Advertisement

ತಿನ್ನೋ ಅನ್ನ ನಿರ್ಧರಿಸಲು ನೀವ್ಯಾರು

04:02 PM Jul 01, 2017 | Team Udayavani |

ಕಲಬುರಗಿ: ದೇಶದಲ್ಲಿ ಜನಸಾಮಾನ್ಯರು ತಿನ್ನುವ ಅನ್ನ ಹೀಗೆ ಇರಬೇಕು. ಇಂತಹದ್ದೇ ತಿನ್ನಬೇಕು ಎಂದು ನಿರ್ಧಾರ ಮಾಡೋರು ನಿವ್ಯಾರು. ಇದು ಪಾಳೆಗಾರಿಕೆ ಆಡಳಿತದ ದೇಶವಾಯಿತಲ್ಲ ಎಂದು ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದರು. 

Advertisement

ಶುಕ್ರವಾರ ವಲ್ಲಭಬಾಯಿ ವೃತ್ತದಲ್ಲಿ ದೇಶದಲ್ಲಿ ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಹಾಗೂ ದಲಿತರ ಮೇಲಿನ ಹಲ್ಲೆಗಳನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು ದೌರ್ಜನ್ಯ ವಿರೋಧಿ ರಾಷ್ಟ್ರೀಯ ವೇದಿಕೆ ಅಡಿಯಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಗೋವಿನ ಹೆಸರಿನಲ್ಲಿ ದೇಶವನ್ನು ಒಡೆದಾಳುವುದು ದೂರದೃಷ್ಟಿ ರಾಜಕಾರಣ ಎನ್ನಿಸಿಕೊಳ್ಳುವುದಿಲ್ಲ. ಒಂದೆಡೆ ಗೋವಿನ ಹೆಸರಿನಲ್ಲಿ ಹತ್ಯೆ ಮಾಡಬೇಡಿ ಎನ್ನುವ ದೇಶದ ಪ್ರಧಾನಿ, ಇನ್ನೊಂದೆಡೆ ನಿರಂತರವಾಗಿ ಬಿಜೆಪಿ ಹಾಗೂ ಸಂಘಪರಿವಾರಗಳು ನಡೆಸುವ ಹಲ್ಲೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಭಾವನೆ ಮತ್ತು ಭಯ ಜನರಲ್ಲಿ ಮೂಡುತ್ತಿದೆ ಎಂದು ಹೇಳಿದರು. 

ದೇಶದಲ್ಲಿ ಆಹಾರ ಪದ್ಧತಿ ಆಯ್ಕೆ ಜನಸಾಮಾನ್ಯರಿಗೆ ಬಿಟ್ಟಿದೆ. ಇದನ್ನು ಸಂವಿಧಾನ ಕೊಟ್ಟಿದೆ. ಆದರೂ, ಕೇಂದ್ರ ಸರಕಾರ ಇಂತಹದ್ದೆ ಆಹಾರ ತಿನ್ನಬೇಕು ಎಂದು ಹೇಳಿ ದೇಶದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಹಲ್ಲೆಗಳನ್ನು ನೋಡಿಕೊಂಡು ಸುಮ್ಮನೆ ಕುಳಿತಿರುವುದರ ಹಿಂದೆ ಅನುಮಾನಗಳು ಹುಟ್ಟಿಕೊಂಡಿವೆ.

ಬಿಜೆಪಿ ಹಾಗೂ ಇತರೆ ಜಾತಿ ಸಂಘಟನೆಗಳು ದಲಿತರ ಮೇಲೆ ಹಲ್ಲೆ ಮಾಡುತ್ತಿವೆ. ಮುಸ್ಲಿಂರಿಗೆ ಹಿಂಸೆ ನೀಡುತ್ತಿದ್ದಾರೆ. ಇದೆಲ್ಲವೂ ಕೂಡಲೇ ನಿಲ್ಲಬೇಕು ಎಂದರು. ಜೆಡಿಎಸ್‌ ಮುಖಂಡ ನಾಸೀರ ಹುಸೇನ ಉಸ್ತಾದ ಮಾತನಾಡಿ, ಈ ದೇಶದಲ್ಲಿ ತಿನ್ನುವ ಆಹಾರವನ್ನೇ ಇಟ್ಟುಕೊಂಡು ದೊಡ್ಡ ದಾಳಿ ಮಾಡುತ್ತಿರುವುದು ಖಂಡನೀಯ. ವಿವಿಧೆಡೆಗಳಲ್ಲಿ ದಲಿತ ಮತ್ತು ಮುಸ್ಲಿಂರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ.

Advertisement

ಕೂಡಲೇ ಇದೆಲ್ಲವೂ ನಿಲ್ಲಬೇಕು ಎಂದರು. ವೀರಶೈವ ಸಮಾಜದ ಪ್ರೊ| ಸಂಜಯ ಮಾಕಲ್‌, ಲೇಖಕರ ಸಂಘದ ಪಾಟೀಲ, ಗಣಪತಿ ಕೊಡ್ಲೆ, ಶರಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಮೌಲಾ ಮುಲ್ಲಾ, ಅಲ್ತಾಪ ಇನಾಂದಾರ, ಎಂ.ಜೆ. ಹುಸೇನ, ಎಸ್‌ಡಿಪಿಐ, ಎಸ್‌ಎಫ್‌ಐ,ಡಿವೈಎಫ್‌ಐ ಇನ್ನೂ ಹಲವಾರು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next