಲ್ಲರನ್ನೂ ಸಮಾನವಾಗಿ ಕಾಣಬೇಕು: ವೈದ್ಯ ವೃತ್ತಿ ಎಂಬುದು ಅತ್ಯಂತ ಪವಿತ್ರ ವೃತ್ತಿಯಾಗಿದೆ. ಬಡವ, ಶ್ರೀಮಂತ ಎಂಬ ಭೇದ ಭಾವ ಎಣಿಸದೆ ಎಲ್ಲರನ್ನು ಸಮಾನವಾಗಿ ಕಂಡು ಸೇವೆ ಮಾಡುವ ವೃತ್ತಿ ವೈದ್ಯರದ್ದಾಗಿದೆ. ಇಂತಹ ವೃತ್ತಿಪಾವಿತ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಮಾನ ಅವಕಾಶ: ಸಮಾಜದಲ್ಲಿ ಪುರುಷ ಮಹಿಳೆಯರ ಸಮಾನ ಅಭಿವೃದ್ಧಿ ಮುಖ್ಯವಾಗಿದೆ, ಸಮಾನ ಅವಕಾಶಗಳು ಹಕ್ಕುಗಳು ಇದ್ದಾಗ ಸಮಾಜ ಸುಸ್ಥಿರವಾಗಿರುತ್ತದೆ. ಸರ್ಕಾರ ಕೂಡ ಎಲ್ಲರಿಗೂ ಸಮಾನ ಅವಕಾಶಗಳನ್ನು ಕೊಡುವ ನಿಟ್ಟಿನಲ್ಲಿ ಮುಂದಾಗಿದೆ ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸುವಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ಇಲ್ಲಿನ ವೈದ್ಯಕೀಯ ಶಿಕ್ಷಣ ಕಾಲೇಜು ಒಳ್ಳೆಯ ಪರಿಸರದಲ್ಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಆಗಬೇಕಿರುವ ಸೌಲಭ್ಯಗಳು ಅವಶ್ಯವಿದ್ದರೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌. ಬಾಲರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ವೈದ್ಯಕೀಯ ಕಾಲೇಜಿನ ಡೀನ್‌ ಜಿ.ಎಂ. ಸಂಜೀವ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಪ್ರಸಾದ್‌, ಡಾ.ಎ.ಆರ್‌.ಬಾಬು ಉಪಸ್ಥಿತರಿದ್ದರು.

Advertisement

ಜಿಲ್ಲಾ ಆಸ್ಪತ್ರೆ, ನಿರ್ಮಾಣ ಹಂತದ ಆಸ್ಪತ್ರೆ ಕಟ್ಟಡ ಪರಿಶೀಲನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ ವೀಕ್ಷಿಸಿದರು. ಅಲ್ಲದೆ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು. ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ ಅಲ್ಲಿರುವ ವಿಭಾಗಗಳು, ವಿದ್ಯಾರ್ಥಿಗಳ ಹಾಸ್ಟೆಲ್‌ ಇನ್ನಿತರ ಸೌಲಭ್ಯ ಪರಿಶೀಲಿಸಿದರು. ಕಾಲೇಜಿಗೆ ಬೇಕಿರುವ ಒದಗಿಸಿರುವ ಅನುಕೂಲಗಳು, ಅವಶ್ಯವಿರುವ ಇನ್ನಿತರ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಬಳಿಕ ವೈದ್ಯಕೀಯ ಕಾಲೇಜಿನ ಬಳಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮಾರ್ಥ್ಯಉಳ್ಳ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ನಿರ್ಮಾಣ ಕಾಮಗಾರಿಗೆ ಬಳಸಲಾಗುತ್ತಿರುವ ಸಾಮಗ್ರಿಗಳನ್ನು ವೀಕ್ಷಿಸಿದ ಸಚಿವರು ಗುಣಮಟ್ಟದ ಕಾಮಗಾರಿ ನಡೆಯಬೇಕು, ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಾಗಿರಬೇಕು ಎಂದು ಸೂಚನೆ ನೀಡಿದರು.

ತ್ಯಾಜ್ಯ ನಿರ್ವಹಣೆ ಮಾಡಿ: ನಿರ್ಮಾಣ ಹಂತದ ಆಸ್ಪತ್ರೆಯಲ್ಲಿ ಕಲ್ಪಿಸಲಾಗುತ್ತಿರುವ ಸೌಲಭ್ಯಗಳು, ಹೊರರೋಗಿಗಳು, ದಾಖಲಾಗುವ ರೋಗಿಗಳು, ಪ್ರಯೋಗಾಲಯ, ವಾಹನ ನಿಲುಗಡೆ, ತ್ಯಾಜ್ಯ ನಿರ್ವಹಣೆಗೆ ಅಗತ್ಯ ವ್ಯವಸ್ಥೆಗಳು ಸಮರ್ಪಕವಾಗಿ ಇರುವಂತೆ ಕಾಮಗಾರಿ ನಿರ್ವಹಣೆಯಾಗಬೇಕು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಗೆ ಭೇಟಿ: ನಂತರ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ, ಹೆರಿಗೆ ವಾರ್ಡ್‌, ಮಕ್ಕಳ ವಾರ್ಡ್‌, ಮೂಳೆ ವಿಭಾಗ ಸೇರಿದಂತೆ ವಿವಿಧ ವಿಭಾಗಗಳನ್ನು ವೀಕ್ಷಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರೊಂದಿಗೆ ಸಚಿವರು ಮಾತನಾಡಿ ಅಹವಾಲುಗಳನ್ನು ಆಲಿಸಿದರು. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಮಹಿಳೆಯರಿಗೆ ಹಾಸಿಗೆಗಳು ಸಕಾಲದಲ್ಲಿ ಲಭ್ಯವಾಗುತಿಲ್ಲ. ಸಾಕಷ್ಟು ಸಮಯ ಕಾದು ಕುಳಿತುಕೊಳ್ಳಬೇಕಿದೆ. ಈ ಸಮಸ್ಯೆಗೆ ಪರಿಹಾರ ಸೌಲಭ್ಯ ಕಲ್ಪಿಸಬೇಕೆಂದು ನಾಗರಿಕರು ಸಚಿವರಲ್ಲಿ ಮನವಿ ಮಾಡಿದರು.

ಗುಣಮಟ್ಟದ ಆರೋಗ್ಯ ಸೇವೆ: ಸುದ್ದಿಗಾರರೊಂದಿಗೆ ಸಚಿವ ಸುಧಾಕರ್‌ ಮಾತನಾಡಿ, ವೈದ್ಯಕೀಯ ಕಾಲೇಜಿನ ಬಳಿ ನಿರ್ಮಾಣವಾಗುತ್ತಿರುವ ಸುಸಜ್ಜಿìತ ಆಸ್ಪತ್ರೆ ಕಾಮಗಾರಿಯನ್ನು ಇನ್ನು 6 ತಿಂಗಳ ಒಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು, ಚಾಮರಾಜನಗರದ ಜನರಿಗೆ ಇಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಎಲ್ಲ ಅನುಕೂಲಗಳನ್ನು ಒದಗಿಸಲಾಗುತ್ತದೆ ಎಂದರು.

ಪ್ರಸ್ತುತ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲು 15 ದಿನಗಳ ಒಳಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ, ವೆಂಟಿಲೇಟರ್‌, ಡಯಾಲಿಸೀಸ್‌ ಘಟಕಗಳನ್ನು ಮತಷ್ಟು ಹೆಚ್ಚಿಸಲು ಅಗತ್ಯ ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಬಾಲರಾಜು, ವೈದ್ಯಕೀಯ ಕಾಲೇಜಿನ ಡೀನ್‌ ಜಿ.ಎಂ. ಸಂಜೀವ್‌, ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next