Advertisement

ಯುವಕರನ್ನು ಪರಿಣಾಮಕಾರಿಯಾಗಿಸುವ ಕೆಲಸ ವಿವಿಗಳಿಂದ ಆಗಬೇಕು

01:52 PM Jan 13, 2018 | Team Udayavani |

ಪುತ್ತೂರು: ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ಬೆಳೆಸುವ ಕೆಲಸ ರಾಜಕೀಯ ಪಕ್ಷಗಳಿಂದ ಅಲ್ಲ, ಬದಲಾಗಿ
ವಿಶ್ವವಿದ್ಯಾಲಯಗಳ ಮೂಲಕ ಆಗಬೇಕು. ಈ ನಿಟ್ಟಿನಲ್ಲಿ ಯುವ ಸಮುದಾಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಕೆಲಸವನ್ನು ವಿಶ್ವವಿದ್ಯಾನಿಲಯಗಳು ಮಾಡಬೇಕಾದ ಆವಶ್ಯಕತೆ ಇದೆ ಎಂದು ನಾಗಾಲ್ಯಾಂಡ್‌ನ‌ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿದರು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ವಿವೇಕಾನಂದ ಜಯಂತಿ ಆಚರಣೆ, ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ಉಚಿತ ತಾಂತ್ರಿಕ ತರಬೇತಿ ಹಾಗೂ ಗ್ರಾಮವಿಕಾಸ ಸಮಾವೇಶ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಾರತ ಹಳ್ಳಿಗಳ ರಾಷ್ಟ್ರ. ಹಳ್ಳಿಗಳು ಶಕ್ತಿಯುತವಾಗಿ ಬೆಳೆಯದೆ ದೇಶ ಸದೃಢವಾಗಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯ, ಜ್ಞಾನದ ಮೂಲಕ ಜನರ ಶಕ್ತಿ, ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಆಗಬೇಕು. ಇದೇ
ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಪಾಲ ಹುದ್ದೆಗೆ ನೇಮಕಗೊಂಡವರನ್ನು ಕರೆದು ಗ್ರಾಮಗಳಿಗೆ ಹೋಗುವಂತೆ, ಅಲ್ಲಿನ ಜನರಿಗೆ ಮುದ್ರಾ ಯೋಜನೆಯ ಬಳಕೆಗೆ ಪ್ರೇರೇಪಿಸಲು, ಶಿಕ್ಷಣ, ಉದ್ಯೋಗಕ್ಕೆ ನೆರವಾಗಲು ತಿಳಿಸಿದ್ದಾರೆ ಎಂದು ಹೇಳಿದರು.

ಮಹಾತ್ಮರ ಪ್ರೇರಣೆ
ಪ್ರತಿ ವ್ಯಕ್ತಿಯೂ ಸಂಪನ್ಮೂಲ ಇದ್ದಂತೆ. ವಿವೇಕಾನಂದರು ಸೇರಿದಂತೆ ಹಲವು ಮಹಾತ್ಮರ ಪ್ರೇರಣೆಯಿಂದ ಇಂದು ಅನೇಕರು ರಾಷ್ಟ್ರದ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ದೇಶವನ್ನು ಪ್ರಾಪಂಚಿಕ ವಾದ ಶಕ್ತಿಯನ್ನಾಗಿಸುವ ಅಪೇಕ್ಷೆ ಹೊತ್ತವರು ಅನೇಕರು ಇಲ್ಲಿದ್ದಾರೆ.ಅವರನ್ನೆಲ್ಲ ಒಂದುಗೂಡಿ ಸುವ ಕಾರ್ಯ ಆಗಬೇಕಿದೆ. ಎಲ್ಲರಲ್ಲೂ ಅಮೋಘವಾದ ಚಿಂತನೆ, ಯೋಚನೆಗಳಿವೆ. ಅವುಗಳೆಲ್ಲವೂ ಜಾರಿಗೆ ಬಂದಾಗ ಉದ್ದೇಶಿತ ವಿಚಾರ ಸಾಕಾರಗೊಳ್ಳುತ್ತದೆ. ಅಷ್ಟಕ್ಕೂ ನಮ್ಮ ರಾಷ್ಟ್ರವನ್ನು ನಾವೇ ಸಶಕ್ತಗೊಳಿಸಬೇಕಲ್ಲದೆ ಮತ್ತೊಬ್ಬರಲ್ಲ ಎಂದು ರಾಜ್ಯಪಾಲರು ಅಭಿಪ್ರಾಯಿಸಿದರು.

ಬದುಕಿನ ಸಾರ್ಥಕ್ಯ
ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಮಾತನಾಡಿ, ಯಾರು ಎಲ್ಲರಿಗಾಗಿ ಬದುಕುತ್ತಾರೋ ಅವರು ನಿಜವಾಗಿ ಬದುಕುತ್ತಾರೆ. ಯಾರು ತನಗಾಗಿ ಬದುಕುತ್ತಾರೋ ಅವರು ಸಾಯುತ್ತಾರೆ. ಈ ಬಗೆಗಿನ ವಿವೇಕವನ್ನು ತುಂಬುವ ವಿಚಾರಗಳಿಗೆ ವಿದ್ಯೆ ಎಂದು ಹೆಸರು. ನಾನು ನಿನಗಾಗಿ ಬದುಕುತ್ತೇನೆಂಬ ಕಲ್ಪನೆಯಲ್ಲಿ ಬದುಕುವುದಕ್ಕೆ ಮಾನವನ ಬದುಕು ಎಂದು ಕರೆಯುತ್ತೇವೆ. ಆದರೆ ಸುತ್ತಮುತ್ತಲಿನವರಿಂದ ದೇವರಂಥ ಮನುಷ್ಯ ಎಂದು ಕರೆಸಿಕೊಂಡು ಬದುಕುವುದು ಬದುಕಿನ ಸಾರ್ಥಕ್ಯ ಎಂದು
ಅಭಿಪ್ರಾಯಪಟ್ಟರು.

Advertisement

ಪಶುವಿನಂತೆ ಬದುಕುವುದಕ್ಕೆ ಅಥವಾ ದಾನವರಂತೆ ಬದುಕುವುದಕ್ಕೆ ಯಾವ ಶಿಕ್ಷಣವೂ ಬೇಕಿಲ್ಲ. ಆದರೆ ಮಾನವರಂತೆ ಹಾಗೂ ದೇವಮಾನವರಂತೆ ಬದುಕಲು ಉತ್ಕೃಷ್ಟವಾದ ಶಿಕ್ಷಣ ಬೇಕು ಅಂತಹ ಶಿಕ್ಷಣ ಜಾರಿಯಾದಾಗ ಭಾರತ ಮತ್ತೂಮ್ಮೆ ದೈವಭೂಮಿಯಾಗುತ್ತದೆ ಎಂದರು .

ಯೋಗ್ಯತೆ ಬೆಳೆಯಬೇಕು
ಯಾವುದೋ ನಾಲ್ಕು ಸಿಮೆಂಟ್‌ ಕಂಬದ ಮಧ್ಯೆ ಬದುಕುವ ಬದುಕಷ್ಟೇ ಬದುಕು ಎಂದುಕೊಂಡಿರುವ ಭ್ರಮೆಯಿಂದ
ಹೊರಬಂದು ಗ್ರಾಮ ಭಾರತದ ಸೊಗಸನ್ನು ಅನುಭವಿಸುವ ಯೋಗ್ಯತೆ ನಮ್ಮಲ್ಲಿ ಬೆಳೆಯಬೇಕು ಎಂದು ಹೇಳಿದರು.

ಊಟದ ವ್ಯವಸ್ಥೆ
ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ವಿವೇಕ ಜಯಂತಿ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಸುಮಾರು 10 ಸಾವಿರಕ್ಕೂ ಮಿಕ್ಕಿ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅನ್ನ, ಸಾಂಬಾರಿನ ಜತೆಗೆ ಪಾಯಸ, ಸಿಹಿ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.  ದ.ಕ. ಸಂಸದ ನಳಿನ್‌ ಕುಮಾರ್‌ಕಟೀಲ್‌, ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಉರಿಮಜಲು ಕೆ. ರಾಮ ಭಟ್‌, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಉಪಸ್ಥಿತರಿದ್ದರು.

ವಿದ್ಯಾವರ್ಧಕ ಸಂಘದ ನಿರ್ದೇಶಕ ನ. ಸೀತಾರಾಮ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿವೇಕಾನಂದ ವಿದ್ಯಾವರ್ಧಕ
ಸಂಘದ ಉಪಾಧ್ಯಕ್ಷೆ ಡಾ| ಸುಧಾ ರಾವ್‌ ಎಸ್‌. ವಂದಿಸಿದರು. ಪ್ರಾಧ್ಯಾಪಕ ಉಷಾಕಿರಣ್‌ ಹಾಗೂ ಗುರುಪ್ರಸನ್ನ ನಿರೂಪಿಸಿದರು. ವಿವೇಕಾನಂದ ಶಿಶು ಮಂದಿರದ ಪುಟಾಣಿಗಳು ವಿವೇಕಾನಂದರ ವೇಷ ಧರಿಸಿ ವೇದಿಕೆಗೆ ಆಗಮಿಸಿದ್ದು ವಿಶೇಷವಾಗಿತ್ತು.

ನಮಸ್ತೇ ಸ್ಟೇಟ್ ನಮಸ್ಕಾರ
ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣಕ್ಕೆ ಆಗಮಿಸಿದ ರಾಜ್ಯಪಾಲರು ನಮಸ್ತೇ ಸ್ಟೇಟ್‌ ನಮಸ್ಕಾರ ಎಂದು
ಭಾಷಣ ಆರಂಭಿಸಿದರು. ಬಳಿಕ ನಮಸ್ತೇ ಸ್ಟೇಟ್‌ ಪ್ರತಿ ಅಕ್ಷರದ ವಿವರಣೆ ನೀಡಿದ ಅವರು, ನಾಗಾಲ್ಯಾಂಡ್‌,
ಅರುಣಾಚಲ, ಮೇಘಾಲಯ ಹಾಗೂ ಮಣಿಪುರ, ಅಸ್ಸಾಂ, ಸಿಕ್ಕಿಂ, ತ್ರಿಪುರಾ ಸೇರಿದಂತೆ ನಾರ್ತ್‌ ಈಸ್ಟ್‌ ರಾಜ್ಯಗಳ
ಪ್ರತಿನಿಧಿಯಾಗಿ ಇಲ್ಲಿಯವರಿಗೆ ನಮಸ್ಕಾರ ತಿಳಿಸಿದ್ದೇನೆ ಎಂದರು. 

ವಿವೇಕಾನಂದರ ಸ್ಫೂರ್ತಿ 
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಮಾತನಾಡಿ, ಸ್ವಾಮಿ ವಿವೇಕಾನಂದರು ಜಗತ್ತಿನ ಜನಕ್ಕೆ ಭಾರತದ ಆಧ್ಯಾತ್ಮಿಕತೆಯನ್ನು ಹಂಚುವುದಕ್ಕೆ ಹಾಗೂ ಜಗತ್ತಿನ ಒಳ್ಳೆಯ
ಸಂಗತಿಗಳನ್ನು ಭಾರತಕ್ಕೆ ತರುವುದಕ್ಕೆ ಸೀಮೋಲ್ಲಂಘನ ಮಾಡಿ ಅಮೇರಿಕಾಗೆ ಹೋದರು. ಅವರು ನಮಗೆ
ಎಂದಿಗೂ ಸ್ಫೂರ್ತಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next