ಲಕ್ನೋ : ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ವಾರಗಳ ತರುವಾಯ ಇಂದು ಮಂಗಳವಾರ ಪ್ರಥಮ ಸಂಪುಟ ಸಭೆಯನ್ನು ನಡೆಸಿದ ಯೋಗಿ ಆದಿತ್ಯನಾಥ್ ಅವರು ಒಂದು ಲಕ್ಷ ರೂ. ವರೆಗಿನ ಸಣ್ಣ ರೈತರ ಕೃಷಿ ಸಾಲವನ್ನು ಮನ್ನಾ ಮಾಡಿದ್ದಾರೆ. ಇದರಿಂದ ರಾಜ್ಯದ ಸುಮಾರು 2.5 ಕೋಟಿ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಪ್ರಯೋಜನವಾಗಲಿದೆ.
ಕೃಷಿ ಸಾಲ ಮನ್ನಾಗೆ ಹಣ ಒದಗಿಸುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಸರಕಾರ 36,000 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದೇ ಸಂಪುಟ ಸಭೆಯಲ್ಲಿ ಕಾನೂನುಬಾಹಿರ ವಧಾಗೃಹಗಳಿಗೆ ನಿಷೇಧ ಹೇರುವ ಅಧ್ಯಾದೇಶಕ್ಕೆ ಹಾಗೂ ರೋಮಿಯೋ ನಿಗ್ರಹ ದಳ ರಚನೆಗೆ ಅನುಮೋದನೆ ನೀಡಲಾಗಿದೆ.
ಅಲ್ಲದೇ ರಾಜ್ಯಾದ್ಯಂತ ರೈತರ ಶೇ.100 ಗೋಧಿ ಬೆಳೆಯನ್ನು ಖರೀದಿಸುವ ಪ್ರಸ್ತಾವಕ್ಕೆ ಸಂಪುಟವು ಅನುಮೋದನೆ ನೀಡಿದೆ.
ಬುಂದೇಲ್‌ಖಂಡ್ ಪ್ರಾಂತ್ಯಕ್ಕಾಗಿ ಮೊನ್ನೆ ಭಾನುವಾರದಂದೇ ಸಿಎಂ ಆದಿತ್ಯನಾಥ್ ಅವರು 47 ಕೋಟಿ ರೂ.ಗಳನ್ನು ಪ್ರಕಟಿಸಿದ್ದರು.