ಅಹಮದಾಬಾದ್/ಪಾಟ್ನಾ: ಗುಜರಾತ್‌ನಲ್ಲಿ ಇತ್ತೀಚೆಗೆ ಮಗುವೊಂದರ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಿಂದಾಗಿ ಹಿಂದಿ ಭಾಷಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಈಗ ಇದು ರಾಜಕೀಯ ಬಣ್ಣ ಪಡೆದುಕೊಂಡಿದೆ. ವಿವಿಧ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ.
ಸುಮಾರು 20 ಸಾವಿರ ಜನ ಗುಜರಾತ್‌ನಿಂದ ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರಗಳಿಂದ ಕೂಲಿಗಳಾಗಿ ಗುಜರಾತ್‌ಗೆ ಬಂದಿದ್ದ ಕಾರ್ಮಿಕರನ್ನು ರಕ್ಷಿಸುವ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಪರಸ್ಪರ ಚರ್ಚೆ ನಡೆಸಿದ್ದಾರೆ.
6 ಜಿಲ್ಲೆಗಳಲ್ಲಿ ಹಿಂಸಾಚಾರ: ಸೆ.28ರಂದು ಗುಜರಾತ್‌ನ ಸಬರ್‌ಕಾಂತಾದಲ್ಲಿ 14 ತಿಂಗಳ ಮಗು ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ರವೀಂದ್ರ ಸಾಹು ಎಂಬಾತನನ್ನು ಪೊಲೀಸರು ಬಂಧಿಸಿದ್ದರೂ, ಹಲವೆಡೆ ಹಿಂದಿ ಕೂಲಿಗಾರರ ಮೇಲೆ ದಾಳಿಗಳು ನಡೆದಿವೆ. ಈ ಕಿಚ್ಚು ಗಾಂಧಿನಗರ, ಅಹ್ಮದಾಬಾದ್, ಪಟಾನ್, ಸಬರ್‌ಕಾಂತಾ, ಮೆಹ್ಸಾನಾ ಜಿಲ್ಲೆಗಳಿಗೆ ವ್ಯಾಪಿಸಿದೆ.
ರುಪಾನಿ ಖಂಡನೆ: ಹಿಂಸಾಚಾರ ಖಂಡಿಸಿರುವ ಗುಜರಾತ್ ಸಿಎಂ ವಿಜಯ್ ರುಪಾನಿ, ‘ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯದ ಮೇಲೆ ದಾಳಿ ನಡೆಸುವುದು ತಪ್ಪು. ರಾಜ್ಯದ ಎಲ್ಲಾ ಕೈಗಾರಿಕಾ ವಲಯಗಳಲ್ಲಿ ಪೊಲೀಸ್ ಮೀಸಲು ಪಡೆ ಕಾವಲು ಹಾಕಲಾಗಿದ್ದು, ಕ್ಯಾಂಪ್‌ಗ್ಳನ್ನೂ ಆರಂಭಿಸಲಾಗಿದೆ. ಈವರೆಗೆ 431 ಹಲ್ಲೆಕೋರರನ್ನು ಬಂಧಿಸಲಾಗಿದೆ. 56 ಎಫ್ಐಆರ್ ದಾಖಲಾಗಿವೆ. ಹಾಗಾಗಿ, ಪಲಾಯನ ಮಾಡಿರುವವರು ಗುಜರಾತ್‌ಗೆ ಹಿಂದಿರುಗಬೇಕು” ಎಂದು ಮನವಿ ಮಾಡಿದ್ದಾರೆ.
ನಾಯಕರ ಮಾತು: ಗುಜರಾತ್‌ನಲ್ಲಿ ಏರ್ಪಟ್ಟಿರುವ ಪ್ರಕ್ಷುಬ್ಧ ಪರಿಸ್ಥಿತಿ ತಿಳಿಗೊಳಿಸುವ ಸಂಬಂಧ, ಉತ್ತರ ಪ್ರದೇಶ ಸಿಎಂ ಯೋಗಿ, ಬಿಹಾರ ಸಿಎಂ ನಿತೀಶ್, ಬಿಹಾರದವರೇ ಆದ ಕೇಂದ್ರ ಸಚಿವ ಪಾಸ್ವಾನ್ ಅವರು ರುಪಾನಿಯವರಿಗೆ ದೂರವಾಣಿ ಮೂಲಕ ಹಿಂದಿ ಭಾಷಿಗರ ರಕ್ಷಣೆಗೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮಕ್ಕೆ ರುಪಾನಿಯವರಲ್ಲಿ ಆಗ್ರಹಿಸಿದ್ದಾರೆ. ಲಕ್ನೋದಲ್ಲಿ ಪ್ರತಿಕ್ರಿಯಿಸಿರುವ ಆದಿತ್ಯನಾಥ್, ಗುಜರಾತ್‌ನಲ್ಲಿರುವ ಹಿಂದಿ ಭಾಷಿಗರಿಗೆ ರಕ್ಷಣೆ ನೀಡುವುದಾಗಿ ರುಪಾನಿ ವಾಗ್ಧಾನ ನೀಡಿದ್ದಾರೆಂದು ತಿಳಿಸಿದ್ದಾರೆ. ತಾವೂ ಸಹ ವದಂತಿಗಳಿಗೆ ಕಿವಿಗೊಡದಿರುವಂತೆ ಹಿಂದಿ ಭಾಷಿಗರಿಗೆ ಸಲಹೆ ನೀಡಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಕಾರಣ ಎಂದ ಬಿಜೆಪಿ
ಗುಜರಾತ್ ಗೃಹ ಸಚಿವ ಪ್ರದೀಪ್‌ಸಿಂಗ್ ಜಡೇಜಾ , 22 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದವರೇ ಗಲಭೆಗಳಿಗೆ ಕಾರಣ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ. ಬಿಹಾರ ಸಿಎಂ ನಿತೀಶ್ ಕೂಡ ಇದೇ ನಿಲುವನ್ನು ತಾಳಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ 2 ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಬಿಹಾರದ ಶಾಸಕ ನೀರಜ್ ಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಗುಜರಾತ್ ಶಾಸಕ ಅಲ್ಪೇಶ್ ಠಾಕೂರ್ ಅವರಿಗೆ ಬಿಹಾರದ ಉಸ್ತುವಾರಿ ವಹಿಸಿದ್ದೀರಿ. ಆದರೆ, ಠಾಕೂರ್ ಅವರದ್ದೇ ನಾಯಕತ್ವದ ಗುಜರಾತ್ ಕ್ಷತ್ರಿಯ ಠಾಕೂರ್ ಸೇನೆಯು ಗುಜರಾತ್‌ನಿಂದ ಬಿಹಾರಿಗಳನ್ನು ಹೊಡೆದೋಡಿಸುತ್ತಿದೆ ಎಂದು ಆಪಾದಿಸಿದ್ದಾರೆ. ಇದೇ ವೇಳೆ, ಗುಜರಾತ್‌ನಲ್ಲಿ ವಲಸೆ ಕಾರ್ಮಿಕರನ್ನು ಟಾರ್ಗೆಟ್ ಮಾಡುತ್ತಿರುವ ಕೃತ್ಯಗಳನ್ನು ಒಪ್ಪಿಕೊಳ್ಳಲಾಗದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.