Advertisement

ಕಾಲೇಜು ಉಳಿಸಿಕೊಳ್ಳಲು ಪಟ್ಟ ಕಷ್ಟ ನಂಗೇ ಗೊತ್ತು: ದತ್ತ

07:22 PM Mar 06, 2018 | |

ಕಡೂರು: ಯಗಟಿಯದಲ್ಲಿ ಪ್ರಥಮ ದರ್ಜೆ ಕಾಲೇಜು ಉಳಿಸಿಕೊಳ್ಳಲು ಪಟ್ಟಿರುವ ಶ್ರಮ, ಅನುಭವಿಸಿರುವ ನೋವು ಸುಮ್ಮನೆ ಟೀಕೆ ಮಾಡುವವರಿಗೆ ಅರ್ಥವಾಗುವುದಿಲ್ಲ ಎಂದು ಶಾಸಕ ವೈ.ಎಸ್‌.ವಿ. ದತ್ತ ಹೇಳಿದರು.

Advertisement

ಭಾನುವಾರ ಕಡೂರಿನ ಯಗಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 76 ಲಕ್ಷ ರೂ. ವೆಚ್ಚದ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಒಂದಲ್ಲ ಒಂದು
ರೀತಿ ಅನುದಾನ ನೀಡಿದ್ದೇನೆ. ಯಗಟಿಯಲ್ಲಿ ಆರಂಭವಾಗಿದ್ದ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕಾಲೇಜು ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಆಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಧರಣಿ ನಡೆಸಿದ ನಂತರ 48 ವಿದ್ಯಾರ್ಥಿಗಳ ಕಡ್ಡಾಯವಾಗಿ ಇರಲೇಬೇಕು ಎಂಬ ಷರತ್ತನ್ನು ಅಂದಿನ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹಾಕಿದರು. ಆ ಕುರಿತು
ಮುಚ್ಚಳಿಕೆ ಬರೆದುಕೊಟ್ಟು ಇಲ್ಲಿಯ ಕಾಲೇಜನ್ನು ಉಳಿಸಿಕೊಳ್ಳಲಾಯಿತು ಎಂದರು. ಸರ್ಕಾರದಿಂದ ಯಗಟಿ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್‌ ನಿರ್ಮಿಸಲು 12 ಕೋಟಿ ಬಿಡುಗಡೆಯಾಯಿತು. ಅದಕ್ಕಾಗಿ ಸುಮಾರು 2 ಎಕರೆ ಜಾಗ ಅಗತ್ಯವಿತ್ತು. ಅದನ್ನು ನೀಡಲು ಹಲವಾರು ರೀತಿಯಿಂದ ಪ್ರಾಮಾಣಿಕವಾಗಿ ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ ಅನುದಾನ ವಾಪಸ್‌ ಆದದ್ದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು. ಯಗಟಿ ನನ್ನ ಜನ್ಮಸ್ಥಳ. ಇಲ್ಲಿಯೇ ಓದಿ ಬೆಳೆದ ನಾನು. ನನ್ನ ಗ್ರಾಮಕ್ಕೆ ಶೈಕ್ಷಣಿಕವಾಗಿ ಪುಟ್ಟ ಕೊಡುಗೆ ನೀಡಿದ ಧನ್ಯತಾ ಭಾವವನ್ನು ಅನುಭವಿಸುತ್ತಿದ್ದೇನೆ. ಆದರೆ ತೃಪ್ತಿಯಾಗಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ದೊರೆತರೆ ಮಾಡಬಹುದಾದ ಎಲ್ಲ ಸವಲತ್ತುಗಳನ್ನು ಈ ಗ್ರಾಮದಲ್ಲಿ ಸಿಗುವಂತೆ ಮಾಡುವ ಮಹದಾಸೆ ಇದೆ ಎಂದರು.  ಗ್ರಾಪಂ ಅಧ್ಯಕ್ಷೆ ಭಾರತಿ ಬಸವರಾಜ್‌, ಸದಸ್ಯ ಗೋವಿಂದಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೈ.ಎಸ್‌. ರವಿಪ್ರಕಾಶ್‌, ವೈ.ಕೆ. ರಂಗಪ್ಪ, ಭಂಡಾರಿ ಶ್ರೀನಿವಾಸ್‌, ಬೀರೂರು ಮೋಹನ್‌, ಪ್ರಾಂಶುಪಾಲ ಶಿವಾನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next