Advertisement

ನೀನೊಬ್ಬ ಮಾಮೂಲಿ ಎಂಜಿನಿಯರ್‌!

01:11 PM Oct 03, 2017 | |

ಅನುಭವದ ಮುಂದೆ ನಮ್ಮ ಯಾವುದೇ ವಿಶ್ವವಿದ್ಯಾಲಯದ ಸರ್ಟಿಫಿಕೇಟುಗಳು ಸರಿಸಾಟಿಯಾಗಲಾರವು. ಅದನ್ನೇ ಅನುಭವದ ಪಾಠವನ್ನು ಇಲ್ಲಿ ಒಬ್ಬ ಗೂರ್ಖ ಹೇಳಿದ್ದಾನೆ…

Advertisement

ಒಂದು ಭಾನುವಾರ ಬೆಳಗ್ಗೆ ಉಪಾಹಾರ ಮಾಡುವ ಸಲುವಾಗಿ ನಮ್ಮ ಕಾಲೇಜಿನ ಹುಡುಗಿಯರ ಹಾಸ್ಟೆಲ್ ಎದುರಿನ ರಸ್ತೆಯಲ್ಲಿ ಸಾಗುವಾಗ ಎಂದಿನಂತೆ ಗೇಟ್‌ ಮುಚ್ಚಿತ್ತು. ಆ ಗೇಟಿನ ಎದುರು ಯಾವಾಗಲೂ ಒಬ್ಬ ಗೂರ್ಖ ಮಂಕು ಬಡಿದಿರುವಂತೆ ಕೂತಿರುತ್ತಿದ್ದ. ಯಾರಾದರೂ ಅಪರಿಚಿತರು ಬಂದಾಗ ಪುಸ್ತಕದಲ್ಲಿ ಹೆಸರು ಬರೆಸಿ, ಗೇಟ್‌ ತೆರೆದು ಒಳ ಬಿಡುತ್ತಿದ್ದ. ನಮ್ಮ ರೂಮಿನ ಹತ್ತಿರದ ಹೋಟೆಲ್‌ಗೆ ಆ ದಾರಿ ಬಹಳ ಹತ್ತಿರವಾಗಿತ್ತು. ಸಮಯ ಉಳಿಸುವ ಉದ್ದೇಶಕ್ಕಲ್ಲದಿದ್ದರೂ, “ಅಷ್ಟು ದೂರ ಯಾರು ನಡೆಯೋದು?’ ಅನ್ನೋ ಸೋಮಾರಿತನದಿಂದ ಆ ದಾರಿಯಲ್ಲೇ ಹೋಗುತ್ತಿದ್ವಿ. ಸಹಜವಾಗಿ ಗೂರ್ಖ ನಮಗೆ ಪರಿಚಯವಾಗಿದ್ದ.

“ದಿನಾ ಒಂದೇ ಸ್ಥಳದಲ್ಲಿ ಹೇಗೆ ಕೂತಿರ್ತಾನಪ್ಪಾ, ಬೇಜಾರಾಗೋಲ್ವ?’ ಅನ್ನೋ ಯೋಚನೆ ನಮಗೆ ದಿನಾ ಬರ್ತಿತ್ತು. ಯಾವಾಗಲೂ ಕೈಯಲ್ಲಿ ಒಂದು ಮೊಬೈಲ್ ಹಿಡಿದು ತನ್ನ ಬೇಸರವನ್ನು ಕಳೆಯುತ್ತಿದ್ದ. ಅವತ್ತು ಮುಂಜಾನೆ ಗೇಟ್‌ ಬಳಿ ಬಂದಾಗ, ಹಿಂದಿನ ದಿನ ನಡೆದ ಐಪಿಎಲ್ ಪಂದ್ಯದ ಕುರಿತು ವಿಚಾರಿಸತೊಡಗಿದ. “ಯಾರ್ಯಾರು ಎಷ್ಟೆಷ್ಟು ರನ್‌ ಬಾರಿಸಿದರು?’ ಅನ್ನೋದನ್ನು ನಮ್ಮಿಂದ ಕೇಳಿ ತಿಳಿದುಕೊಂಡ.

ಅಷ್ಟಕ್ಕೇ ಮಾತು ಮುಗಿಸುತ್ತಾನೆ ಎಂದುಕೊಂಡರೆ, ಪುಣ್ಯಾತ್ಮ ಇನ್ನೇನೋ ಹೇಳುತ್ತಾ ಮಾತು ಮುಂದುವರಿಸಿದ; “ಅವರೆಲ್ಲ ಎಷ್ಟು ಫೇಮಸ್‌ ಅಲ್ವಾ? ದೇಶದ ಪ್ರತಿಯೊಬ್ಬರಿಗೂ ಅವರ ಹೆಸರು ಗೊತ್ತು. ಜೀವನದಲ್ಲಿ ಏನಾದರೂ ಸಾಧಿಸಬೇಕು’ ಎಂದು ತಿಳಿ ಹೇಳತೊಡಗಿದ. ಇದ್ದಕ್ಕಿದ್ದಂತೆ ನನಗೆ “ನೀನೇನ್‌ ಓದಿದ್ದೀಯಾ?’ ಎಂದು ಕೇಳಿದ. ನಾನು “ಏರೋನಾಟಿಕಲ್ ಎಂಜಿನಿಯರಿಂಗ್‌’ ಅಂದೆ. ಅವನು ಕಿಂಡಲ್ ನಗೆ ಬೀರುತ್ತಾ, “ದೇರ್‌ ಆರ್‌ ಮಿಲಿಯನ್ಸ್‌ ಆಫ್ ಏರೋನಾಟಿಕಲ್ ಎಂಜಿನಿಯರ್.

ಹೂ ಆರ್‌ ಯು?’ ಅಂದ! “ಎಲ್ಲರಂತೆಯೇ ನಾನೊಬ್ಬ ಮಾಮೂಲಿ ಎಂಜಿನಿಯರ್‌, ನಿನ್ನ ಸಾಧನೆ ಏನು?’ ಅನ್ನೋ ಧ್ವನಿ ಅವನದ್ದಾಗಿತ್ತು. ಸದಾ ಕಾಯುವಿಕೆಯ ಲೋಕದಲ್ಲೇ ಮುಳುಗಿರುವ, ತಾನಾಯ್ತು ತನ್ನ ಸಂಸಾರವಾಯ್ತು, ಲೋಕದ ಕಾಳಜಿ ನನಗ್ಯಾಕೆ ಅಂತ ಚಿಂತಿಸುವ ಒಬ್ಬ ಗೂರ್ಖನಿಗೆ, ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಎಂಬ ಯೋಚನೆ ಮೊಳೆವಾಗ, ಮನೆಯವರ ಪ್ರೋತ್ಸಾಹ, ಬೆಂಬಲ ಇರುವ ನಮ್ಮಲ್ಲಿ ಏನಾದರೂ ಸಾಧಿಸಬೇಕು ಎಂಬ ಯೋಚನೆ ಬಾರದಿರುವುದು ವಿಷಾದವೇ ಸರಿ. 

Advertisement

ನಾನು ತುಂಬಾ ಸಲ ಒಂಟಿಯಾಗಿ ಕುಳಿತು ನನ್ನ ಭವಿಷ್ಯದ ಕುರಿತು, ಅಸ್ತಿತ್ವದ ಕುರಿತು ಯೋಚಿಸುವಾಗ ಈ ಘಟನೆ ನನ್ನ ಮುಂದಿನ ಕೆಲಸಗಳಿಗೆ ಉತ್ಸಾಹದಿಂದ ಹೆಜ್ಜೆಯಿಡಲು ಪ್ರೇರೇಪಿಸುತ್ತದೆ. ಮನೆಯಲ್ಲಿ ಅಪ್ಪ- ಅಮ್ಮ ಎಷ್ಟು ಬುದ್ಧಿವಾದ ಹೇಳಿದ್ದರೂ, ಹಿತವಚನ ನೀಡಿದ್ದರೂ ಬದಲಾಗದ ನಮ್ಮನ್ನು ಕೆಲ ಘಟನೆ ಅಥವಾ ಸನ್ನಿವೇಶಗಳು ಬದಲಾವಣೆಗೆ ದೂಡುವುದು ಎಷ್ಟು ಆಶ್ಚರ್ಯ ಅಲ್ವಾ? ಅನುಭವದ ಮುಂದೆ ನಮ್ಮ ಯಾವುದೇ ವಿಶ್ವವಿದ್ಯಾಲಯದ ಸರ್ಟಿಫಿಕೇಟುಗಳು ಸರಿಸಾಟಿಯಾಗಲಾರವು.

ಹಲವು ವರ್ಷಗಳ ನೋವು ನಲಿವಿನ ಸಾರಾಂಶವು, ನಮ್ಮ ಜೀವನದ ಮುಂದಿನ ಹೆಜ್ಜೆಗಳಿಗೆ ಅಡಿಪಾಯವಾಗುತ್ತವೆ. ಪ್ರತಿಯೊಂದು ಕೆಲಸಕ್ಕೂ ನಮ್ಮ ನೂರು ಪ್ರತಿಶತ ಪರಿಶ್ರಮ ಹಾಕಿದಲ್ಲಿ ಅದರಲ್ಲಿ ಜಯ ಖಂಡಿತವಾಗಿಯೂ ದಕ್ಕುತ್ತದೆ. ಕೊಂಚ ತಡವಾದರೂ ಪಟ್ಟ ಪರಿಶ್ರಮಕ್ಕಂತೂ ಸ್ವಲ್ಪವೂ ಮೋಸವಾಗುವುದಿಲ್ಲ. ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದಲ್ಲಿ ಜಯ ನಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ. ಒಬ್ಬ ಗೂರ್ಖ “ಈ ಸಮಾಜದಲ್ಲಿ ನೀನ್ಯಾರು?’ ಅಂತ ಕೇಳಿದ ಮೇಲೆ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇಮ್ಮಡಿಯಾಗಿದೆ.

* ಕೌಶಿಕ್‌ ಹೆತ್ತೂರು

Advertisement

Udayavani is now on Telegram. Click here to join our channel and stay updated with the latest news.

Next