Advertisement

ಯೋಗಿ ಮಾಡೆಲ್‌ ರಾಜ್ಯಕ್ಕೆ ಬೇಕೇ ಅಥವಾ ಬೇಡವೇ?

12:55 AM Aug 01, 2022 | Team Udayavani |

ಕರಾವಳಿಯ ಮೂರು ಹತ್ಯೆಗಳ ನಂತರ, ರಾಜ್ಯದಲ್ಲಿಯೂ ಉತ್ತರ ಪ್ರದೇಶದ ಯೋಗಿ ಮಾದರಿ ಜಾರಿಗೆ ಬರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಅಂದರೆ, ಅಪರಾಧ ತಡೆಯುವ ಸಲುವಾಗಿ ಮುಲಾಜಿಲ್ಲದ, ಕಠಿಣ ಕ್ರಮ ತೆಗೆದುಕೊಳ್ಳುವುದು. ಹಾಗೆಯೇ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದವರ ಆಸ್ತಿಗಳನ್ನೇ ಬುಲ್ಡೋಜರ್‌ ಮೂಲಕ ನಾಶ ಪಡಿಸುವುದು. ಅಷ್ಟೇ ಅಲ್ಲ, ಈ ಹಿಂದೆ ಉತ್ತರ ಪ್ರದೇಶದಲ್ಲಿದ್ದ ಮಾಫಿಯಾ ದೊರೆಗಳನ್ನು ಎನ್‌ಕೌಂಟರ್‌ ಮೂಲಕವೇ ಸದೆಬಡಿಯಲಾಗಿದೆ. ಈ ಅಂಶಗಳು ರಾಜ್ಯಕ್ಕೆ ಬೇಕೇ ಅಥವಾ ಬೇಡವೇ ಎಂಬುದರ ಕುರಿತಾಗಿ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ನಾಯಕರು ವಾದ-ಪ್ರತಿವಾದ ಮಂಡಿಸಿದ್ದಾರೆ.

Advertisement

ಜಾತಿಯನ್ನೂ ಮೀರಿದ ಸುಧಾರಣೆ
ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಯೋಗಿ ಮಾಡೆಲ್‌ ಎಂದು ಕೇಳಿದ ಕೂಡಲೇ ಕೆಲವರು ಕೆಂಡಾಮಂಡಲರಾಗುತ್ತಾರೆ. ಸಹಜ, ಅಸ್ತಿತ್ವ ಕಳೆದುಕೊಳ್ಳುವ ಸೂಚನೆ ಸಿಕ್ಕ ರಾಜಕಾರಣಿಗಳ ಮೊದಲ ಪ್ರತಿಕ್ರಿಯೆ ಅದುವೇ ಇರುತ್ತದೆ. ಯೋಗಿ ಮಾಡೆಲ್‌ ಎಂದರೆ ಅದು ಮುಸಲ್ಮಾನರ ವಿರುದ್ಧದ ಆಡಳಿತ ಎಂದು ಒಂದು ವರ್ಗದ ಮಾಧ್ಯಮಗಳು ಚಿತ್ರಣ ಕಟ್ಟಿಕೊಡಲು ತವಕಿಸುತ್ತವೆ. ಅದೂ ಸಹಜವೇ. ಈ ಹಿಂದೆ ಮೋದಿ ಮಾಡೆಲ್‌ ಎಂದರೆ ಅಲ್ಪಸಂಖ್ಯಾತ ವಿರೋಧಿ ಆಡಳಿತ ಎಂದು ಆ ನಾಯಕರು ಮತ್ತು ಆ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿದ್ದವು. ಆದರೆ ಗುಜರಾತ್‌ನಲ್ಲಿ ಜಾತಿಯನ್ನೂ ಮೀರಿ ಪ್ರತಿಯೊಬ್ಬರ ಜೀವನ ಕ್ರಮದಲ್ಲೂ ಆದ ಉನ್ನತಿ ಸ್ವತಃ ಅಲ್ಲಿನ ಜನತೆಯ ಅನುಭವಕ್ಕೆ ಬರುತ್ತಿತ್ತು. ಹಾಗಾಗಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಗುಜರಾತ್‌ನ ಜನ ಮತ್ತೆ ಮತ್ತೆ ಚುನಾಯಿಸಿದರು. ಅಭಿವೃದ್ಧಿಯ ವೇಗದ ವಿಚಾರದಲ್ಲಿ ಗುಜರಾತದಷ್ಟೇ ವೇಗವಾಗಿ ಬೆಳೆಯುತ್ತಿರುವ ಉತ್ತರ ಪ್ರದೇಶ ಅರೆಕಾಲಿಕ ರಾಜಕಾರಣ ಮಾಡುತ್ತಿದ್ದವರ ನಿದ್ದೆಗೆಡಿಸಿದೆ.

ಉತ್ತರ ಪ್ರದೇಶದ ಆ ಯೋಗಿ ಮಾಡೆಲ್‌ ಏನು ಎಂಬುದನ್ನು ಮಾತುಗಳಲ್ಲಿ ವಿವರಿಸಬೇಕಿಲ್ಲ. ಅಂಕಿ ಅಂಶಗಳೇ ನೇರವಾಗಿ ಅಲ್ಲಿ ಆದ ಬದಲಾವಣೆ ಹಾಗೂ ವಾಸ್ತವದ ಚಿತ್ರಣಗಳನ್ನು ಕಟ್ಟಿಕೊಡುತ್ತದೆ. ಯೋಗಿ ಆದಿತ್ಯನಾಥರ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಪೊಲೀಸರು ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ 1195 ಪ್ರಕರಣಗಳಲ್ಲಿ ಅಪರಾಧಿಗಳ ಕೈಗೆ ಕೋಳ ತೊಡಿಸಿದ್ದಾರೆ. ಆ ಪ್ರಕರಣಗಳಲ್ಲಿ 1175 ಮಂದಿಗೆ ಶಿಕ್ಷೆಯೂ ಪ್ರಕಟವಾಗಿದೆ. 68,784 ಅಕ್ರಮ ನಿವೇಶನಗಳು ಮತ್ತು 79,196 ಅನಧಿಕೃತ ವಾಹನ ನಿಲುಗಡೆಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿ ಅಧಿಕೃತ ಮತ್ತು ಅನಧಿಕೃತ ಎನ್ನುವುದು ಜಾತಿಯಿಂದ ನಿರ್ಧರಿತ ಆಗುವ ವಿಷಯಗಳಲ್ಲ ಎಂಬುದು ಗಮನದಲ್ಲಿರಲಿ.

ಯೋಗಿ ಮಾಡೆಲ್‌ ಇರುವ ಉತ್ತರ ಪ್ರದೇಶದಲ್ಲಿ ಮುಸಲ್ಮಾನರು ಮುಖ್ಯ ವಾಹಿನಿಯಲ್ಲಿದ್ದಾರೆ. ಸರ್ಕಾರದ ಎಲ್ಲಾ ಯೋಜನೆಗಳೂ ಮುಸಲ್ಮಾನರೂ ಸೇರಿದಂತೆ ಎಲ್ಲಾ ವರ್ಗದ ಅರ್ಹರನ್ನು ತಲುಪುತ್ತಿದೆ. ವಿದ್ಯೆ, ಆರೋಗ್ಯದಂಥ ಮೂಲ ಸೇವೆ ಒದಗಿಸುವಿಕೆ ಹಾಗೂ ತಾರತಮ್ಯವಿಲ್ಲದೆ ಸರ್ವರಿಗೂ ಸಮಾನ ಹಕ್ಕನ್ನು ಖಾತರಿಪಡಿಸಲಾಗಿದೆ. ಮೊದಲಿನ ಸರ್ಕಾರಗಳು ತಮ್ಮ ರಾಜಕೀಯ ಅನಿವಾರ್ಯತೆಗೆ ಪೋಷಿಸುತ್ತಿದ್ದ ಕ್ರಿಮಿನಲ್‌ಗ‌ಳಿಗೆ ಯೋಗಿ ಮಾಡೆಲ್‌ನಲ್ಲಿ ಕೆಲಸವಿಲ್ಲ. ಕ್ರಿಮಿನಲ್‌ಗ‌ಳನ್ನು ಹತ್ತಿಕ್ಕುವುದಲ್ಲ, ಮಟ್ಟ ಹಾಕುವಂಥ ಕ್ಷಮತೆಯನ್ನು ಯೋಗಿ ಮಾಡೆಲ್‌ ತನ್ನ ಪೊಲೀಸರಲ್ಲಿ ತುಂಬಿದೆ. ಕ್ರಿಮಿನಲ್‌ಗ‌ಳು ತಲೆತಗ್ಗಿಸಿ ಓಡಾಡುವ ಜಾಗಗಳಲ್ಲಿ ಜನಸಾಮಾನ್ಯರು ತಲೆಯೆತ್ತಿ ನಡೆಯಬಹುದು. ವ್ಯಾಪಾರ-ವಹಿವಾಟಿಗೆ ಪೂರಕ ವಾತಾವರಣವಿರಲು ಕ್ರಿಮಿನಲ್‌ಗ‌ಳನ್ನು ಮಟ್ಟ ಹಾಕಬೇಕಾಗುವುದು ಅತ್ಯಗತ್ಯ.

ಅಕ್ರಮ ಮತ್ತು ಅಪರಾಧಗಳಲ್ಲಿ ಭಾಗಿಯಾಗುವವರ ಬೇಟೆಯೂ ಜಾತಿ ಆಧರಿತ ಕಾರ್ಯಕ್ರಮವಲ್ಲ. ಇವು ಯೋಗಿ ಮಾಡೆಲ್‌ನ ಸೂತ್ರಗಳ ಸಂಕ್ಷಿಪ್ತ ರೂಪ. ಯೋಗಿ ಮಾಡೆಲ್‌ ಎಂಬ ಪದ ಕೇಳಿದಾಗಲೆಲ್ಲ ಇದನ್ನೊಮ್ಮೆ ನೆನಪಿಸಿಕೊಳ್ಳಿ, ಸ್ವತಃ ವಿಶ್ಲೇಷಿಸಿ. ಯೋಗಿ ಮಾಡೆಲ್‌ಗ‌ೂ ಸರ್ವ ಜನಾಂಗದ ಶಾಂತಿಯ ತೋಟವೆಂಬ ಕುವೆಂಪು ಮಾಡೆಲ್‌ಗ‌ೂ ಹೆಚ್ಚಿನ ವ್ಯತ್ಯಾಸವಿಲ್ಲ.

Advertisement

ಬುಲ್ಡೋಜರ್‌ ಸಂಸ್ಕೃತಿ ನಮ್ಮದಲ್ಲ
ಬಿ.ಕೆ.ಹರಿಪ್ರಸಾದ್‌, ವಿಧಾನಪರಿಷತ್‌ ಪ್ರತಿಪಕ್ಷ ನಾಯಕರು
ಯುಪಿ ಮಾಡೆಲ್‌ ಎಂದು ಪದೆ ಪದೇ ಹೇಳುವ ಮೂಲಕ ರಾಜ್ಯ ಬಿಜೆಪಿಯರು ಕರ್ನಾಟಕದ ಮಾನ ಹರಾಜು ಹಾಕುತ್ತಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅದೇ ರಾಗ ಹಾಡುವ ಮೂಲಕ ಕರ್ನಾಟಕ ಘನತೆ, ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ.

ಇಡೀ ರಾಷ್ಟ್ರಕ್ಕೆ ಮಾದರಿ ನಮ್ಮದು. ಇವರ ಆಡಳಿತ ವೈಫ‌ಲ್ಯ ಹಾಗೂ ಸೈದ್ಧಾಂತಿಕ ನಡೆಗೆ ಕೆಲವು ಘಟನೆಗಳು ನಡೆದಿವೆ, ಅವುಗಳನ್ನು ನಿಯಂತ್ರಿಸುವ ಸಾಮರ್ಥ್ಯ ಇಲ್ಲದೆ ಉತ್ತರ ಪ್ರದೇಶದ ಆಡಳಿತ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವುದು ಮೂರ್ಖತನದ ಪರಮಾವಧಿ. ಬುಲ್ಡೋಜರ್‌ ಸಂಸ್ಕೃತಿ ನಮ್ಮದಲ್ಲ, ಒಪ್ಪಲು ಸಾಧ್ಯವೇ ಇಲ್ಲ.

ಮೂಲತಃ ಉತ್ತರಪ್ರದೇಶದಲ್ಲಿ ಈ ದೇಶದ ನೆಲದ ಕಾನೂನೇ ಇಲ್ಲ. ಸಂವಿಧಾನಕ್ಕೆ ಎಳ್ಳಷ್ಟೂ ಬೆಲೆ ಕೊಡುತ್ತಿಲ್ಲ. ಅತಿ ಹೆಚ್ಚು ಅತ್ಯಾಚಾರಗಳು ಆಗಿರುವುದು, ದೌರ್ಜನ್ಯ, ಕೊಲೆಗಳು ಆಗಿರುವುದೇ ಅಲ್ಲಿ.ಬುಲಂದ್‌ಶಹರ್‌ ಹಾಗೂ ಬಲರಾಂಪುರ ಘಟನೆಗಳೇ ಇದಕ್ಕೆ ಸಾಕ್ಷಿ. ಅಲ್ಲಿನ ಕಾನೂನು ಇಲ್ಲಿ ಅಡಾಪ್ಟ್ ಮಾಡಿಕೊಳ್ಳುತ್ತೇವೆ ಎಂದು ಹೇಳುವುದು ಕನ್ನಡಿಗರೆಲ್ಲರೂ ತಲೆತಗ್ಗಿಸಬೇಕಾದ ವಿಚಾರ.

ಕರ್ನಾಟಕದ ಇತಿಹಾಸ ಪ್ರಗತಿಯದು. ಇಲ್ಲಿನ ಸಾಧನೆ ಹಾಗೂ ಇಲ್ಲಿನ ಕಾನೂನುಗಳು ರಾಷ್ಟ್ರಕ್ಕೆ ಮಾದರಿಯಾಗಿದ್ದವು. ಬಿಜೆಪಿ ಸರ್ಕಾರ ಬಂದ ಮೇಲೆ ಇದೆಲ್ಲವೂ ರಿವರ್ಸ್‌ಗೇರ್‌ ಆಗುತ್ತಿವೆ. ತಲೆ ಬುಡ ಗೊತ್ತಿಲ್ಲದ ಯುಪಿ ಮಾಡೆಲ್‌ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಹಾಗಾದರೆ ಗುಜರಾತ್‌ ಮಾಡೆಲ್‌ ಫೈಲ್ಯೂರ್‌ ಆಗಿ ಹೋಯ್ತಾ. ಬಿಜೆಪಿಯ ಕ್ರಿಮಿನಲ್‌ ಮೆಂಟಾಲಿಟಿ ನಾಯಕರಿಗೆ ಮಾತ್ರ ಇಂತಹ ಐಡಿಯಾಗಳು ಬರಲು ಸಾಧ್ಯ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧವೇ 27 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು. ಅವರು ಮುಖ್ಯಮಂತ್ರಿಯಾದ ತಕ್ಷಣ ಮಾಡಿದ ಕೆಲಸ ಆ ಎಲ್ಲ ಪ್ರಕರಣ ವಾಪಸ್‌ ಪಡೆದದ್ದು. ರಾಜ್ಯದಲ್ಲೂ ಕ್ರಿಮಿನಲ್‌ ಮೆಂಟಾಲಿಟಿ ಇರುವವರು ಮುಖ್ಯಮಂತ್ರಿಯಾಗಬೇಕು ಎಂಬುದು ಆ ಪಕ್ಷದವರ ಇರಾದೆ ಇರಬಹುದು.
ಮೂರು ವರ್ಷದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಏನೂ ಇಲ್ಲ ಹೀಗಾಗಿ, ಯುವ ಸಮೂಹಕ್ಕೆ ಉದ್ಯೋಗ ಕೊಡದೆ ಭಾವನಾತ್ಮಕ ವಿಷಯಗಳನ್ನು ತುಂಬಿಸುವುದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಪರೇಷನ್‌ ಕಮಲದ ನಂತರ ಆಪರೇಷನ್‌ ಡೆಡ್‌ಬಾಡಿ ಮಾಡುವುದು. ಒಂದು ಜೀವಕ್ಕೆ 25 ಲಕ್ಷ ಬೆಲೆ ಕಟ್ಟುವುದು. ಸಾವಿನಲ್ಲಿ ರಾಜಕಾರಣ ಮಾಡುವುದು ಉತ್ತರ ಪ್ರದೇಶ ಮಾದರಿಯೇ.

ನಮ್ಮ ಕಾನೂನು ಅಷ್ಟು ದುರ್ಬಲವಾಗಿದೆಯಾ. ಎಸ್‌ಡಿಪಿಐ, ಪಿಎಫ್ಐ ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ, ನಿಷೇಧಿಸಿ ಬರೀ ದೂರುತ್ತಾ ರಾಜಕೀಯ ಲಾಭಕ್ಕೆ ಹವಣಿಸಿದರೆ ಹೇಗೆ. ಸುರತ್ಕಲ್‌ನ ಸಂಘ ಪರಿವಾರದ ಯುವಕನೇ ಎಸ್‌ಡಿಪಿಐ ಹಾಗೂ ಪಿಎಫ್ಐಗೆ ಯಾರ ಪೋಷಿಸುತ್ತಿದ್ದಾರೆ ಎಂಬುದು ಬಹಿರಂಗಗೊಳಿಸಿದ್ದಾರೆ. ರಾಜ್ಯದ ಮಾನ ಮಾರ್ಯದೆ ದೇಶದ ಮಟ್ಟದಲ್ಲಿ ಹರಾಜು ಹಾಕಬೇಡಿ, ಕರ್ನಾಟಕದ ಗೌರವ ಕಾಪಾಡಿ, ಕರ್ನಾಟಕಕ್ಕೆ ಉತ್ತರಪ್ರದೇಶ ಮಾಡೆಲ್‌ ಬೇಕಿಲ್ಲ. ಸಂವಿಧಾನ ಹಾಗೂ ಈ ನೆಲದ ಕಾನೂನು ಚೌಕಟ್ಟಿನಲ್ಲಿ ನಮ್ಮದೇ ಮಾಡೆಲ್‌ ಅನುಸರಿಸಿ ಸಾಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next