ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದಲ್ಲಿನ “ಅತೀ ಉತ್ತಮ ಮುಖ್ಯಮಂತ್ರಿ’ ಎಂದು ಇತ್ತೀಚೆಗಿನ ಸರ್ವೇಯೊಂದು ಬಹಿರಂಗಪಡಿಸಿದೆ. ಅರವಿಂದ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ ಅವರು ಅನಂತರದ ಸ್ಥಾನಗಳಲ್ಲಿದ್ದಾರೆ. ಇಂಡಿಯಾ ಟುಡೇ ನಡೆಸಿರುವ “ಮೂಡ್ ಆಫ್ ದಿ ನೇಶನ್’ ಸರ್ವೇಯಲ್ಲಿ ಈ ವಿಚಾರ ತಿಳಿದುಬಂದಿದೆ.
ಸರ್ವೇ ಪ್ರಕಾರ ಶೇ.39 ಮಂದಿ ಯೋಗಿ ಅವರೇ “ಬೆಸ್ಟ್ ಸಿಎಂ’ ಎಂದು ಹೇಳಿದ್ದರೆ, ಶೇ.16 ಮಂದಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪರ ಒಲವು ತೋರಿದ್ದಾರೆ. ಜತೆಗೆ ಶೇ.7.3ರಷ್ಟು ಮಂದಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅತ್ಯುತ್ತಮ ಮುಖ್ಯಮಂತ್ರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ 30 ರಾಜ್ಯಗಳಲ್ಲಿ ಸರ್ವೇಯನ್ನು ನಡೆಸಲಾಗಿತ್ತು. ಆ ಪ್ರಕಾರ, ಯೋಗಿ ತಮ್ಮ ಕಾರ್ಯವೈಖರಿಗಳಿಂದ ಜನರಿಗೆ ಹತ್ತಿರವಾಗಿದ್ದು, ಅವರ ಜನಪ್ರಿಯತೆ ಹಿಂದಿಗಿಂತ ಹೆಚ್ಚಿದೆ. ಅಲ್ಲದೇ ಬಿಜೆಪಿ ಈಗ ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ನಡೆಸಿದರೆ 70 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಸರ್ವೇ ತಿಳಿಸಿದೆ. ಇನ್ನು 2022ರ ಆಗಸ್ಟ್ ಸರ್ವೇಗೆ ಹೋಲಿಸಿದರೆ ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜ್ರಿವಾಲ್ ಅವರ ಮೇಲೆ ಜನರ ಮೆಚ್ಚುಗೆ ಕಡಿಮೆಯಾಗಿದೆ ಎಂದು ಸರ್ವೇ ವರದಿ ತಿಳಿಸಿದೆ.