Advertisement

ಬದುಕು ಬದಲಾಗಲು ಏನು ಮಾಡಬೇಕೆಂದು ಗೊತ್ತು, ಆದರೆ…

10:59 PM Oct 26, 2019 | sudhir |

ತನ್ನ ಜೀವನ ಬದಲಾಗಲು ಏನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅದನ್ನೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿರುತ್ತಾರೆ. ಇದು ಮನುಷ್ಯನ ಉಗಮವಾದಾಗಿನಿಂದಲೂ ಇರುವ ಸಮಸ್ಯೆ. ಈ ಗುಣಕ್ಕೆ ಗ್ರೀಕರು “ಅಕ್ರೇಸಿಯಾ’ ಎಂದು ಕರೆದರು.

Advertisement

ತನ್ನ ಜೀವನ ಬದಲಾಗಲು ಏನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅದನ್ನೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿರುತ್ತಾರೆ. ಇದು ಮನುಷ್ಯನ ಉಗಮವಾದಾಗಿನಿಂದಲೂ ಇರುವ ಸಮಸ್ಯೆ. ಈ ಗುಣಕ್ಕೆ ಗ್ರೀಕರು “ಅಕ್ರೇಸಿಯಾ’ ಎಂದು ಕರೆದರು.

ಅದು 1830ರ ಬೇಸಿಗೆಯ ಸಮಯ. ಖ್ಯಾತ ಫ್ರೆಂಚ್‌ ಲೇಖಕ, ಕವಿ ವಿಕ್ಟರ್‌ ಹ್ಯೂಗೋ ಬಹುದೊಡ್ಡ ತೊಂದರೆಗೆ ಸಿಲುಕಿದ. ಗಮನಾರ್ಹ ಸಂಗತಿಯೆಂದರೆ, ಆ ಸಂಕಷ್ಟವನ್ನು ಆತನೇ ಮೈಮೇಲೆ ಎಳೆದುಕೊಂಡಿದ್ದ. ಏನಾಗಿತ್ತೆಂದರೆ, ಅದಕ್ಕೂ ಒಂದು ವರ್ಷ ಮುಂಚೆ ವಿಕ್ಟರ್‌ ಹ್ಯೂಗೋ, ತಾನು “ದಿ ಹಾಂಚ್‌ ಬ್ಯಾಕ್‌ ಆಫ್ ನಾಟ್ರಡಾಮ್‌’ ಎಂಬ ಪುಸ್ತಕ ಬರೆಯುವುದಾಗಿ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ. ಈ ಒಪ್ಪಂದದ ಅನ್ವಯ ಕೈತುಂಬಾ ಮುಂಗಣ ಹಣವನ್ನೂ ಪಡೆದಿದ್ದ.

ಆದರೆ ಒಂದು ವರ್ಷವಾದರೂ ಹ್ಯೂಗೋ ಒಂದೇ ಒಂದು ಪದವನ್ನೂ ಬರೆದಿರಲಿಲ್ಲ. ಊರೂರು ಸುತ್ತುವುದು, ಗೆಳೆಯರೊಂದಿಗೆ ಮೋಜು ಮಾಡುವುದು, ಪಾರ್ಟಿ ಆಯೋಜಿಸುವುದು… ಹೀಗೆ ಬರೆಯುವುದೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಿದ. ಹ್ಯೂಗೋನ ಪ್ರಕಾಶಕರಿಗೆ ಆತನ ವಿಳಂಬ ಪ್ರವೃತ್ತಿಯನ್ನು ಸಹಿಸಲಾಗಲಿಲ್ಲ. ಕೊನೆಗೆ ಪ್ರಕಾಶಕರು, ಹ್ಯೂಗೋ ಎದುರು ಒಂದು ಡೆಡ್‌ಲೈನ್‌ ಇಟ್ಟರು. 1831ರ ಫೆಬ್ರವರಿ ತಿಂಗಳಲ್ಲಿ ಪುಸ್ತಕ ರೆಡಿ ಇರ  ಬೇಕು, ಇಲ್ಲದಿದ್ದರೆ ದುಡ್ಡು ವಾಪಸ್‌ ಕೊಡಿ ಎಂದು ಬಿಟ್ಟರು. ವಿಕ್ಟರ್‌ಗೆ ಕುತ್ತಿಗೆಗೆ ಬಂದಂತಾಯಿತು. ಏಕೆಂದರೆ ಕಾಲಮಿತಿ ಮುಗಿಯಲು ಇನ್ನು ಆರು ತಿಂಗಳು ಮಾತ್ರ ಬಾಕಿ ಇತ್ತು.

ತನ್ನ ವಿಳಂಬ ಪ್ರವೃತ್ತಿಯನ್ನು ಹೊಡೆದೋಡಿಸಲು ಹ್ಯೂಗೋ ಒಂದು ಪ್ಲ್ರಾನ್‌ ಮಾಡಿದ. ಆತ ತನ್ನೆಲ್ಲ ಒಟ್ಟೆಗಳನ್ನೂ ಗಂಟುಕಟ್ಟಿ ಸ್ನೇಹಿತರ ಮನೆಗೆ ಕಳುಹಿಸಿ ಬಿಟ್ಟ. ಉಟ್ಟ ಬಟ್ಟೆ ಮತ್ತು ಒಂದು ದಪ್ಪನೆಯ ಶಾಲು ಬಿಟ್ಟರೆ ಅವನ ಬಳಿ ಬೇರೆ ಬಟ್ಟೆಯೇ ಇಲ್ಲದಂತಾಯಿತು. ಬಟ್ಟೆಯೇ ಇಲ್ಲವಾದ್ದರಿಂದ, ಹ್ಯೂಗೋಗೆ ಹೊರಗೆ ಹೋಗಲು ಮನಸ್ಸೇ ಬರಲಿಲ್ಲ. ಮನೆಯಲ್ಲಿ ಕುಳಿತು ಪುಸ್ತಕ ಬರೆಯುವುದೊಂದೇ ಆತನ ಎದುರು ಉಳಿದ ಏಕೈಕ ಆಯ್ಕೆಯಾಯಿತು.

Advertisement

ಈ ತಂತ್ರ ಅಚ್ಚರಿ ಮೂಡಿಸುವ ರೀತಿಯಲ್ಲಿ ಕೆಲಸ ಮಾಡಿತು. ಹ್ಯೂಗೋ ತನ್ನ ಓದಿನ ಕೋಣೆಯಲ್ಲಿ ಹಗಲು ರಾತ್ರಿ ಬರೆಯುತ್ತಾ ಕುಳಿತ. ಎರಡು ಮೂರು ದಿನಕ್ಕೊಮ್ಮೆ ಹೊರಗೆ ಹೋಗಿ ದಿನಸಿ ಖರೀದಿಸಿ ತರುತ್ತಿದ್ದ, ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡುತ್ತಿದ್ದ. ಪ್ರಕಾಶಕರು, ಫೆಬ್ರವರಿ ತಿಂಗಳಲ್ಲಿ ಪುಸ್ತಕ ಮುಗಿಸಲು ಆತನಿಗೆ ಹೇಳಿದ್ದರು, ಆದರೆ ವಿಕ್ಟರ್‌ ಹ್ಯೂಗೋ ಡಿಸೆಂಬರ್‌ ತಿಂಗಳಲ್ಲೇ ಮುಗಿಸಿಬಿಟ್ಟ. 1831ರ ಜನವರಿ 14ರಂದು ಆ ಪುಸ್ತಕ ಪ್ರಕಟವಾಯಿತು. ಕೆಲವೇ ಸಮಯದಲ್ಲೇ ಲೋಕ ವಿಖ್ಯಾತವಾಯಿತು.

ಅಕ್ರೇಸಿಯಾ ಎನ್ನುವ ಪುರಾತನ ಸಮಸ್ಯೆ!
ಅದೇಕೆ ವಿಕ್ಟರ್‌ ಹ್ಯೂಗೋನಂಥ ಪ್ರಖ್ಯಾತ ಲೇಖಕ ಕೂಡ, ಪುಸ್ತಕ ಬರೆಯುತ್ತೇನೆ ಎಂದು ವಾಗ್ಧಾನ ಮಾಡಿ, ಅದಕ್ಕಾಗಿ ಮುಂಗಡ ಹಣವನ್ನೂ ಪಡೆದೂ ಒಂದು ವರ್ಷದವರೆಗೆ ಅನವಶ್ಯಕ ವಿಳಂಬ ಮಾಡಿದ? ಆತ ಎಂದಲ್ಲ, ನಾವೂ ಕೂಡ ಒಂದು ಗುರಿಯನ್ನು ಹಾಕಿಕೊಂಡ ಮೇಲೂ ಆ ಹಾದಿಯಲ್ಲಿ ಸಾಗುವುದರಿಂದ ಏಕೆ ತಪ್ಪಿಸಿಕೊಳ್ಳುತ್ತೇವೆ, ವಿಳಂಬ ಮಾಡುತ್ತೇವೆ? ನಮ್ಮ ಬದುಕು ಬದಲಿಸುವ ಮಾರ್ಗ ಯಾವುದು ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಅದರಿಂದ ದೂರ ಉಳಿದು ಬಿಡುತ್ತೇವೆ?

ತನ್ನ ಜೀವನ ಬದಲಾಗಲು ಏನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅದನ್ನೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿರುತ್ತಾರೆ. ಇದು ಮನುಷ್ಯನ ಉಗಮವಾದಾಗಿನಿಂದಲೂ ಇರುವ ಸಮಸ್ಯೆ. ಈ ಗುಣಕ್ಕೆ ಗ್ರೀಕರು “ಅಕ್ರೇಸಿಯಾ’ ಎಂದು ಕರೆದರು. ಈ ಪದವನ್ನು ಹುಟ್ಟುಹಾಕಿದ್ದು ಗ್ರೀಕ್‌ ತತ್ವಜ್ಞಾನಿ ಅರಿಸ್ಟಾಟಲ್‌ ಎಂದು ಕೆಲವರು ಹೇಳಿದರೆ, ಅಲ್ಲ, ಸಾಕ್ರೆಟಿಸ್‌ ಈ ಪದದ ಜನಕ ಎನ್ನುವುದು ಕೆಲವರ ವಾದ. ಏನಾದರೂ ಇರಲಿ. ವಿಷಯಕ್ಕೆ ಬರೋಣ. ಸರಳವಾಗಿ ಹೇಳಬೇಕೆಂದರೆ ಅಕ್ರೇಸಿಯಾವನ್ನು “ಸೆಲ್ಫ್ ಕಂಟ್ರೋಲ್‌ ಕೊರತೆ’/ ಸ್ವ-ನಿಯಂತ್ರಣದ ಕೊರತೆ ಎಂದೂ ಕರೆಯಬಹುದು.

ಅದೇಕೆ ಅಕ್ರೇಸಿಯಾ ನಮ್ಮ ಜೀವನವನ್ನು ಆಳುತ್ತಿದೆ? ಅದೇಕೆ ವಿಳಂಬ ಪ್ರವೃತ್ತಿಯು(ಪ್ರೋಕ್ರಾಸ್ಟಿನೇಷನ್‌) ನಮ್ಮ ಪ್ರಮುಖ ಅಂಗವಾಗಿಬಿಟ್ಟಿದೆ ಎನ್ನುವುದಕ್ಕೆ ಒಂದು ವಿವರಣೆ ಇದೆ. ಅದೇ Time inconsistency(ಸಮಯದ ಅಸಮಂಜಸತೆ). ನಮಗೆ ಈಗಲೂ ಸಮಯವನ್ನು ಸರಿಯಾಗಿ ಗ್ರಹಿಸಲು, ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಒಂದು ಕ್ಷಣಕ್ಕೆ ಮಾಡಿದ ನಿರ್ಧಾರವು, ಇನ್ನೊಂದು ಕ್ಷಣಕ್ಕೆ ಮುಖ್ಯವೆನಿಸದೇ ಹೋಗುವುದನ್ನು ಟೈಮ್‌ ಇನ್‌ಕನ್ಸಿಸ್ಟೆನ್ಸಿ ಎನ್ನಬಹುದು. ನೀವು ಒಂದು ಗುರಿ ಹಾಕಿಕೊಳ್ಳುತ್ತೀರಿ ಎಂದು ಕೊಳ್ಳಿ- ಉದಾಹರಣೆಗೆ, ತೂಕ ಇಳಿಸಿಕೊಳ್ಳುತ್ತೇನೆ, ಹೊಸ ಭಾಷೆ ಕಲಿಯುತ್ತೇನೆ ಅಥವಾ ಪುಸ್ತಕ ಬರೆಯುತ್ತೇನೆ ಎಂದು. ಹೀಗೆ ಮಾಡುವಾಗ ನೀವು ನಿಮ್ಮ ಭವಿಷ್ಯಕ್ಕಾಗಿ ಪ್ಲ್ರಾನ್‌ ಮಾಡುತ್ತೀರಿ. ಈ ನಿರ್ಧಾರ ತೆಗೆದುಕೊಳ್ಳುವಾಗ ನಿಮಗಿರುವ ಆದ್ಯತೆ – ದೃಢ ನಿಶ್ಚಯ, ಇನ್ನೊಂದು ಸಮಯದಲ್ಲಿ ಇರುವುದಿಲ್ಲ. ಭವಿಷ್ಯವಿರುವುದು ಅಲ್ಲೆಲ್ಲೋ ದೂರದಲ್ಲಿ, ಅದೂ ಅಲ್ಲದೆ ದೀರ್ಘಾವಧಿ ಗುರಿಯ ಹಿಂದೆ ಹೋಗುವವನು ಅಸೌಖ್ಯವಂತೂ ಎದುರಿಸಲೇ ಬೇಕು. ಹೀಗಾಗಿ, ನಿರ್ಧಾರ ತೆಗೆದುಕೊಳ್ಳುವ ಸಮಯ ಎದುರಾದಾಗ, ನೀವು ನಿಮ್ಮ ಭವಿಷ್ಯದ ಫ‌ಲಗಳನ್ನು ಮರೆತು ಬಿಡುತ್ತೀರಿ. ನಿಮ್ಮ ಮಿದುಳು ತತ್‌ಕ್ಷಣದ ಆಮಿಷಗಳಿಗೆ ಹೆಚ್ಚು ಆಕರ್ಷಿತವಾಗುತ್ತದೆ. ಇದನ್ನು ಹಣಕಾಸು ನಿರ್ವಹಣೆಯ ವಿಚಾರದಲ್ಲೂ ನೋಡಬಹುದು. ಅನೇಕರಿಗೆ ಹಣ ಉಳಿತಾಯ ಮಾಡುವುದು ಖುಷಿ ಕೊಡುವುದೇ ಇಲ್ಲ. ಏಕೆಂದರೆ, ಅದರಿಂದ ತಾತ್ಕಾಲಿಕ ಖುಷಿ ಸಿಗುವುದಿಲ್ಲ, ಅಸೌಖ್ಯ ಎದುರಾಗುತ್ತದೆ. ಭಾರತದಲ್ಲಿನ ಋಷಿಗಳು
ವರ್ಷಗಟ್ಟಲೇ ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡರು, ಈಗಲೇ ಈ ಕ್ಷಣವೇ ದೇವರು ಪ್ರತ್ಯಕ್ಷವಾಗಬೇಕು ಎಂದು ಅವರು ಬಯಸಿದ್ದರೆ “ತಪಸ್ಸು’ ಎನ್ನುವುದೇ ಇರುತ್ತಿರಲಿಲ್ಲ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಜೀವನ ಚಿಕ್ಕದಲ್ಲ, ಅದು ದೀರ್ಘಾವಧಿಯದ್ದು. ಆದರೆ “ಚಿಕ್ಕದು’ ಎಂಬ ಮಾತನ್ನು ನಾವು ಎಷ್ಟು ಮನನ ಮಾಡಿಕೊಂಡು ಬಿಟ್ಟಿದ್ದೇವೆ ಎಂದರೆ ದೀರ್ಘಾವಧಿಯ ಪ್ಲ್ರಾನಿಂಗ್‌ ಮಾಡುವುದು, ಆ ನಿಟ್ಟಿನಲ್ಲಿ ನಿತ್ಯವೂ ಹೆಜ್ಜೆಯಿಡುವುದು ಬಹುತೇಕರಿಗೆ ತಿಳಿದೇ ಇಲ್ಲ.

ಅಕ್ರೇಸಿಯಾದ ವಿರುದ್ಧಾರ್ಥಕ ಪದ
ಅಕ್ರೇಸಿಯಾಗೆ ವಿರುದ್ಧಾರ್ಥಕ ಪದ ಯಾವುದು ಗೊತ್ತೇ?
“ಎನ್‌ ಕ್ರೇಸಿಯಾ’. ಇದೂ ಕೂಡ ಗ್ರೀಕ್‌ ಪದವಾಗಿದ್ದು, ಸ್ವ-ನಿಯಂತ್ರಣ ಅಥವಾ ತನ್ನ ಮೇಲೆ ತನಗೆ ಹಿಡಿತವಿರುವುದು ಎಂಬುದು ಇದರರ್ಥ. ಅಂದು ಕೊಂಡ ಕೆಲಸವನ್ನು ಮಾಡಿ ಮುಗಿಸುವುದಕ್ಕೆ ವ್ಯಕ್ತಿಯೊಬ್ಬನಿಗೆ ತನ್ನ ಮೇಲೆ ತನಗೆ ಹಿಡಿತವಿರಬೇಕು. ಆದರೆ ಸ್ವ-ನಿಯಂತ್ರಣದಿಂದ ತತ್‌ಕ್ಷಣಕ್ಕೆ ಸುಖ ಸಿಗುವುದಿಲ್ಲ. ಸುಖಕ್ಕಿಂತಲೂ ಅಸೌಖ್ಯವೇ ಅಧಿಕವಿರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಈ ಕ್ಷಣದ ಸುಖವನ್ನು ಬದಿಗೊತ್ತಿ, ಎಷ್ಟೇ ಕಷ್ಟವಾದರೂ ಹಾಕಿಕೊಂಡ ಗುರಿಯನ್ನು ತಲುಪುವ ಸ್ವ-ನಿಯಂತ್ರಣ ಬಹಳ ಮುಖ್ಯವಾಗುತ್ತದೆ. ಈ ರೀತಿಯ ಮನಸ್ಥಿತಿಯು ನಿರಂತರ ಪ್ರಯತ್ನದಿಂದ ಬರುವಂಥದ್ದು. ಇದಕ್ಕೆ ಯಾವುದೇ ಶಾರ್ಟ್‌ಕಟ್‌ ಇಲ್ಲವೇ ಇಲ್ಲ.
(ಲೇಖಕರು ಬ್ರಿಟನ್‌ನ ತತ್ತಶಾಸ್ತ್ರಜ್ಞರು ಹಾಗೂ ಸ್ಕೂಲ್‌ ಆಫ್ ಲೈಫ್ ಸಂಸ್ಥೆಯ ಸ್ಥಾಪಕರು)

– ಅಲೆನ್‌ ಡೆ ಬಾಟನ್‌

Advertisement

Udayavani is now on Telegram. Click here to join our channel and stay updated with the latest news.

Next